ಸರ್ಕಾರ ತಪ್ಪನ್ನು ಒಪ್ಪಿಕೊಳ್ಳಬೇಕು- ಶಾಸಕ ಸಿ.ಸಿ. ಪಾಟೀಲ್

KannadaprabhaNewsNetwork |  
Published : Jun 06, 2025, 12:37 AM ISTUpdated : Jun 06, 2025, 12:38 AM IST
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಸಿ.ಸಿ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ತಂಡದ ಅಭಿನಂದನಾ ಕಾರ್ಯಕ್ರಮವು ದುರಂತವಾಗಿ ಪರಿಣಮಿಸಿ 11 ಜನ ಅಮಾಯಕ ಅಭಿಮಾನಿಗಳು ಕಾಲ್ತುಳಿತದಿಂದ ಸಾವನ್ನಪ್ಪಿದ್ದು, ಇದಕ್ಕೆ ನೇರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.

ಗದಗ: ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ತಂಡದ ಅಭಿನಂದನಾ ಕಾರ್ಯಕ್ರಮವು ದುರಂತವಾಗಿ ಪರಿಣಮಿಸಿ 11 ಜನ ಅಮಾಯಕ ಅಭಿಮಾನಿಗಳು ಕಾಲ್ತುಳಿತದಿಂದ ಸಾವನ್ನಪ್ಪಿದ್ದು, ಇದಕ್ಕೆ ನೇರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದುರ್ಘಟನೆಗೆ ಕಾಂಗ್ರೆಸ್ ಸರ್ಕಾರದ ರಾಜಕೀಯ ಪ್ರಚಾರದ ಹಪಾಹಪಿಯೇ ಕಾರಣ. ವಿಜೇತ ತಂಡದೊಂದಿಗೆ ಇಷ್ಟೊಂದು ಅವಸರದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಕಾರ್ಯಕ್ರಮ ಆಯೋಜನೆ ಮಾಡುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದರು.

ವಿಧಾನಸೌಧದಲ್ಲಿ ನಡೆದ ಸಭೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಮೀಸಲಾಗಿತ್ತು. ಅಲ್ಲಿ ಕೇವಲ ರಾಜಕೀಯ ನಾಯಕರ ಮಕ್ಕಳು ಕ್ರಿಕೆಟ್ ಪಟುಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದು, ಅಮಾಯಕ ಮಕ್ಕಳ ಜೀವವನ್ನು ಬಲಿ ಪಡೆದಿದ್ದಾರೆ. ಸರ್ಕಾರದ ತಪ್ಪನ್ನು ಒಪ್ಪಿಕೊಳ್ಳಬೇಕು. ಸಚಿವ ಪ್ರಿಯಾಂಕ್ ಖರ್ಗೆ, ಅವರ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಸತ್ಯ ಮಾತನಾಡಿದ್ದು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈಗಲಾದರೂ ಈ ಕುರಿತು ಸರ್ಕಾರ ಉನ್ನತ ಮಟ್ಟದ ಸಭೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

ಆರ್‌ಸಿಬಿ ಆಟಗಾರರ ಮೌನ ಸರಿಯಲ್ಲ: 11 ಅಭಿಮಾನಿಗಳು ಸಾವನ್ನಪ್ಪಿದರೂ ಆರ್‌ಸಿಬಿ ಆಟಗಾರರು ತಾವು ಉಳಿದುಕೊಂಡಿರುವ ಹೋಟೆಲ್‌ನಲ್ಲಿಯೇ ಒಂದು ಮೇಣದ ಬತ್ತಿಯನ್ನು ಬೆಳಗಿಸಿ ಅಗಲಿದ ಯುವಕರಿಗೆ ಸಂತಾಪ ಸೂಚಿಸುವ ಔದಾರ್ಯವನ್ನು ತೋರಿಲ್ಲ, ಬದಲಾಗಿ ಹೊರಗಡೆ ಸರಣಿ ಸಾವು ಸಂಭವಿಸಿದ್ದರೆ ಒಳಗಡೆ ಇರುವ ವಿಜಯೋತ್ಸವ ಆಚರಿಸಿದ್ದು ಸರಿಯಾದ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.

ಮೃತರಿಗೆ ₹50 ಲಕ್ಷ ಪರಿಹಾರ ಕೊಡಿ:ಬುಧವಾರ ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಆರ್‌ಸಿಬಿಯವರೇ ₹50 ಲಕ್ಷ ಪರಿಹಾರ ಕೊಡಬೇಕು. ಈ ಕುರಿತು ಕೂಡಲೇ ನ್ಯಾಯಾಂಗ ಅಥವಾ ಸಿಬಿಐ ತನಿಖೆಯಾಗಬೇಕು. ಅಮಾಯಕರ ಜೀವವನ್ನು ಬಲಿಪಡೆಯುವ ಸರ್ಕಾರದ ಆತುರದ ನಿರ್ಧಾರದ ಹಿಂದೆ ಯಾರಿದ್ದಾರೆ ಎನ್ನುವುದು ಸ್ಪಷ್ಟವಾಗಬೇಕು ಎಂದರು.

ರಾಜ್ಯದಲ್ಲಿ ಆರ್‌ಸಿಬಿ ಸಾಕಷ್ಟು ಪ್ಯಾನ್ ಫಾಲೋಯಿಂಗ್ ಇದೆ, ಅದನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳಲು ಸರ್ಕಾರ ಅವಸರದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಪೊಲೀಸ್ ಅಧಿಕಾರಿಗಳು ಬೇಡ ಎಂದರೂ ಯಾರು ಈ ಕಾರ್ಯಕ್ರಮಕ್ಕೆ ಯಾಕೆ ಅನುಮತಿ ಕೊಟ್ಟಿದ್ದಾರೆ ಎಂದರೆ ಆರ್‌ಸಿಬಿ ಅಭಿಮಾನಿಗಳಿಗೆ ಒಳ್ಳೆಯರಾಗುವ ಪ್ರಯತ್ನ ಇದಾಗಿದೆ ಎಂದು ಸಿ.ಸಿ.ಪಾಟೀಲ ಲೇವಡಿ ಮಾಡಿದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ