ಕನ್ನಡಪ್ರಭ ವಾರ್ತೆ ಬಳ್ಳಾರಿ
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಗಳು ನಡೆಯದೇ ಮತ್ತು ಲೋಕಾಯುಕ್ತರು ದಾಳಿ ನಡೆಸಿದ ನಂತರ ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ತಕ್ಷಣವೇ ಜನರ ನೆರವಿಗೆ ಬರಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಆಗ್ರಹಿಸಿದ್ದಾರೆ.ವಿಧಾನಪರಿಷತ್ತಿನಲ್ಲಿ ಚುಕ್ಕೆ ಪ್ರಶ್ನೆ ಕೇಳಿದ ಬಳ್ಳಾರಿ-ವಿಜಯನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ. ಅಲ್ಲದೇ, ಇಬ್ಬರು ಶಾಸಕರು ಪ್ರಾಧಿಕಾರದ ಅಧ್ಯಕ್ಷರ ವಿರುದ್ಧ ಕರ್ತವ್ಯಲೋಪ-ಭ್ರಷ್ಟಾಚಾರ ಆರೋಪ ಮಾಡಿ ಸರ್ಕಾರಕ್ಕೆ ಪತ್ರ ಬರೆದು, ತನಿಖೆ ನಡೆಸಲು ಒತ್ತಾಯಿಸಿದ್ದರು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್. ಆಂಜಿನೇಯಲು ಅವರ ವಿರುದ್ಧ ಇಬ್ಬರು ಶಾಸಕರು ನಡೆಸಿದ್ದ ಆರೋಪಗಳ ಕುರಿತು ತನಿಖೆಯೂ ನಡೆಯಿತು. 2024 ರ ಜುಲೈ 8ರಂದು ಕೊನೆಯ ಸಭೆ ನಡೆದಿದೆ. ಆ ನಂತರ ಸಭೆಯು ನಡೆಯದ ಕಾರಣ ಹೊಸ ಲೇಔಟ್‍ಗಳ ಪರವಾನಿಗೆ, ಸೈಟುಗಳ ಮಾರಾಟ-ಖರೀದಿ ಅಥವಾ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ.ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಳ್ಳಾರಿಯ ಅಧಿದೇವತೆ ಶ್ರೀಕನಕ ದುರ್ಗಮ್ಮ ಗುಡಿಯ ಸಮೀಪದ ರೈಲ್ವೆ ಅಂಡರ್ ಬ್ರಿಡ್ಜ್ ವಿಸ್ತರಿಸಲು ಐದು ವರ್ಷಗಳಿಂದಾಗಿಲ್ಲ. ಈ ಕಾಮಗಾರಿಗಾಗಿ ₹8.84 ಕೋಟಿಯನ್ನು 2022 ನವೆಂಬರ್‌ನನಲ್ಲಿ ರೈಲ್ವೆಗೆ ಪಾವತಿಸಲಾಗಿದೆ. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಈವರೆಗೂ ರಸ್ತೆ ವಿಸ್ತರಣೆಗೆ ಭೂಮಿ ಗುರುತಿಸಿ, ನೀಡುವಲ್ಲಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಏಕೆ? ಎಂದು ಪ್ರಶ್ನೆ ಮಾಡಿದರು.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ಅವರು, ಪ್ರಾಧಿಕಾರದ ಅಧ್ಯಕ್ಷರೇ ಪ್ರತೀ ತಿಂಗಳು ಸಭೆ ಆಯೋಜಿಸಬೇಕಿದೆ. ಲೋಕಾಯುಕ್ತರು ದಾಳಿ ನಡೆಸಿದಾಗ ಆರು ಅಧಿಕಾರಿಗಳು ಸಿಕ್ಕಿಕೊಂಡು, ಬಂಧನಕ್ಕೊಳಗಾಗಿರುವ ಕಾರಣ ನಾನೇ, ವೈಯಕ್ತಿಕವಾಗಿ ಗಮನ ಹರಿಸಿ ಬುಡಾ ಮತ್ತು ಮುಡಾ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ನಿರ್ಧಾರಗಳನ್ನು ಕೈಗೊಳ್ಳುತ್ತಿರುವೆ. ವಿಧಾನಸಭೆಯ ಅಧಿವೇಶನ ಪೂರ್ಣಗೊಂಡ ನಂತರ ಬುಡಾ ಸಮಸ್ಯೆಗೆ ಪರಿಹಾರ ಕೈಗೊಳ್ಳಲು ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.