ಧಾರವಾಡ:
ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾ ಸಂಸ್ಥೆ ಒಕ್ಕೊರಲ ನಿರ್ಣಯಗಳಿವು. ಬುಧವಾರ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಉಕ ಭಾಗದ ಸಂಘ-ಸಂಸ್ಥೆಗಳ ದುಂಡು ಮೇಜಿನ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಈ ಎರಡೂ ಕಾರ್ಯಗಳನ್ನು ಶೀಘ್ರವೇ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಉಕ ಸಂಘ-ಸಂಸ್ಥೆಗಳ ಮಹಾ ಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ, ಈ ಭಾಗದ ಅಭಿವೃದ್ಧಿಗೆ ನಮ್ಮ ಸಂಘ ಕೆಲಸ ಮಾಡುತ್ತಿದೆ. ಈ ಭಾಗದ ನೆಲ, ಜಲ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಹತ್ತಾರು ಕೆಲಸಗಳು ಆಗಬೇಕಿದ್ದು ಸರ್ಕಾರ ಗಮನ ಹರಿಸಬೇಕು ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ ಮಾತನಾಡಿ, ಪ್ರಾದೇಶಿಕ ಅಸಮತೋಲನ ನಿವಾರಣೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅದಕ್ಕಾಗಿ ಉಕ ಭಾಗದ ಸಂಘ-ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರುವುದು ಅನಿವಾರ್ಯ ಎಂದು ಹೇಳಿದರು.
ಉಕ ಹೋರಾಟ ಸಮಿತಿ ಕಾರ್ಯದರ್ಶಿ ನಾಗೇಶ ಗೋಳಶೆಟ್ಟಿ ಮಾತನಾಡಿ, ಸಾಕಷ್ಟು ವರ್ಷಗಳಿಂದ ಹೋರಾಟ ಮಾಡಿದರೂ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಮುಂದುವರಿದಿದೆ. ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದರೆ ಪ್ರತ್ಯೇಕ ರಾಜ್ಯದ ಕೂಗು ಬಲವಾಗುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಪಕ್ಷಿ ಮಿತ್ರ ಸಂಘಟನೆಯ ಪ್ರಕಾಶ ಗೌಡರ, ಕಾಳಿ ಹೋರಾಟ ಸಮಿತಿ ಶ್ರೀಶೈಲಗೌಡ ಕಮತರ, ಹಿರಿಯ ಮಲ್ಲಕಂಭ ಪಟು ಸಿದ್ಧಾರೂಢ ಹೂಗಾರ, ಸಂಸ್ಥೆ ಪದಾಧಿಕಾರಿಗಳಾದ ಬಸಯ್ಯ ನಂದಿಕೋಲ, ಶಾಂತೇಶ ಮಠ, ದೇವರಾಜ್ ಕವಳಿಕಾಯಿ ಸೇರಿದಂತೆ ಇತರರು ಇದ್ದರು.ಉತ್ತರ ಕರ್ನಾಟಕ ಮಲತಾಯಿ ಧೋರಣೆ ಕೇವಲ ಅಭಿವೃದ್ಧಿಗೆ ಅಷ್ಟೇ ಅಲ್ಲ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದುವರಿದಿದೆ. ಇದು ಕೊನೆಗೊಳ್ಳಬೇಕಾದರೆ ಈ ಭಾಗದ ಜನರು ಸರ್ಕಾರದ ಕಿವಿ ಹಿಂಡಬೇಕು. ಈ ಭಾಗದ ರಾಜಕಾರಣಿಗಳು ತಮ್ಮ ಬದ್ಧತೆ ಪ್ರದರ್ಶಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಆಗ್ರಹಿಸಿದರು.