ರೈತರು, ಕಾರ್ಮಿಕರ ಏಳಿಗೆಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿ

KannadaprabhaNewsNetwork |  
Published : Feb 13, 2026, 01:30 AM IST
ಪೋಟೋ೧೨ಸಿಎಲ್‌ಕೆ೧ಎ ವಿವಿಧ ಸಂಘಟನೆಗಳು ಕರೆದಿದ್ದ ಚಳ್ಳಕೆರೆ ಬಂದ್ ಹಿನ್ನೆಲೆಯಲ್ಲಿ ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ವಿವಿಧ ಸಂಘಟನೆಗಳು ಕರೆದಿದ್ದ ಚಳ್ಳಕೆರೆ ಬಂದ್ ಹಿನ್ನೆಲೆಯಲ್ಲಿ ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಅಷ್ಟೇ ಅಲ್ಲದೆ ಕಾರ್ಮಿಕರು, ಕಡು ಬಡವರು, ಯುವಕರು ಹಾಗೂ ಮಹಿಳೆಯರನ್ನು ಶೋಷಣೆ ಮಾಡುವತ್ತ ಮುನ್ನಡೆದಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಯುವಕರಿಗೆ ಎಲ್ಲಾ ರೀತಿಯ ಬುದ್ಧಿ ಕೌಶಲ್ಯವಿದ್ದರೂ ಕೆಲಸ ಸಿಗುತ್ತಿಲ್ಲ, ಪ್ರಜ್ಞಾವಂತ ಮಹಿಳೆಯರು ಎಲ್ಲಾ ವರ್ಗದಲ್ಲಿ ಮುನ್ನಡೆ ಸಾಧಿಸಿದ್ದರೂ ಅವರ ಏಳಿಗೆಗೆ ಸರ್ಕಾರಗಳು ಪ್ರಾಮಾಣಿಕ ಯತ್ನನಡೆಸಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ರೈತ ಸಂಘ, ಕಾರ್ಮಿಕ ಸಂಘಟನೆ, ಕೆಆರ್‌ಎಸ್, ಕನ್ನಡಪರ ಸಂಘಟನೆ, ದಲಿತ ಸಂಘಟನೆ, ಬಿಎಸ್‌ಪಿ ಸೇರಿದಂತೆ ಹಲವಾರು ಪಕ್ಷದ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಚಳ್ಳಕೆರೆ ಬಂದ್ ಕಾರ್ಯಕ್ರಮದ ನಿಮಿತ್ತ ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯ ಲಕ್ಷಾಂತರ ರೈತರ ಐದು ದಶಕಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೊಳಿಸದೆ ನಿರ್ಲಕ್ಷ್ಯ ವಹಿಸುವ ಮೂಲಕ ಅನ್ನದಾತನನ್ನು ಅನಾಥನನ್ನಾಗಿ ಮಾಡಲು ಹೊರಟಿದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ರಾಜ್ಯವನ್ನಾಳುತ್ತಿರುವ ರಾಜ್ಯ ಸರ್ಕಾರ ರೈತರಿಗೆ ಬೆಳೆ ವಿಮೆ, ಬೆಳೆ ನಷ್ಟವೂ ಸೇರಿದಂತೆ ಹಲವಾರು ವಿಧಾನಗಳಲ್ಲಿ ರೈತ ಸಮುದಾಯವನ್ನು ಕಡೆಗಣಿಸಿದೆ. ಕೆಲವು ಸಂದರ್ಭದಲ್ಲಿ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕಾರ್ಯವನ್ನು ಮಾಡಲಾಗುತ್ತಿದೆ, ರೈತ ಮುಷ್ಕರವೆಂದರೆ ಅನುಮತಿ ನೀಡಲು ಪೊಲೀಸರು ಹಿಂದೇಟು ಹಾಕುವ ವಾತಾವರಣವನ್ನು ಸರ್ಕಾರವೇ ನಿರ್ಮಾಣ ಮಾಡಿದೆ. ಒಂದು ರೀತಿ ರೈತರ ಏಕಾಂಗಿಯಾಗಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಿದೆ. ಆದರೆ, ರೈತರ ಪುಣ್ಯವೆನ್ನುವಂತೆ ಇಂದು ಹಲವಾರು ಪ್ರಗತಿಪರ ಸಂಘಟನೆಗಳು ಭದ್ರಾ ಮೇಲ್ದಂಡೆ ಯೋಜನೆ ಜಾರಿ ವಿಚಾರದಲ್ಲಿ ತಮ್ಮ ಬೆಂಬಲವನ್ನು ನೀಡಿ ರೈತ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ.

ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯನಿರ್ವಾಹಕ ನಗರಂಗೆರೆ ಸಿ.ಮಹೇಶ್ ಮಾತನಾಡಿ, ಎಲ್ಲಾ ರಂಗದಲ್ಲೂ ವಿಫಲವಾಗಿರುವ ಆಡಳಿತ ಪಕ್ಷದ ನಡೆಯ ಬಗ್ಗೆ ಜನ ಈಗಾಗಲೇ ರೋಸಿದ್ದಾರೆ. ಕೇವಲ ಗ್ಯಾರಂಟಿಗಳನ್ನು ನೀಡುವ ನೆಪದಲ್ಲಿ ಬೇರೆ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಾ ಬಂದಿದೆ. ಎಲ್ಲೇ ಹೋರಾಟ ನಡೆದರೂ ಅಧಿಕಾರಿಗಳು ಮಾತ್ರ ಮನವಿ ಪಡೆದು ಸುಳ್ಳು ಭರವಸೆ ನೀಡುತ್ತಾರೆ. ಕಳೆದ ಒಂದು ವರ್ಷದಿಂದ ಕೆಆರ್‌ಎಸ್ ಪಕ್ಷ ನಡೆಸಿದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ಸರ್ಕಾರ ಮೇಲೆ ಜನರಿಗೆ ಯಾವುದೇ ವಿಶ್ವಾಸವಿಲ್ಲ, ಹೋರಾಟ ನಡೆಸಿದ ಹೋರಾಟಗಾರರು ಬೀದಿ ಪಾಲಾಗುತ್ತಿದ್ದಾರೆ. ಆಡಳಿತದ ಪಕ್ಷದ ಮುಖಂಡರು ಕೇವಲ ಅಧಿಕಾರ ಉಳಿಸಿಕೊಳ್ಳುವತ್ತ ಗಮನ ನೀಡುತ್ತಿದ್ಧಾರೆ. ಬೀದಿಗಿಳಿದು ಹೋರಾಟ ನಡೆಸಿದರೂ ಗಮನ ಹರಿಸುತ್ತಿಲ್ಲ. ಇಂತಹ ಬಂಡ ಸರ್ಕಾರದಿಂದ ನಾವು ಒಳ್ಳೆಯದ್ದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಾದರೂ ಸಾರ್ವಜನಿಕರು ಸರ್ಕಾರಕ್ಕೆ ಪಾಠಕಲಿಸುವ ಬಗ್ಗೆ ಚಿಂತನೆ ನಡೆಸಬೇಕೆಂದರು.

ಸಿಐಟಿಯು ಸಂಘಟನೆಯ ಜಿಲ್ಲಾ ಸಂಚಾಲಕ ಟಿ.ತಿಪ್ಫೇಸ್ವಾಮಿ ಮಾತನಾಡಿದರು.

ನೆಹರೂ ವೃತ್ತದಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಗ್ರೇಡ್-೨ತಹಸೀಲ್ದಾರ್ ಮುನಿ ವೆಂಕಟಪ್ಪನವರಿಗೆ ಮುಖ್ಯಮಂತ್ರಿಗೆ ನೀಡಿದ ಮನವಿಯನ್ನು ನೀಡಿದರು. ಮನವಿ ಸ್ವೀಕರಿಸಿದವರು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳಿಸುವ ಭರವಸೆ ನೀಡಿದರು. ಮುಷ್ಕರ ಮುಗಿದ ನಂತರ ತಹಸೀಲ್ದಾರ್ ರೇಹಾನ್‌ ಪಾಷ, ಇಒ ಎಚ್.ಶಶಿಧರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳನ್ನು ಆಲಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕುಅಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ಬೊಮ್ಮಣ್ಣ, ತಿಪ್ಪೇಸ್ವಾಮಿಗೌಡ, ಜಯಣ್ಣ, ನಾಗರಾಜ, ಸಣ್ಣಪಾಲಯ್ಯ, ಸಿಐಟಿಯು ನಿಂಗಣ್ಣ, ಮಹೇಶ್, ಮಾರುತಿ, ಆರ್.ಬಸವರಾಜು, ಜೆ.ಎಸ್.ರ‍್ರಿಸ್ವಾಮಿ, ಬೊಮ್ಮಣ್ಣ, ಓಬಯ್ಯ, ಕೆ.ಜಯಣ್ಣ, ಅಜ್ಜಪ್ಪ, ಉಪ್ಪಾರಹಟ್ಟಿತಿಪ್ಪೇಸ್ವಾಮಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
ಸಾರ್ವತ್ರಿಕ ಮುಷ್ಕರ: ತಿಪಟೂರಿನಲ್ಲಿ ಸ್ವಯಂ ಪ್ರೇರಿತ ಬಂದ್