ಕಾರವಾರ: ಬಾಣಂತಿಯರ ಸಾವು ತಡೆಯದ ಈ ಸರ್ಕಾರ ತೊಲಗಲಿ. ಮಹಿಳೆಯರ ಜೀವ ರಕ್ಷಿಸಲು ಆಗದೆ ಇದ್ದರೆ ರಾಜೀನಾಮೆ ನೀಡಿ ಹೋಗಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಗುಡುಗಿದರು.
ಬಾಣಂತಿಯರ ಸಾವಿನ ವಿರುದ್ಧ ಬಿಜೆಪಿ ಬಳ್ಳಾರಿ ಜಿಲ್ಲಾಸ್ಪತ್ರೆ ಎದುರು ಶನಿವಾರ ನಡೆಸಿದ ಉಪವಾಸ ಸತ್ಯಾಗ್ರಹ, ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಸರ್ಕಾರ ಮಹಿಳೆಯರಿಗೆ ಎರಡು ಸಾವಿರ ರುಪಾಯಿ ಕೊಟ್ಟಂತೆ ಮಾಡಿ, ಅವರ ಜೀವವನ್ನು ಕಿತ್ತುಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಹಿಳೆಯರ ಜೀವಕ್ಕೆ ಗ್ಯಾರಂಟಿ ಕೊಡಿ. ಬಾಣಂತಿಯರನ್ನು ರಕ್ಷಿಸಿ. ನಿಷೇಧಿತ ಔಷಧಿಗಳನ್ನು ನೀಡಿ ಅಮಾಯಕ ಬಾಣಂತಿಯರ ಸಾವಿಗೆ ಈ ಸರ್ಕಾರ ಕಾರಣವಾಗಿದೆ. ಯಾರೆಲ್ಲ ಈ ದುರಂತಕ್ಕೆ ಕಾರಣರಾಗಿದ್ದಾರೋ ಅವರೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಒತ್ತಾಯಿಸಿದರು.ಇಷ್ಟೊಂದು ದೊಡ್ಡ ದುರಂತ ಇಲ್ಲಿ ಉಂಟಾಗಿದ್ದರೂ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಇಲ್ಲಿಗೆ ಭೇಟಿ ನೀಡಿಲ್ಲ. ಆದರೆ ತಮ್ಮ ಸರ್ಕಾರದ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿಸುತ್ತಾರೆ. ಈ ಸರ್ಕಾರದಿಂದ ಮಹಿಳೆಯರ ಜೀವಕ್ಕೆ ರಕ್ಷಣೆಯೇ ಇಲ್ಲ. ನಾನೊಬ್ಬ ಮಹಿಳೆಯಾಗಿ ತಾಯಂದಿರ ನೋವು ನನಗೆ ಗೊತ್ತು. ಆದರೆ ಇಂತಹ ಬೇಜವಾಬ್ದಾರಿ ಸರ್ಕಾರ, ಅಧಿಕಾರಿಗಳು ಮಹಿಳೆಯರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಣಂತಿಯರ ಯೋಗಕ್ಷೇಮ ವಿಚಾರಿಸಿದ ರೂಪಾಲಿ ನಾಯ್ಕ: ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಹಾಗೂ ಎಂಎಲ್‌ಸಿ ಹೇಮಲತಾ ನಾಯಕ ಮತ್ತಿತರರೊಂದಿಗೆ ಅವರೊಂದಿಗೆ ಭೇಟಿ ನೀಡಿದ ರೂಪಾಲಿ ಎಸ್. ನಾಯ್ಕ ಅಲ್ಲಿ ದಾಖಲಾದ ರೋಗಿಗಳು, ಬಾಣಂತಿಯರು ಹಾಗೂ ಗರ್ಭಿಣಿಯರನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದರು. ಆಸ್ಪತ್ರೆಯ ಅವ್ಯವಸ್ಥೆ ಸುಧಾರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ ಅವರು, ರೋಗಿಗಳಿಗೆ ಧೈರ್ಯ ತುಂಬಿದರು.ಬಳ್ಳಾರಿಯ ಆರೋಗ್ಯ ಇಲಾಖೆ ಕಚೇರಿಗೆ ಪಕ್ಷದ ಮಹಿಳಾ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿದ ರೂಪಾಲಿ ಎಸ್. ನಾಯ್ಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಪ್ರಭಾರಿ ಡೀನ್ ಜತೆ ಮಾತುಕತೆ ನಡೆಸಿ, ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಿದರು.ಮಾಜಿ ಶಾಸಕರಾದ ಬಿ. ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ವೈ.ಎಂ. ಸತೀಶ್, ಹೇಮಲತಾ ನಾಯಕ್, ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್, ಮಾಜಿ ಶಾಸಕರಾದ ಜಿ. ಸೋಮಶೇಖರ್ ರೆಡ್ಡಿ ಮತ್ತು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ, ರಾಜ್ಯ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು, ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು. ಬಲವಾದ ಧ್ವನಿ: ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರೊಂದಿಗೆ ರೂಪಾಲಿ ಎಸ್. ನಾಯ್ಕ ಆಸ್ಪತ್ರೆ, ಮೆಡಿಕಲ್ ಕಾಲೇಜ ಹಾಗೂ ಆರೋಗ್ಯ ಇಲಾಖೆಗೆ ತೆರಳಿದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಹಾಗೂ ಹೇಮಲತಾ ನಾಯಕ್ ಕೂಡ ಬಾಣಂತಿಯರ ಸಾವಿನ ವಿರುದ್ಧ ಬಲವಾಗಿ ಧ್ವನಿ ಎತ್ತಿದರು.