ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯ ಸರಕಾರವು ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್)ನಿಂದ ಹಾಲು ಮತ್ತು ಮೊಸರಿನ ದರವನ್ನು ಲೀಟರಿಗೆ ೪ ರು. ಹೆಚ್ಚಿಸಿದ್ದು, ಸರ್ಕಾರದ ಈ ನಿರ್ಧಾರದಿಂದ ಒಕ್ಕೂಟಗಳಿಗೆ ಭಾರಿ ನಷ್ಟವಾಗಲಿದೆ. ಈ ನಷ್ಟವನ್ನು ರಾಜ್ಯ ಸರ್ಕಾರ ತುಂಬಿಕೊಡುತ್ತದೆಯೇ? ಇದಕ್ಕೆ ಯಾರು ಜವಾಬ್ದಾರರು? ಒಕ್ಕೂಟದಲ್ಲಿ ಇರುವ ಲಾಭದ ಹಣ ಮುಗಿಯುವರೆಗೂ ಸಿಎಂ ಆದೇಶ ಪಾಲನೆ ಮಾಡಲಾಗುವುದು ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾದ ಎಚ್.ಡಿ. ರೇವಣ್ಣ ದರ ಏರಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.ನಗರದ ಡೇರಿ ವೃತ್ತದ ಬಳಿ ಇರುವ ಹಾಸನ ಹಾಲು ಒಕ್ಕೂಟದ ಕಚೇರಿಯ ಸಭಾಂಗಣದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿ, ಹಾಲಿನ ದರ ಹೆಚ್ಚಿಸಿ ಎಂದು ನಿಮಗೆ ಯಾವ ಒಕ್ಕೂಟದವರು ಕೇಳಿದರು? ನಮ್ಮ ಒಕ್ಕೂಟದಲ್ಲಿ ಪ್ರತಿದಿನ ೧೨,೫೮,೦೦೦ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಆದರೆ, ಕೇವಲ ೧,೯೮,೦೦೦ ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದೆ. ಇದರ ಜೊತೆಗೆ ೧,೨೦,೦೦೦ ಲೀಟರ್ ಮೊಸರು ಮಾರಾಟವಾಗುತ್ತಿದೆ. ಸಂಗ್ರಹವಾಗುವ ಹಾಲಿನಲ್ಲಿ ಪ್ರತಿದಿನ ೯,೪೦,೦೦೦ ಲೀಟರ್ ಹಾಲು ಉಳಿಯುತ್ತಿದೆ. ಮಳೆಗಾಲದಲ್ಲಿ ಈ ಪ್ರಮಾಣ ಇನ್ನಷ್ಟು ಏರಿಕೆಯಾಗುತ್ತದೆ. ಇದರಿಂದ ತಿಂಗಳಿಗೆ ೯ ಕೋಟಿ ರುಪಾಯಿ ನಷ್ಟವಾಗುತ್ತದೆ. ಹಾಸನ ಹಾಲು ಒಕ್ಕೂಟದಲ್ಲಿ ಐದೂವರೆಯಿಂದ ಆರು ಕೋಟಿ ರು. ಲಾಭದ ಹಣವಿದ್ದು, ಈ ದುಡ್ಡು ಮುಗಿಯುವವರೆಗೂ ಮುಖ್ಯಮಂತ್ರಿ ಆದೇಶ ಪಾಲಿಸುತ್ತೇವೆ. ಹಾಲಿನ ದರದ ವಸ್ತು ಸ್ಥಿತಿ ಏನಿದೆ ನಮ್ಮ ಬೋರ್ಡಿನಲ್ಲಿ ಸಭೆ ಮಾಡಿ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಇಲ್ಲಿನ ಒಕ್ಕೂಟದ ಸ್ಥಿತಿ ತಿಳಿಸಲಾಗಿದೆ ಎಂದರು.
ತಿಂಗಳಿಗೆ 9 ಕೋಟಿ ರು. ನಷ್ಟ:ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟು ೪ ರು. ಹೆಚ್ಚಳ ಮಾಡಲಾಗಿದೆ. ಇದೇ ರೀತಿ ಮುಂದುವರಿದರೆ ತಿಂಗಳಿಗೆ ೯ ಕೋಟಿ ರು. ನಷ್ಟವಾಗಲಿದೆ. ಆದರೆ ಈ ಹೆಚ್ಚಳದಿಂದ ಉಂಟಾಗುವ ನಷ್ಟಕ್ಕೆ ಯಾರು ಜವಾಬ್ದಾರರು ಎಂದು ಅವರು ಪ್ರಶ್ನಿಸಿದರು. ೩ ರು. ಹೆಚ್ಚಿಸಿ, ೨.೫ ರು. ರೈತರಿಗೆ ನೀಡೋಣ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ, ೪ ರು. ಹೆಚ್ಚಳ ಮಾಡಿದವರು ಯಾರು? ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿದಿನ ೩೬ ಲಕ್ಷ ರು. ನಷ್ಟವಾಗುತ್ತಿದ್ದು, ಈ ಬಗ್ಗೆ ಜಿಲ್ಲಾ ಮಂತ್ರಿಗಳು ಸೇರಿದಂತೆ, ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೂ ತರಲಾಗುವುದು. ಈ ರೀತಿ ಮುಂದುವರೆದರೆ ಸಂಸ್ಥೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.
ಒಕ್ಕೂಟ ಹಾಳಾಗುತ್ತದೆ:ಸರ್ಕಾರ ರೈತರಿಗೆ ಕೇವಲ ೨ ತಿಂಗಳು ಹೆಚ್ಚುವರಿ ಹಣ ನೀಡುತ್ತಾರೆ, ನಂತರ ನಿಲ್ಲಿಸುತ್ತಾರೆ. ಮೈಸೂರು ೫ ಕೋಟಿ, ಮಂಡ್ಯ ೭ ಕೋಟಿ, ಶಿವಮೊಗ್ಗ ಒಕ್ಕೂಟ ೪.೫ ಕೋಟಿ ನಷ್ಟ ಅನುಭವಿಸುತ್ತಿವೆ ಎಂದು ಅಂಕಿ ಅಂಶ ನೀಡಿದರು.
ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭವಲ್ಲ, ಕಟ್ಟಿರುವುದನ್ನು ಉಳಿಸಿಕೊಳ್ಳಬೇಕು ಎಂದು ತಮ್ಮ ಆತಂಕವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ನಷ್ಟವಾದರೆ ಯಾರು ಜವಾಬ್ದಾರಿ ಹೊರುತ್ತಾರೆ? ಕೆಎಂಎಫ್ ಅಥವಾ ಸರ್ಕಾರ ನಷ್ಟವನ್ನು ಭರಿಸುತ್ತವೆಯೇ? ಎಂದು ಅವರು ಪ್ರಶ್ನಿಸಿದರು. ಕೆಲವರು ಮುಖ್ಯಮಂತ್ರಿಗಳ ಹೇಳಿಕೆಯನ್ನು ಉಲ್ಲೇಖಿಸಿ ೪ ರೂಪಾಯಿ ದರ ಹೆಚ್ಚಿಸಲು ಒತ್ತಡ ಹೇರಿದ್ದಾರೆ. ತಿಂಗಳಿಗೆ ೯ ಕೋಟಿ ರುಪಾಯಿ ನಷ್ಟದಲ್ಲಿ ಹಾಲು ಮಾರಾಟ ಮಾಡುವುದು ಸಾಧ್ಯವೇ? ಈ ವಸ್ತುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಈ ಬಗ್ಗೆ ಮುಖ್ಯಮಂತ್ರಿ, ಸರ್ಕಾರದ ಕಾರ್ಯದರ್ಶಿ ಹಾಗೂ ಕೆಎಂಎಫ್‌ಗೆ ಎರಡು ಬಾರಿ ಪತ್ರ ಬರೆದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.