ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಸದ್ಯ 70-80 ಜನ ಶಾಸಕರು ಅಸಮಾಧಾನಿತರಾಗಿದ್ದಾರೆ. ಎರಡು ವರ್ಷ ಆಯ್ತು ಅಧಿಕಾರಕ್ಕೆ ಬಂದು. ಗ್ರಾಮಗಳಲ್ಲಿ ಒಂದೇ ಒಂದು ಕಾಮಗಾರಿ ಆಗಿಲ್ಲ. ಹಳ್ಳಿ ಜನ ಛೀಮಾರಿ ಹಾಕುತ್ತಿದ್ದಾರೆ ಎಂದು ಹೈಕಮಾಂಡ್ ನಾಯಕರ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರೆ. 52 ಜನ ನಾಯಕರು ಪತ್ರವನ್ನೂ ಕೊಟ್ಟಿದ್ದಾರೆ. ಬಡವರಿಗೆ ಮನೆ ಕೊಡೋಕೆ ಆಗ್ತಿಲ್ಲ. ಅವರಿಗೆ ಮನೆ ಕೊಡಬೇಕೆಂದರೆ ₹25000 ದುಡ್ಡು ಕೇಳಲಾಗುತ್ತಿದೆ ಎಂದು ಸುರ್ಜೆವಾಲಾ ಹಾಗೂ ಖರ್ಗೆ ಎದುರು ಹೇಳುತ್ತಿದ್ದಾರೆ. ಸುರ್ಜೆವಾಲಾ ಅವರು ತೇಪೆ ಹಚ್ಚುವ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ತೇಪೆ ಹಚ್ಚುವುದು ಅಂದರೆ ಹಳೆಯ ಬಟ್ಟೆಗಳಿಗೆ ಹೊಲಿಗೆ ಹಾಕಿದಂತೆ. ಆ ಹೊಲಿಗೆ ಬಹಳ ದಿನ ಉಳಿಯಲ್ಲ. ಬಟ್ಟೆ ಜಿಗಿಸತ್ತ ಮೇಲೆ ಹೊಲಿಗೆ ಬಿಚ್ಚಿಹೋಗುತ್ತೆ ಎಂದು ಲೇವಡಿ ಮಾಡಿದರು.
ನನ್ನ ಮಂತ್ರಿ ಮಾಡಿಲ್ಲ. ನಿನ್ನ ಮಂತ್ರಿ ಮಾಡಿಲ್ಲ ಎಂದು ಈ ಸರ್ಕಾರ ಇದ್ದರೆ ಎಷ್ಟು, ಹೋದ್ರೆ ಎಷ್ಟು ಎಂದು ರಾಯರಡ್ಡಿ, ಬಿ.ಆರ್. ಪಾಟೀಲ, ದೇಶಪಾಂಡೆ ಅಂತಹ ಹಿರಿಯರು ಹೇಳುತ್ತಿದ್ದಾರೆ. ಸರ್ಕಾರದಲ್ಲಿ ನಾಲ್ಕು ಗುಂಪುಗಳಾಗಿ ಕಚ್ಚಾಡುತ್ತಿದ್ದಾರೆ. ಅಲ್ಪಸಂಖ್ಯಾತ, ದಲಿತ, ಒಕ್ಕಲಿಗ, ಲಿಂಗಾಯತ ಎಂದು ಸತ್ತ ದನ ತಿನ್ನಲು ರಣಹದ್ದುಗಳಂತೆ ಕಚ್ಚಾಡುತ್ತಿದ್ದಾರೆ. ಇದನ್ನು ನೋಡಿದರೆ ಈ ಸರ್ಕಾರ ಖಂಡಿತವಾಗಿಯೂ ಡಿಸೆಂಬರ್ 31 ದಾಟುವುದಿಲ್ಲ ಎಂದು ಪುನರುಚ್ಚರಿಸಿದರು.ಕಾಂಗ್ರೆಸ್‌ನ ಒಡಕಿನ ಲಾಭವನ್ನ ಬಿಜೆಪಿ ಪಡೆದುಕೊಳ್ಳುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಸೆಂಬರ್ 31ರ ನಂತ್ರ ಹೇಳುತ್ತೇನೆ. ನಾವು ಯಾವುದೇ ಕಾರಣಕ್ಕೂ ತೇಪೆ ಸರ್ಕಾರ ಮಾಡಲ್ಲ. ಹಾಲು ಕುಡಿದೇ ಸಾಯುತ್ತಿದ್ದಾರೆ. ನಾವೇಕೆ ವಿಷ ಹಾಕೋಣ. ಮಧ್ಯಂತರ ಚುನಾವಣೆ 224 ಜನರಿಗೆ ಇಷ್ಟ ಇರಲಿಕ್ಕಿಲ್ಲ. ಪರಿಸ್ಥಿತಿ ಹಂಗಿದೆ ಎಂದು ಹೇಳಿದರು.
ತೂಕ ಹೆಚ್ಚಾದ ಕಡೆಗೆ ಒಲವು ಜಾಸ್ತಿ:
ರಾಜ್ಯದಲ್ಲಿ ಐದು ಹುಲಿಗಳಿಗೆ ವಿಷ ಹಾಕಿ ಸಾಯಿಸಿರುವ ಪ್ರಕರಣ ಪ್ರಸ್ತಾಪಿಸಿದ ಸಂಸದ ಕಾರಜೋಳ ಅವರು, ಸರ್ಕಾರದಲ್ಲಿ ಆಡಳಿತ ಕುಸಿದಿದೆ. ಹೊಟ್ಟೆ ಪಾಡಿಗಾಗಿ ಅರಣ್ಯ ಕಾವಲುಗಾರರಿಗೆ ಪ್ರತಿ ತಿಂಗಳು ಸಂಬಳ ಕೊಟ್ಟರೆ ಮನೆ ನಡೆಯುತ್ತದೆ. ಆರೇಳು ತಿಂಗಳು ಸಂಬಳ ಕೊಡದೇ ಹೋದರೆ ಅವರು ಹೇಗೆ ಬದುಕಬೇಕು? ಅದಕ್ಕಾಗಿ ಕಾವಲುಗಾರರು ಇಲ್ಲ. ಕಾವಲುಗಾರರು ಇಲ್ಲದ್ದಕ್ಕೆ ಹುಲಿಗಳು ಸಾಯುವಂತಾಯಿತು. ಆ ಹುಲಿಗಳ ಸಾವಿನ ಹೊಣೆಯನ್ನು ಸರ್ಕಾರ ಹೊರಬೇಕು. ರಾಜ್ಯದಲ್ಲಿ ಪ್ರವಾಹ ಸ್ಥಿತಿ ಎದುರಿಸುವ ಬಗ್ಗೆ ಸಚಿವರು, ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸದಿರುವ ಹಿನ್ನೆಲೆ ಗಮನಿಸಿದರೆ ರಾಜ್ಯದಲ್ಲಿ ಸರ್ಕಾರವೇ ಇಲ್ಲವೆಂದ ಮೇಲೆ ಅಧಿಕಾರಿಗಳು ಸಭೆ ಎಲ್ಲಿಂದ ನಡೆಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.