ನಿರ್ವ್ಯಾಜ್ಯ ಪ್ರೇಮದ ಭಕ್ತಿಯಂದ ಭಗವಂತನ ಅನುಗ್ರಹ

KannadaprabhaNewsNetwork |  
Published : Feb 21, 2026, 01:30 AM IST
20ಕೆಡಿವಿಜಿ2-ದಾವಣಗೆರೆ ಕೆಬಿ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವದಲ್ಲಿ ಅನುಗ್ರಹ ಸಂದೇಶ ನೀಡಿದ ಉಡುಪಿ ಪೇವಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳವರು. | Kannada Prabha

ಸಾರಾಂಶ

ಲಾಭದ ನಿರೀಕ್ಷೆಯೇ ಇಲ್ಲದೇ, ನಿರ್ವ್ಯಾಜ್ಯ ಪ್ರೇಮದ ಭಕ್ತಿಯಿಂದ ಭಗವಂತನ ಅನುಗ್ರಹ ಸಾಧ್ಯ ಎಂದು ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನುಡಿದಿದ್ದಾರೆ.

- ದೀಕ್ಷಿತ್‌ ರಸ್ತೆಯ ರಾಯರ ಮಠ ಸುವರ್ಣ ಮಹೋತ್ಸವದಲ್ಲಿ ಪೇಜಾವರ ಶ್ರೀ ಆಶೀರ್ವಚನ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಲಾಭದ ನಿರೀಕ್ಷೆಯೇ ಇಲ್ಲದೇ, ನಿರ್ವ್ಯಾಜ್ಯ ಪ್ರೇಮದ ಭಕ್ತಿಯಿಂದ ಭಗವಂತನ ಅನುಗ್ರಹ ಸಾಧ್ಯ ಎಂದು ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.

ನಗರದ ದೀಕ್ಷಿತ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸುವರ್ಣ ಮಹೋತ್ಸವದಲ್ಲಿ ಶುಕ್ರವಾರ ಸಂಸ್ಥಾನ ಪೂಜೆ ನೆರವೇರಿಸಿ ಅವರು ಅನುಗ್ರಹ ಸಂದೇಶ ನೀಡಿದರು. ಭಕ್ತಿ ಹೇಗಿರಬೇಕು, ಪರಮಾತ್ಮನಿಗೆ ನಾವು ಏನನ್ನು ಕೇಳಬೇಕು ಎಂಬುದನ್ನು ಪ್ರಹ್ಲಾದರಾಜರು ತೋರಿಸಿಕೊಟ್ಟಿದ್ದಾರೆ ಎಂದರು.

ಹರಿ ಸರ್ವೋತ್ತಮ:

ಏನು ವರ ಬೇಕೆಂದು ಭಗವಂತ ಕೇಳಿದಾಗ, ಮನಸ್ಸಿನಲ್ಲಿ ಬಯಕೆಗಳು ಹುಟ್ಟದಿರುವಂತೆ ಮಾಡೆಂದು ಪ್ರಹ್ಲಾದ ರಾಜರು ಪ್ರಾರ್ಥಿಸಿದರು. ಇದು ಏಕಾಂತ ಭಕ್ತರ ಗುಣ. ಇಂತಹ ಭಕ್ತಿಗೆ ದೇವರು ಒಲಿಯುತ್ತಾನೆ. ಪ್ರಹ್ಲಾದ ರಾಜರು ಭಕ್ತಿಯ ಫಲ ಹೇಗಿರುತ್ತದೆಂಬುದರ ಉದಾಹರಣೆಯಾಗಿದ್ದಾರೆ. ಅಂತಹ ಭಕ್ತಿಯನ್ನು ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದರು. ಶ್ರೀ ರಾಘವೇಂದ್ರ ಸ್ವಾಮಿಗಳು ಅಂಥ ಭಕ್ತಿಯ ಮೂಲಬೀಜವಾದ ತತ್ವಜ್ಞಾನ ದೃಢಪಡಿಸಿದರು. ಹರಿ ಸರ್ವೋತ್ತಮ ಎಂಬುದು ಆಚಾರ್ಯರ ತತ್ವ ಎಂದು ತಿಳಿಸಿದರು.

ರಾಯರ ಸ್ಮರಿಸೋಣ:

ರಾಯರು ನಮ್ಮೆಲ್ಲರ ಗುರುಗಳು. ಗುರು-ಶಿಷ್ಯ ಸಂಬಂಧಕ್ಕೆ ಜ್ಞಾನವೇ ಆಧಾರ. ರಾಯರಿಂದ ನಾವು ತತ್ವಜ್ಞಾನ ಪಡೆಯಬೇಕು. ಅದರಿಂದ ರಾಯರು ಸಂತೋಷವಾಗಿ ಅನುಗ್ರಹಿಸುತ್ತಾರೆ. ರಾಯರ ಮುಂದೆ ಸಮಸ್ಯೆಗಳನ್ನು ಹೇಳಿಕೊಳ್ಳಬೇಡಿ, ರಾಯರಿದ್ದಾರೆಂಬ ಭಕ್ತಿ, ನಂಬಿಕೆ ಇದ್ದರೆ ಸಾಕು. ಎಲ್ಲ ಸಂಕಷ್ಟಗಳು ದೂರವಾಗುತ್ತವೆ. ಅಂಥ ಪ್ರಾರ್ಥನೆಯನ್ನು ನಾವು ಮಾಡೋಣ. ರಾಯರನ್ನು ಭಕ್ತಿಯಿಂದ ಸ್ಮರಿಸೋಣ, ಪೂಜಿಸೋಣ, ಆರಾಧಿಸೋಣ ಎಂದು ಹೇಳಿದರು.

ನಾವು ಲೋಕ ವ್ಯವಹಾರದಲ್ಲೇ ಮುಳುಗಿಬಿಡಬಾರದು. ಅದರಿಂದ ಹೊರಗೆ ಬಂದು ಭಗವಂತನ ಕಡೆಗೆ ಮನಸ್ಸು ಹೊರಳಿಸಬೇಕು. ನಿತ್ಯ ಭಗವಂತನ ಚಿಂತನೆ ಮಾಡಬೇಕು. ಆತನ ಗುಣಗಳ ಅನುಸಂಧಾನ ಮಾಡಬೇಕು. ಜ್ಞಾನಕ್ಕೆ ಭಗವಂತ ಪ್ರಸಾದವನ್ನು ಕರುಣಿಸುತ್ತಾನೆ. ದೇವರು ತನ್ನ ಮನೆಗೆ ಕರೆಸಿಕೊಳ್ಳುತ್ತಾನೆ. ಆ ಮಟ್ಟದ ಸಾಧನೆ ಮಾಡಬೇಕು. ಅಂತಹ ಅನುಗ್ರಹ ಮಾಡಲು ರಾಯರು ಬಂದಿದ್ದಾರೆ ಎಂದು ತಿಳಿಸಿದರು.

ಇಲ್ಲಿನ ಶ್ರೀಮಠ ತತ್ವಜ್ಞಾನದ ಸುಧೆಯನ್ನು ಹರಿಸುತ್ತಿದೆ. ಮಠಗಳಲ್ಲಿ ನಿತ್ಯ ಪಾಠ, ಪ್ರವಚನಗಳು ನಡೆಯಬೇಕು. ಅದರಿಂದ ರಾಯರು ಸಂತೃಪ್ತರಾಗುತ್ತಾರೆ. ಧಾರ್ಮಿಕ ಗ್ರಂಥಗಳ ಕುರಿತು ವಿದ್ವಾಂಸರಿಂದ ಪ್ರವಚನಗಳನ್ನು ಏರ್ಪಡಿಸಬೇಕು. ಮನೆಯಲ್ಲಿ ಸಂಧ್ಯಾವಂದನೆ, ದೇವರ ಪೂಜೆ, ಶಾಸ್ತ್ರಗಳು, ಸಂಸ್ಕೃತ ಪಾಠಗಳ ಅಧ್ಯಯನವನ್ನು ಚಿಕ್ಕದಾಗಿ ಆರಂಭಿಸಬೇಕು. ಅಂಥ ಸದಾಚಾರಗಳು ನಡೆಯುವ ಮೂಲಕ ಸಾರ್ಥಕ್ಯ ಪಡೆಯಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಬೆಂಗಳೂರಿನ ಪಂಡಿತ ಕು.ಶಿ. ಹರಿದಾಸ ಭಟ್ ‘ಗೀತಾ ವಿವೃತಿ’ ಕುರಿತು, ನಗರದ ಪಂಡಿತ ಕೃಷ್ಣಾಚಾರ್ಯ ಮಣ್ಣೂರು ‘ನದಿ ತಾರತಮ್ಯ ಸ್ತೋತ್ರ’ ವಿಷಯವಾಗಿ ಪ್ರವಚನ ನೀಡಿದರು. ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷ ಕೊ.ಸ. ಪ್ರಸನ್ನಕುಮಾರ, ಕಡೂರು ಪ್ರಾಣೇಶಾಚಾರ್, ವಾಚಸ್ಪತಿ ಆಚಾರ್ಯ ಕಡೂರು, ಡಾ. ಸಿ.ಕೆ.ಆನಂದ ತೀರ್ಥಾಚಾರ್ಯ, ವೆಂಕಟೇಶ ನವರತ್ನ ಇದ್ದರು.

- - -

-20ಕೆಡಿವಿಜಿ2.ಜೆಪಿಜಿ:

ದಾವಣಗೆರೆ ಕೆ.ಬಿ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವದಲ್ಲಿ ಉಡುಪಿ ಪೇವಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಂಗ್ಲಾ ಮಾತ್ರವಲ್ಲ, ಭಾರತದಲ್ಲೂ ಹಿಂದೂಗಳ ಸ್ಥಿತಿ ಹೀನಾಯ
ಕರ್ಣಾಟಕ ಬ್ಯಾಂಕ್ 102ನೇ ಸಂಸ್ಥಾಪಕರ ದಿನಾಚರಣೆ