ರಾಜ್ಯದಲ್ಲಿ ಗ್ಯಾರಂಟಿ ಬಂದ್ ಆಗುತ್ತಾ..? ಸಿಎಂ ಉತ್ತರ

KannadaprabhaNewsNetwork |  
Published : Apr 27, 2024, 01:20 AM ISTUpdated : Apr 27, 2024, 11:17 AM IST
ಷಷ | Kannada Prabha

ಸಾರಾಂಶ

ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿಗಳನ್ನು ನಿಲ್ಲಿಸಲಾಗುತ್ತದೆ ಎಂದು ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ನಾವು ಯಾವುದೇ ಕಾರಣಕ್ಕೂ ಈ ಗ್ಯಾರಂಟಿಗಳನ್ನು ಸ್ಥಗಿತ ಮಾಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಭರವಸೆ ನೀಡಿದರು.

  ವಿಜಯಪುರ :  ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿಗಳನ್ನು ನಿಲ್ಲಿಸಲಾಗುತ್ತದೆ ಎಂದು ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ನಾವು ಯಾವುದೇ ಕಾರಣಕ್ಕೂ ಈ ಗ್ಯಾರಂಟಿಗಳನ್ನು ಸ್ಥಗಿತ ಮಾಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಭರವಸೆ ನೀಡಿದರು.

ನಗರದ ಸೊಲ್ಲಾಪೂರ ರಸ್ತೆಯಲ್ಲಿರುವ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾವು ಹಿಂದೂಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಿದ್ದೇವೆ ಅಂತ ಮೋದಿ ಸುಳ್ಳು ಹೇಳುತ್ತಿದ್ದಾರೆ. ಹೀಗೆ ಹೇಳುವ ಮೂಲಕ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ಚ್ಯುತಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಅಧಿಕಾರದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಮುಸ್ಲಿಮರಿಗೆ ಇದ್ದ ಶೇ.4 ಮೀಸಲಾತಿ ತೆಗೆದು ಹಾಕಿದರು. ಆಗ ಇದನ್ನು ಪ್ರಶ್ನಿಸಿ ಮುಸ್ಲಿಂ ಮುಖಂಡರು ಸುಪ್ರೀಂಗೆ ಅರ್ಜಿ ಹಾಕಿದರು. ಆ ವೇಳೆ ಇದೆ ಬಿಜೆಪಿಯವರು ಕೋರ್ಟ್‌ಗೆ ಅಫಿಡವಿಟ್ ಹಾಕಿ ನಾವು ಯಥಾಸ್ಥಿತಿ ಕಾಪಾಡುತ್ತೇವೆ ಎಂದು ನ್ಯಾಯಾಲಯದಲ್ಲಿ ತಿಳಿಸಿ ನಂತರ ಅದನ್ನು ಯಥಾಸ್ಥಿತಿ ಮುಂದುವರೆಸಿದ್ದಾರೆ. ನಾವು ಅದನ್ನೇ ಮುಂದುವರಿಸಿದ್ದೇವೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಹೊಸದಾಗಿ ಮೀಸಲಾತಿ ಕೊಡುತ್ತಾರೆ ಎಂಬುದು ಅತೀ ಸುಳ್ಳು. ಮೋದಿ ಸುಳ್ಳು ಹೇಳುವುದರಲ್ಲಿ ಪ್ರವೀಣರು. ಭಾರತದಲ್ಲಿ ಬಂದ ಪ್ರಧಾನಿಗಳಲ್ಲಿ ಸುಳ್ಳು ಹೇಳುವವರು ಯಾರಾದರೂ ಇದ್ರೆ ಅದು ಮೋದಿ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

ಸಂವಿಧಾನ ವಿರೋಧಿ ಬಿಜೆಪಿ:

ಈ ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಮೋದಿ ಅವರಿಗೆ ಗೊತ್ತಾಗಿದೆ. ನಾವು 400 ಸೀಟ್ ಗೆಲ್ಲುತ್ತೇವೆ ಎಂದು ಹೇಳುತ್ತಿರುವುದು ಅವರಿಗೆ ಸಂವಿಧಾನ ಬದಲಾವಣೆ ಮಾಡಲು ಬೇಕಾಗಿವೆ. ಇವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದ ಅವರು, ಇದುವರೆಗೂ ಅಭಿವೃದ್ಧಿಯನ್ನೇ ಮಾಡದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ಸೋಲಿಸಿ, ನಮ್ಮ‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಸಿಎಂ ಮನವಿ ಮಾಡಿದರು.

ಅಭಿವೃದ್ಧಿ ಮಾಡಿದ ವಿಚಾರ ಹೇಳದ ಮೋದಿ:

ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ನಿಮಗೆ ಇದು ಮಹತ್ವದ ಚುನಾವಣೆ ಇದೆ. ಮುಂದಿನ 5 ವರ್ಷ ಯಾರು ಅಧಿಕಾರದಲ್ಲಿ‌ ಇರಬೇಕು ಎಂಬುದು ತೀರ್ಮಾನ ಮಾಡುತ್ತದೆ. ಮೋದಿ ಕಳೆದ 10 ವರ್ಷಗಳಲ್ಲಿ ಬಡವರು, ಹಿಂದುಳಿದವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆಯೇ ಎಂಬುದನ್ನು ಯೋಚಿಸಿ. ನೀರಾವರಿ ಯೋಜನೆ, ಅಭಿವೃದ್ಧಿ ಬಗ್ಗೆ ಏನೂ ಮಾಡಿಲ್ಲ. ಇದುವರೆಗೂ ಅವರು ಮಾಡಿದ ಅಭಿವೃದ್ಧಿ ವಿಚಾರ ಹೇಳಿಲ್ಲ. ಕೇವಲ ಧರ್ಮ ಧರ್ಮಗಳ ಮಧ್ಯೆ ಗಲಭೆ ಉಂಟು ಮಾಡಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಧಾನಿ ಮೋದಿ ಅವರ ಇತ್ತೀಚಿನ ಭಾಷಣ ನೋಡಿದರೆ ಅವರು ಗೆಲ್ಲೋದಿಲ್ಲ ಎಂಬುದು ಅವರಿಗೆ ಅರಿವಾಗಿದೆ. ಕಳೆದ ಚುನಾವಣೆಯಲ್ಲಿ 25 ಸಂಸದರನ್ನು ಕಳಿಸಿಕೊಟ್ಟಿದ್ದೀರಿ. 25 ಜನರಲ್ಲಿ ಒಬ್ಬರೂ ಬಾಯಿ ಬಿಡಲಿಲ್ಲ. ನಿಮ್ಮ ಜಿಲ್ಲೆಯವರಾದ ಜಿಗಜಿಣಗಿ ಮಂತ್ರಿಯಾದರೂ ಮಾತಾಡಿಲ್ಲ. ಇವರಿಗೆ ಮಾತಾಡಲು ಭಯವಿದೆ ಎಂದು ದೂರಿದರು.

ಅದಾನಿ, ಅಂಬಾನಿ ಸಾಲಮನ್ನಾ:

ಮನಮೋಹನಸಿಂಗ್ ಅವರು ಪ್ರಧಾನಿ ಇದ್ದಾಗ ₹72 ಸಾವಿರ ಕೋಟಿ ಸಾಲ‌ಮನ್ನಾ ಮಾಡಿದರು. ಕಳೆದ ಅವಧಿಯಲ್ಲಿ ನಾನು ಸಿಎಂ ಇದ್ದಾಗ ಸೊಸೈಟಿಗಳಲ್ಲಿದ್ದ ₹50 ಸಾವಿರದವರೆಗಿನ ಸಾಲ ಸೇರಿ ಒಟ್ಟು 27 ಲಕ್ಷ ರೈತರ ₹8145 ಕೋಟಿ ರೈತರ ಸಾಲ ಮನ್ನಾ ಮಾಡಿದಿನಿ. ಆದರೆ ಇವರು ಅಂಬಾನಿ, ಅದಾನಿ ಸೇರಿ ₹16 ಲಕ್ಷ ಕೋಟಿ ಸಾಲ‌ಮನ್ನಾ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿ ಅಂದರೆ ದುಡ್ಡಿಲ್ಲ‌‌ ಅಂತಾರೆ. ಬಂಡವಾಳ ಶಾಹಿಗಳ ಸಾಲ‌ಮನ್ನಾ ಮಾಡ್ತಾರೆ ಎಂದು ಆರೋಪಿಸಿದರು.

ಬಿಜೆಪಿ ಅಧಿಕಾರದಲ್ಲಿ ಆರ್ಥಿಕ ದಿವಾಳಿ:

ಈ ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ, ನಮ್ಮ ವಿ.ಎಸ್. ಉಗ್ರಪ್ಪನವರು ಕೌನ್ಸಿಲ್‌ನಲ್ಲಿ ಸಾಲ ಮನ್ನಾದ ಪ್ರಶ್ನೆ ಕೇಳಿದಾಗ ಆಗ ಯಡಿಯೂರಪ್ಪನವರು ನೋಟ್ ಪ್ರಿಂಟ್ ಮಾಡಲು ನಮ್ಮ ಬಳಿ ಮಶೀನ್ ಇಲ್ಲ‌ ಎಂದರು. ಇವರ ಬಳಿ ನೋಟು ಎಣಿಸಲು ಮಶೀನ್ ಇದೆ. ಆದ್ದರಿಂದಲೇ ರಾಜ್ಯವನ್ನು‌ಲೂಟಿ ಹೊಡೆದರು. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಅಭಿವೃದ್ದಿ ಕೆಲಸ‌ ಮಾಡದೆ 3 ವರ್ಷ 10 ತಿಂಗಳಲ್ಲಿ ಆರ್ಥಿಕವಾಗಿ ದಿವಾಳಿ ಮಾಡಿದರು ಎಂದು ಆರೋಪಿಸಿದರು.

10 ವರ್ಷ ಪ್ರಧಾನಿಯಾಗಿದ್ದ ಮೋದಿ ಸಾಕಷ್ಟು ಸುಳ್ಳುಗಳನ್ನು ಹೇಳಿದ್ದಾರೆ. ಕಪ್ಪು ಹಣ ತರುತ್ತೇನೆ ಎಂದರು ತರಲಿಲ್ಲ. ಉದ್ಯೋಗ ಸೃಷ್ಟಿ ಮಾಡಲಿಲ್ಲ. ರೈತರ ಆದಾಯ ಹೆಚ್ಚಿಸುತ್ತೇನೆ ಎಂದವರು, ಅದನ್ನು ಮಾಡಲಿಲ್ಲ. ಅಚ್ಚೇದಿನ್‌ ಆಯೇಗಾ ಅಂದರು. ಅದು ಬರಲಿಲ್ಲ. ದಿನಬಳಕೆ ವಸ್ತುಗಳ ಬೆಲೆ ಕೂಡ ಇಳಿಯಲಿಲ್ಲ ಎಂದು ಮೋದಿ ಸರ್ಕಾರದ ವೈಫಲ್ಯಗಳನ್ನು ತಿಳಿಸಿದರು.

ಅಕ್ಕಿಯಲ್ಲಿ ಕೇಂದ್ರದಿಂದ ಮಹಾ ಅನ್ಯಾಯ

ಅನ್ನಭಾಗ್ಯ ಅಡಿ ಮೊದಲ ಅವಧಿಯಿಂದ 7 ಕೆಜಿ ಪ್ರತಿ‌ ಕುಟುಂಬದ ಸದಸ್ಯರಿಗೆ ಕೊಡುತ್ತಿದ್ದೇವೆ. ಯಡಿಯೂರಪ್ಪ ಬಂದ ಮೇಲೆ ಅದನ್ನು 5 ಕೆಜಿಗೆ ಇಳಿಸಿದರು. ನಾವು ಕಳೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ಐದು ಕೇಜಿ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 5 ಕೆಜಿ ಕೊಡ್ತೇವೆ ಎಂದು ಮಾತು ಕೊಟ್ಟಿದ್ದೆವು. ಅದರಂತೆ ಅಕ್ಕಿ ಕೊಡಬೇಕು ಎಂದು ಫುಡ್ ಕಾರ್ಪೊರೇಷನ್ ಇಂಡಿಯಾದವರಿಗೆ ಕೇಳಿದೆ. ಅವರು ಕೊಡುತ್ತೇವೆ ಎಂದರು. ಬಳಿಕ ಮೂರು ದಿನ ಬಿಟ್ಟು ಕೇಂದ್ರ ಸರ್ಕಾರ ನಮಗೆ ರಾಜ್ಯಕ್ಕೆ ಅಕ್ಕಿ ಕೊಡಬೇಡಿ ಎಂದಿದೆ. ಸರ್ಕಾರದ ಆಜ್ಞೆಯನ್ನು ಧಿಕ್ಕರಿಸಲು ಆಗಲ್ಲ‌ ಅಂದರು. ಇದು ಮೋದಿ ಬಡವರಿಗೆ ಮಾಡಿದ ಮಹಾ ಅನ್ಯಾಯ ಎಂದು ಗುಡುಗಿದರು.

ಒಣದ್ರಾಕ್ಷಿಯ ಹಾರದಿಂದ ರಾಹುಲ್‌ಗೆ ಸ್ವಾಗತ

ವಾಹನದ ಮೂಲಕ ವೇದಿಕೆಗೆ ಆಗಮಿಸಿದ ರಾಹುಲ್‌ಗಾಂಧಿ ಸಾರ್ವಜನಿಕ ಸಭೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. ಇದಕ್ಕೂ ಮೊದಲು ರಾಹುಲ್‌ಗಾಂಧಿ ಅವರಿಗೆ ಸಚಿವ ಎಂ.ಬಿ.ಪಾಟೀಲ್ ಹಾಗೂ ರಣದೀಪ ಸುರ್ಜೇವಾಲಾಗೆ ಸಚಿವ ಶಿವಾನಂದ ಪಾಟೀಲ್ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಒಣದ್ರಾಕ್ಷಿ ಹಾರಗಳನ್ನು ಹಾಕಿ ಸ್ವಾಗತಿಸಿದರು.

ರಾಜ್ಯದಂತೆ ಎಐಸಿಸಿ ಕೂಡ 25 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಅದಕ್ಕೆ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲಗಾಂಧಿ ಅವರು ಸೈನ್ ಮಾಡಿ ಮನೆಮನೆಗೆ ಗ್ಯಾರಂಟಿ ಕಾರ್ಡ್ ಕೊಡುತ್ತಿದಾರೆ. ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ಕೊಡುತ್ತಿದ್ದು, ಪ್ರತಿ ತಿಂಗಳು 8500 ಬಂದಂತೆ ಆಗುತ್ತದೆ. ಅದರ ಜೊತೆಗೆ ರಾಜ್ಯ ಸರ್ಕಾರ ವರ್ಷಕ್ಕೆ ₹24 ಸಾವಿರ ಕೊಡುತ್ತಿದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ