ಶಾಸಕ ಶರತ್ ಬಚ್ಚೇಗೌಡ ಅಭಿಮತ । ಜಿಕೆವಿಕೆಯಿಂದ ಇಟ್ಟಸಂದ್ರ ಗ್ರಾಮದಲ್ಲಿ ‘ಕೃಷಿಸಿರಿ’ ಕಾರ್ಯಕ್ರಮ
ಕೃಷಿಯಲ್ಲಿ ತನ್ನದೇ ಆದಂತಹ ಪರಿಹಾರಗಳನ್ನು ಕಂಡುಕೊಂಡು ಇಸ್ರೇಲ್ ನ ರೈತರು ಬೆಳೆ ಬೆಳೆಯುತ್ತಿದ್ದಾರೆ. ಆದರೆ ನಮ್ಮ ಭಾಗದಲ್ಲಿ ಜಿಕೆವಿಕೆಯಂತಹ ಪ್ರತಿಭಾವಂತ ಮಕ್ಕಳು ಮಾರ್ಗದರ್ಶನ ನೀಡಿದರೆ ಸಾಕು, ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಮದಲ್ಲಿ ಜಿಕೆವಿಕೆ, ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ “ಕೃಷಿಸಿರಿ” ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರೈತರು ಹಾಗೂ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪರಸ್ಪರ ಕೃಷಿಯ ಬಗ್ಗೆ ಅರಿವು ಪಡೆದುಕೊಳ್ಳುವುದರ ದೃಷ್ಟಿಯಿಂದ ಜಿಕೆವಿಕೆ ವಿದ್ಯಾರ್ಥಿಗಳು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಸರಳವಾಗಿ ಪೌಷ್ಟಿಕಾಂಶಯುಕ್ತ ಹಣ್ಣು, ತರಕಾರಿ ಬೆಳೆಯುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳುವಳಿಕೆ ಕೊಟ್ಟಿರುವುದು ಶ್ಲಾಘನೀಯ. ದೇಶದ ಬೆನ್ನುಲುಬು ರೈತರಾಗಿದ್ದು, ಅತಿವೃಷ್ಟಿ, ಅನಾವೃಷ್ಟಿಯನ್ನು ದಿಟ್ಟವಾಗಿ ಎದುರಿಸಿ ದೇಶಕ್ಕೆ ಅನ್ನ ನೀಡುತ್ತಿದ್ದಾನೆ, ಕೃಷಿಯಲ್ಲಿನ ಆಧುನಿಕ ತಂತ್ರಜ್ಞಾನವು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿದೆ. ಇದು ರೈತರಿಗೆ ಆಹಾರ ಭದ್ರತೆ ಮತ್ತು ಆದಾಯವನ್ನು ಸುಧಾರಿಸಿದೆ. ರೈತರಿಗೆ ಲಾಭದಾಯಕ ಕೃಷಿಯಾಗಬೇಕಾದರೆ ವೈಜ್ಞಾನಿಕ ಕೃಷಿ ಹಾಗೂ ಪರಂಪರಾಗತವಾಗಿ ಪೂರ್ವಜರು ಅನುಸರಿಸುತ್ತಿದ್ದ ಪದ್ಧತಿಯನ್ನು ತೊರೆದು, ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ಎಂದರು.
ಜಿಕೆವಿಕೆ ಕುಲಪತಿ ಎಸ್.ವಿ.ಸುರೇಶ್ ಮಾತನಾಡಿ, ಜಗತ್ತು ಕೃಷಿಯ ಮೇಲೆ ಅವಲಂಬಿತವಾಗಿದೆ. ಭಾರತ ಮೊದಲು ಕೃಷಿ ಕ್ಷೇತ್ರದಲ್ಲಿ ಹಿಂದುಳಿದಿತ್ತು, ಆದರೆ ಹಸಿರು ಕ್ರಾಂತಿಯಿಂದಾಗಿ ಕೃಷಿಯಲ್ಲಿ ಸ್ವಾವಲಂಬಿಯಾಗಿದೆ. ರೈತರು ಬೇಸಾಯದಲ್ಲಿ ಹಲವಾರು ವರ್ಷಗಳಿಂದ ಪಡೆದಿರುವ ಪರಿಣಿತಿಯನ್ನು ಜಿಕೆವಿಕೆ ವಿದ್ಯಾರ್ಥಿಗಳಿಗೆ ಕಲಿಯುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
-----