- ಶ್ರೀ ಸಿದ್ದಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆಯಲ್ಲಿ ರಂಭಾಪುರಿ ಶ್ರೀ ಆಶೀರ್ವಚನ । ತಾವರೆಕೆರೆ ಶಿಲಾಮಠದಲ್ಲಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಮನುಷ್ಯರಲ್ಲಿ ಅರಿವು ಮತ್ತು ಮರೆವು ಎರಡು ಇದೆ. ಅರಿವನ್ನು ಜಾಗೃತಿಗೊಳಿಸುವ ಶಕ್ತಿ ಶ್ರೀಗುರುವಿಗೆ ಇದೆ. ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡಿ, ಮುನ್ನಡೆಸುವುದೇ ಗುರುವಿನ ಆದ್ಯಕರ್ತವ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ನುಡಿದರು.ಭಾನುವಾರ ತಾಲೂಕಿನ ತಾವರೆಕೆರೆ ಶಿಲಾಮಠದ ಸಿದ್ದಿಪುರುಷ ಲಿಂಗೈಕ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯರ 53ನೇ ವಾರ್ಷಿಕ ಪುಣ್ಯಸ್ಮರಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶಿರ್ವಚನ ನೀಡಿದರು. ಹಣತೆ ತನಗಾಗಿ ಉರಿಯುವುದಿಲ್ಲ. ಅದು ಪರರಿಗೆ ಬೆಳಕು ಕೊಡುವಂತೆ, ನಂಬಿದ ಭಕ್ತನ ಬಾಳು ಬೆಳಗಿಸಲು ಗುರುವು ಸದಾ ಶ್ರಮಿಸುತ್ತಾನೆ ಎಂದರು.
ಪರಶಿವನ ಸಾಕಾರ ರೂಪವೇ ಗುರುವೆಂದು ಶಾಸ್ತ್ರ ಸಿದ್ಧಾಂತಗಳು ಹೇಳುತ್ತವೆ. ಶಿಲಾಮಠದ ಸಿದ್ದಿ ಪುರುಷ ಲಿಂಗೈಕ್ಯ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಭಕ್ತರ ಬಾಳಿಗೆ ಅಜ್ಞಾನ ಕಳೆದು ಜ್ಞಾನದ ಬೆಳಕನ್ನು ತೋರಿದವರು. ಸಿದ್ದಿ ಪುರುಷರಾದ ಅವರಿಗೆ ಇಡೀ ಸಮಾಜ ಭಕ್ತಿ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. 53ನೇ ಪುಣ್ಯ ಸ್ಮರಣೋತ್ಸವ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದ ಉದ್ದಾರಕ್ಕೆ ವೀರಶೈವ ಪೀಠ ಮಠಗಳ ಕೊಡುಗೆ ಅಪಾರವಾಗಿದೆ. ಶಿಕ್ಷಣ ಮತ್ತು ಸಂಸ್ಕಾರ ಕೊಟ್ಟ ಕೀರ್ತಿ ಮಠಗಳಿಗೆ ಸಲ್ಲುತ್ತದೆ. ಲಿಂಗೈಕ್ಯ ಶ್ರೀಗಳವರ ಚಿಂತನೆಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಮುಖ್ಯ ಅತಿಥಿ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ವೀರಶೈವ ಧರ್ಮಕ್ಕೆ ಮಠಗಳ ಕೊಡುಗೆ ಅಪಾರವಾಗಿವೆ. ಭಕ್ತಸಮೂಹಕ್ಕೆ ಉತ್ತಮ ಸಂಸ್ಕಾರ, ಸದ್ವಿಚಾರಗಳನ್ನು ಬೋಧಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯಗಳನ್ನು ನಡೆಸಲಾಗುತ್ತಿದೆ. ಶಿಲಾಮಠದ ಲಿಂಗೈಕ್ಯ ಉಭಯ ಶ್ರೀಗಳು ಧರ್ಮಮುಖಿ ಮತ್ತು ಸಮಾಜಮುಖಿಯಾಗಿ ಕಾರ್ಯ ಮಾಡಿದ್ದನ್ನು ಮರೆಯಲಾಗದು ಎಂದರು.ಕೆ.ಬಿದರೆ ದೊಡ್ಡ ಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯರು, ಚಿಕ್ಕಮಗಳೂರಿನ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಚಂಡೇಗೆರೆ ಗಂಗಾಧರ ಶಿವಾಚಾರ್ಯರು, ಹುಲಿಕೆರೆ ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಹಾರನಹಳ್ಳಿಯ ಶ್ರೀ ಶಿವಯೋಗಿ ಶಿವಾಚಾರ್ಯರು, ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಭಾಗವಹಿಸಿದ್ದರು.
- - - -4ಕೆಸಿಎನ್‌ಜಿ3:
ಚನ್ನಗಿರಿ ತಾಲೂಕಿನ ತಾವರೆಕೆರೆ ಶಿಲಾಮಠದ ಸಿದ್ದಿಪುರುಷ ಲಿಂ. ಶ್ರೀ ಸಿದ್ದಲಿಂಗ ಶಿವಾಚಾರ್ಯರ 53ನೇ ವಾರ್ಷಿಕ ಪುಣ್ಯಸ್ಮರಣೆ ಸಮಾರಂಭದಲ್ಲಿ ರಂಭಾಪುರಿ ಶ್ರೀಗಳು ಆಶೀರ್ವಚನ ನೀಡಿದರು.