ಇಂದರಪಾಶ ಚಿಂಚರಕಿ
ಗ್ರಾಮೀಣ ಪ್ರದೇಶದಲ್ಲಿ ಬೆಳಗಾಗುತ್ತಿದ್ದಂತೆ ದನಗಳ ಹಿಂಡಿನೊಂದಿಗೆ ಹೊಲದ ದಾರಿ ಹಿಡಿಯುತ್ತಿದ್ದ ಬಾಲಕನೊಬ್ಬ 15 ವರ್ಷಗಳಿಂದ ದೇಶ ಕಾಯುವ ಕಾಯಕದಲ್ಲಿ ಗಡಿಯಲ್ಲಿ ಬಂದೂಕು ಹಿಡಿದು ದೇಶದ ರಕ್ಷಣೆಗಾಗಿ ನಿಂತಿದ್ದಾನೆ. ಕಡುಬಡತನದ ಸಂದರ್ಭದಲ್ಲಿ ಜಾನುವಾರು ಕಾಯುತ್ತಿದ್ದ ಆ ಕೈಗಳೇ ರಾಷ್ಟ್ರದ ರಕ್ಷಣೆಯ ಹೊಣೆ ಹೊತ್ತಿವೆ. ಇದು ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದ ಹುಸೇನಪ್ಪ ದುರ್ಗಪ್ಪ ಶಾಸ್ತ್ರಿ ಅವರ ಬದುಕಿನ ಸ್ಫೂರ್ತಿದಾಯಕ ಪಯಣವಾಗಿದೆ.
ತಾಲೂಕು ವ್ಯಾಪ್ತಿಯ ಮಟ್ಟೂರು ಗ್ರಾಮದಲ್ಲಿ ಬಡತನದ ನಡುವೆ ಹುಟ್ಟಿದರೂ ಹುಸೇನಪ್ಪ ಅವರ ಕನಸುಗಳು ಮಾತ್ರ ಬಡವಾಗಿರಲಿಲ್ಲ. ಏಳು ಸಹೋದರರು ಹಾಗೂ ಒಬ್ಬ ಅಕ್ಕ ಸೇರಿದಂತೆ ಎಂಟು ಜನರ ಕುಟುಂಬದಲ್ಲಿ ಬೆಳೆದ ಅವರಿಗೆ ಬಾಲ್ಯದಲ್ಲೇ ದುಡಿಮೆಯ ಅನಿವಾರ್ಯತೆ ಎದುರಾಗಿತ್ತು. ಮನೆ–ಹೊಲದ ಕೆಲಸ, ಜಾನುವಾರುಗಳ ಪಾಲನೆ ಮಾಡುತ್ತಲೇ ಅವರು ವಿದ್ಯಾಭ್ಯಾಸ ಮುಂದುವರಿಸಿದರು.ದುಡಿಮೆಯ ಹಣದಲ್ಲೇ ಓದು: ಪುಸ್ತಕ ಹಿಡಿಯಬೇಕಾದ ವಯಸ್ಸಿನಲ್ಲಿ ದುಡಿಮೆಯ ಹೊರೆ ಹೊತ್ತಿದ್ದರೂ, ಓದಿನ ಮೇಲಿನ ಆಸಕ್ತಿ ಕಡಿಮೆಯಾಗಲಿಲ್ಲ. ತಾವು ದುಡಿದು ಗಳಿಸಿದ ಹಣದಲ್ಲೇ ವಿದ್ಯಾಭ್ಯಾಸದ ಖರ್ಚು ಭರಿಸಿಕೊಂಡು ಮಟ್ಟೂರಿನಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು.
ಪ್ರೌಢ ಶಿಕ್ಷಣದ ಬಳಿಕ ಲಿಂಗಸುಗೂರಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದರು. ಮುಂದೇನು ಎಂಬ ಪ್ರಶ್ನೆ ಕಾಡುತ್ತಿದ್ದ ಸಂದರ್ಭದಲ್ಲಿ ಸಂತೆಕೆಲ್ಲೂರಿನ ಶ್ರೀ ಘನಮಠ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಪ್ರವಚನ ನೀಡಲು ಆಗಮಿಸಿದ್ದ ಪ್ರಸಿದ್ಧ ಪ್ರವಚನಕಾರ ಶ್ರೀ ಈಶ್ವರ್ ಮಂಟೂರ್ ಅವರ ಮಾತುಗಳು ಹುಸೇನಪ್ಪ ಅವರ ಮನಸ್ಸಿನಲ್ಲಿ ಹೊಸ ಕನಸಿಗೆ ಕಿಚ್ಚು ಹಚ್ಚಿದವು.ದೇಶ ಸೇವೆಯ ಕುರಿತು ಅವರ ಮಾತುಗಳಿಂದ ಪ್ರೇರಿತರಾದ ಹುಸೇನಪ್ಪ ಸೇನಾ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿದರು. ಕಠಿಣ ದೈಹಿಕ ಹಾಗೂ ಇತರ ಆಯ್ಕೆ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರೈಸಿ ಭಾರತೀಯ ಸೇನೆಗೆ ಆಯ್ಕೆಯಾದರು.
ಊರಿನ ಮಣ್ಣಿನ ನಂಟು ಕಳಚಲಿಲ್ಲ: ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಹುಸೇನಪ್ಪ ತಮ್ಮೂರು ಮತ್ತು ತಾವು ಓದಿದ ಶಾಲೆಯನ್ನು ಮರೆತಿಲ್ಲ. ಶಾಲೆಯ ಮಕ್ಕಳಿಗೆ ತಮ್ಮ ಕೈಲಾದಷ್ಟು ನೆರವು ನೀಡುತ್ತಾ, ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂಬಂಧ ಉಳಿಸಿಕೊಂಡಿದ್ದಾರೆ. ತಾವು ಅನುಭವಿಸಿದ ಬಡತನ ಮತ್ತೊಬ್ಬ ಮಗುವಿನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂಬ ಕಾಳಜಿಯೇ ಅವರ ಸೇವಾ ಮನೋಭಾವಕ್ಕೆ ಮತ್ತೊಂದು ಮುಖ ನೀಡಿದೆ.