ಕನ್ನಡಪ್ರಭ ವಾರ್ತೆ ಮಂಗಳೂರು ತ್ರಿಪುರಸುಂದರಿಯ ಉಪಾಸನೆ ಮಾಡುವವರಿಗೆ ಇಹ- ಪರಗಳೆರಡಲ್ಲೂ ಸುಖ ಕಟ್ಟಿಟ್ಟ ಬುತ್ತಿ. ಇದು ಮೋಕ್ಷಕ್ಕೆ ಸಾಧನ. ತ್ರಿಪುರಸುಂದರಿಯ ಆರಾಧನೆಗೆ ಸರ್ವ ದುಃಖ ಶಮನದ ಶಕ್ತಿ ಇದೆ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಬಂಟ್ವಾಳದ ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಭಾನುವಾರ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಮೊದಲ ದಿನ ಅವರು ಆಶೀರ್ವಚನ ನೀಡಿದರು. ಪಥ ಭ್ರಷ್ಟರು, ವರ್ಣವ್ಯವಸ್ಥೆಯನ್ನು ಧಿಕ್ಕರಿಸಿದವರು ಕೂಡಾ ತ್ರಿಪುರ ಸುಂದರಿಯ ಧ್ಯಾನ ಮಾಡಿದರೆ ಅಂಥವರ ಪಾಪಗಳು ಪುಣ್ಯಗಳಾಗಿ ಮಾರ್ಪಡುತ್ತವೆ. ವಿಧಿವತ್ತಾಗಿ ಮಾಡಲಾಗದೇ ಭಕ್ತಿಯಿಂದ ವಿಧಿಹೀನವಾಗಿ ಮಾಡಿದರೂ ಮುಕ್ತಿ- ಮೋಕ್ಷವನ್ನು ಪಡೆಯುತ್ತಾರೆ ಎಂದು ಶ್ರೀಗಳು ಬಣ್ಣಿಸಿದರು. ಮಾನಸ ಜಪ, ಮಾನಸ ಪೂಜೆಗೆ ವಿಶೇಷ ಮಹತ್ವವಿದೆ. ವಾಕ್ಯ ಪುಷ್ಪೋಪಹಾರ. ಲಲಿತೋಪಾಖ್ಯಾನ ಎಂದರೆ ಮಾತೆ ಕೊಟ್ಟ ಮಾತಿನಿಂದ ಮಾತೆಯ ಅರ್ಚನೆ. ಲಲಿತೋಪಾಖ್ಯಾನದ ಮೂಲ ಬ್ರಹ್ಮಾಂಡ. ಬ್ರಹ್ಮಾಂಡ ಪುರಾಣದ ಉತ್ತರ ಖಂಡದಲ್ಲಿ ಲಲಿತೋಪಾಖ್ಯಾನದ ವರ್ಣನೆ ಇದೆ. ಲಲಿತಾ ಸಹಸ್ರನಾಮ, ಇದರ ಒಂದು ಭಾಗ. ಅಷ್ಟೋತ್ತರದ ಮೂಲಕ ಇಂಥ ಅದ್ಭುತ ವರ್ಣನೆಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು. ಮಹಾತ್ಮರು ಯಾವುದೇ ಹೆಜ್ಜೆ ಇಟ್ಟರೂ, ಅದರ ಹಿಂದೆ ಮಹತ್ವದ ಉದ್ದೇಶ ಇರುತ್ತದೆ. ಅಂತೆಯೇ ಜನತೆ ಕೂಡಾ ತಮ್ಮ ಜೀವನದಲ್ಲಿ ಪ್ರತಿ ಹೆಜ್ಜೆ ಇಡುವಾಗ ಮುಂದಿನದ್ದನ್ನು ಊಹಿಸಬೇಕು ಎಂದು ಹೇಳಿದರು. ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಉದ್ಯಮಿ ಎಸ್.ಕೆ.ಆನಂದ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಸಂಘಟನಾ ಖಂಡದ ಸಂಯೋಜಕ ಡಾ.ವೈ.ವಿ.ಕೃಷ್ಣಮೂರ್ತಿ, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ಮಂಗಳೂರು ಮಂಡಲ ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಉಂಡೆಮನೆ ವಿಶ್ವೇಶ್ವರ ಭಟ್ ಮತ್ತಿತರರು ಇದ್ದರು.