ಡೇರಿಗಳ ಪ್ರಗತಿಯಲ್ಲಿ ನೌಕರರ ಶ್ರಮ ಅಪಾರ

KannadaprabhaNewsNetwork | Published : Oct 16, 2024 12:44 AM

ಸಾರಾಂಶ

ಚಾಮರಾಜನಗರದ ಲಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಆಡಳಿತ ನಿರ್ವಹಣೆ ಬಗ್ಗೆ ನಡೆದ ತರಬೇತಿ ಕಾರ್ಯಾಗಾರವನ್ನು ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತ ಚಾಮರಾಜನಗರ

ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಗತಿ ಹಾಗೂ ಒಕ್ಕೂಟಗಳ ಅಭಿವೃದ್ಧಿಯಲ್ಲಿ ಡೇರಿಗಳ ಮುಖ್ಯ ಕಾರ್ಯನಿರ್ವಾಹಕರ ಶ್ರಮ ಹೆಚ್ಚಿನದ್ದಾಗಿದೆ. ಸಹಕಾರ ಶಿಕ್ಷಣ ಮತ್ತು ನಿರ್ವಹಣೆ ಬಗ್ಗೆ ಅರಿವು ಇದ್ದರೆ ಆಡಳಿತ ನಡೆಸುವುದು ಸುಗಮವಾಗುತ್ತದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.

ನಗರದ ಲಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆಯ ಸಹಯೋಗದಲ್ಲಿ ನಡೆದ ಚಾಮರಾಜನಗರ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಆಡಳಿತ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ೪೬೫ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ತಾಲೂಕಿನಲ್ಲಿ ೧೫೨ ಸಂಘಗಳು ಸಕ್ರಿಯವಾಗಿದ್ದು, ಪ್ರತಿನಿತ್ಯ ಹಾಲು ಶೇಖರಣೆ ಮಾಡಿ ಒಕ್ಕೂಟಕ್ಕೆ ನೀಡುವ ಮೂಲಕ ಆಯಾ ಗ್ರಾಮಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಇಂಥ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಇಒಗಳು ಹಾಗೂ ನೌಕರರಿಗೆ ಸಹಕಾರ ಕಾಯ್ದೆಗಳು ಹಾಗೂ ಆಡಳಿತ ನಿರ್ವಹಣೆಯಲ್ಲಿ ಬರುವಂತಹ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಹಿರಿಯ ಸಹಕಾರಿ ತಜ್ಞರನ್ನು ಕರೆಸಿ ತರಬೇತಿ ಕೊಡಿಸುವ ಮೂಲಕ ಅವರ ವೃತ್ತಿ ನೈಪುಣ್ಯತೆ ಹೆಚ್ಚಿಸಲಾಗುತ್ತಿದೆ ಎಂದರು. ಚಾಮರಾಜನಗರ ಹಾಲು ಒಕ್ಕೂಟವು ರಾಜ್ಯದಲ್ಲಿಯೇ ಪ್ರಥಮವಾಗಿ ಡೇರಿ ನೌಕರರಿಗೆ ಅವರ ಸೇವಾ ಅವಧಿಯ ಆಧಾರದ ಮೇಲೆ ನಿವೃತ್ತಿ ಹಣವನ್ನು ನಿಗದಿ ಮಾಡಿ, ಅವರ ಸೇವೆಯನ್ನು ಪರಿಗಣಿಸಿ ನೀಡಲಾಗುತ್ತಿದೆ. ಇಂಥ ಯೋಜನೆಯನ್ನು ಬಹಳಷ್ಟು ನೌಕರರು ಪಡೆದುಕೊಂಡಿದ್ದಾರೆ. ೬೦ ವರ್ಷ ತುಂಬಿದ ನೌಕರರ ಸೇವೆಯನ್ನು ಪರಿಗಣಿಸಿ, ಇಂತಿಷ್ಟು ಹಣವನ್ನು ನೀಡಿ, ಅವರನ್ನು ಗೌರವಯುತವಾಗಿ ಬೀಳ್ಕೊಡಲಾಗುತ್ತಿದೆ. ಇದು ನಮ್ಮ ಒಕ್ಕೂಟದ ಹೆಮ್ಮ ಎಂದರು. ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಹಕಾರ ಒಕ್ಕೂಟ ಸಂಘಗಳಿಂದ ಪಡೆದುಕೊಳ್ಳುವ ಸಹಕಾರ ಶಿಕ್ಷಣ ನಿಧಿಯನ್ನು ಅವರ ಶಿಕ್ಷಣ ಮತ್ತು ನೈಪುಣ್ಯತೆಗೆ ಬಳಕೆ ಮಾಡುತ್ತಿದೆ. ಡೇರಿಗಳಲ್ಲಿ ತಪ್ಪದೇ ಸಹಕಾರ ಶಿಕ್ಷಣ ನಿಧಿ ನೀಡಬೇಕು. ನೌಕರರು, ಆಡಳಿತ ಮಂಡಲಿಯು ಒಟ್ಟಿಗೆ ಹೋದರೆ ಸಂಘ ಬಲಿಷ್ಠವಾಗುತ್ತದೆ ಎಂದರು. ಮಂಡ್ಯದ ವಕೀಲ ಶಿವಕುಮಾರ್, ಮೈಸೂರು ತರಬೇತಿ ಕೇಂದ್ರದ ಕೆಎಂಎಫ್ ಎಚ್.ಎಂ. ಮಹದೇವಸ್ವಾಮಿ ಸಹಕಾರ ಸಂಘಗಳ ಆಡಳಿತ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಸಹಕಾರ ಯೂನಿಯನ್ ನಿರ್ದೇಶಕರಾದ ಹರದನಹಳ್ಳಿ ಸುಂದ್ರಪ್ಪ, ಎಚ್.ಎಂ. ಬಸವಣ್ಣ, ಎಚ್.ಎಂ. ಮಹೇಶ್ ಪ್ರಭು, ಅಮಚವಾಡಿ ನಾಗಸುಂದರ್, ಎಂ. ಪ್ರಭುಸ್ವಾಮಿ, ದಾಕ್ಷಾಯಿಣಿ, ಚಾಮುಲ್ ನಾಮ ನಿರ್ದೇಶಕ ಕೆ.ಕೆ. ರೇವಣ್ಣ, ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್, ಉಪ ವ್ಯವಸ್ಥಾಪಕ ಡಾ. ಅಮರ್, ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನುಜ, ಮಾನೇಜರ್ ಮಲ್ಲಿಕಾರ್ಜುನ್, ಮಲ್ಲೇಶ್, ಕೆಂಡಗಣ್ಣ ಹಾಗೂ ತಾಲೂಕಿನ ವಿವಿಧ ಡೇರಿಗಳ ಸಿಇಒಗಳು ಭಾಗವಹಿಸಿದ್ದರು.

Share this article