ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲೂ ಯುವಜನರು ಮತ್ತು ರೈತರು ತಮ್ಮ ರಾಸುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು. ನಗರ ಪ್ರದೇಶಗಳಲ್ಲೂ ಅಲ್ಲಲ್ಲಿ ರಾಸುಗಳನ್ನು ಕಟ್ಟಿ ಉತ್ಸಹದಿಂದಲೇ ಸಂಜೆ ಕಿಚ್ಚು ಹಾಯಿಸಿದರು.
ಉತ್ತರಾಯಣ ಕಾಲದ ಮೊದಲ ಹಬ್ಬ ಸಂಕ್ರಾಂತಿಯು ರೈತ ಸಮುದಾಯಕ್ಕೆ ವಿಶೇಷ. ತಾವು ಸಾಕಿದ ರಾಸುಗಳನ್ನು ಅಲಂಕರಿಸಿ ಅವುಗಳೊಂದಿಗೆ ಫೋಟೋ ತೆಗೆಸಿಕೊಂಡು, ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ರೈತರು ಆಚರಿಸುತ್ತಾ ಬರುತ್ತಿದ್ದಾರೆ. ಗ್ರಾಮಗಳಲ್ಲಿ ರೈತರು ಸಾಮೂಹಿಕವಾಗಿ ರಾಸುಗಳನ್ನು ಕಿಚ್ಚು ಹಾಯಿಸಿದ್ದು ಗಮನ ಸೆಳೆಯಿತು.ಸಂಕ್ರಾಂತಿ ಹಬ್ಬದ ಅಂಗವಾಗಿ ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ಸಾಂಕೇತಿಕವಾಗಿ ವಿಶೇಷ ಪೂಜೆ ಜರುಗಿದವು. ಧನುರ್ಮಾಸದ ಪ್ರಯುಕ್ತ ಕಳೆದ ಒಂದು ತಿಂಗಳಿಂದ ವಿವಿಧ ರೀತಿಯ ಪೂಜೆಗಳು ನಡೆಯುತ್ತಿದ್ದವು. ಬುಧವಾರ ಧನುರ್ಮಾಸದ ಪೂಜೆ ಸಮಾಪ್ತಿಗೊಳಿಸಿ ಉತ್ತರಾಯಣ ಪುಣ್ಯಕಾಲವಾದ ಗುರುವಾರ ಮಕರ ಸಂಕ್ರಾಂತಿ ಆಚರಿಸಲಾಯಿತು.
ಜನರು ಬೆಳಗ್ಗೆಯೇ ದೇವಾಲಯಗಳಿಗೆ ತೆರಳಿ ಅಕ್ಕಿ, ಬೆಲ್ಲ, ಬೇಳೆಕಾಳು ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ದೇಗುಲಗಳಲ್ಲಿ ಪ್ರಸಾದದ ರೂಪದಲ್ಲಿ ಪೊಂಗಲ್ ವಿತರಿಸಲಾಗುತ್ತಿತ್ತು. ಮಹಿಳೆಯರು, ಹೆಣ್ಣು ಮಕ್ಕಳು ತಮ್ಮ ನೆರೆಹೊರೆಯ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ ಬೀರಿ ಸಂತಸ ಹಂಚಿಕೊಂಡರು.ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿದರು. ರೈತರು ತಾವು ಬೆಳೆದ ದವಸ-ಧಾನ್ಯಗಳನ್ನು ದೇವಾಲಯಗಳಿಗೆ ನೀಡಿ ಪೂಜೆ ಸಲ್ಲಿಸಿದರು. ಹಬ್ಬದ ಅಂಗವಾಗಿ ತರಕಾರಿ, ಅವರೆಕಾಯಿ, ಹೂವು, ಕಬ್ಬು, ಎಳ್ಳು-ಬೆಲ್ಲ, ಉಡುಪು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತ್ತು.
ಹಬ್ಬದ ಮುನ್ನ ದಿನಗಳಲ್ಲಿ ರಾಸುಗಳ ಅಲಂಕಾರ ಹಾಗೂ ಹಬ್ಬ ಆಚರಣೆಗೆ ರೈತರು, ಸಾರ್ವಜನಿಕರು ಅಗತ್ಯವಾದ ವಸ್ತುಗಳನ್ನು ಖರೀದಿಸಿದ್ದರು. ನಗರ ಪ್ರದೇಶಗಳಲ್ಲಿ ಖರೀದಿಸಿ ತಂದ ರಾಸುಗಳ ಅಲಂಕಾರಿಕ ವಸ್ತುಗಳಿಂದ ನಗರವೂ ಸೇರಿದಂತೆ ಗ್ರಾಮೀಣ ಭಾಗದ ರೈತರು ತಮ್ಮ ರಾಸುಗಳನ್ನು ಅಲಂಕರಿಸಿ ಸಂಜೆ 5 ರ ನಂತರ ಕಿಚ್ಚು ಹಾಯಿಸಿ ಸಂಭ್ರಮಿಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ, ಚಾಮುಂಡೇಶ್ವರಿ ನಗರ, ಸ್ವರ್ಣಸಂದ್ರ, ಗುತ್ತಲು, ಕ್ಯಾತುಂಗೆರೆ, ಚಿಕ್ಕಮಂಡ್ಯ, ತಾಲೂಕಿನ ಹೊಳಲು ಗ್ರಾಮ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ತಮ್ಮ ರಾಸುಗಳನ್ನು ಕಿಚ್ಚು ಹಾಯಿಸಿದರು.
ಗೋವುಗಳಿಗೆ ಗೋಗ್ರಾಸ-ಇಂಡಿ ಬೂಸಾ ಪ್ರಸಾದ ವಿತರಣೆ:ತಾಲೂಕು ಪಣಕನಹಳ್ಳಿಯಲ್ಲಿ ಶ್ರೀಭೈರವೇಶ್ವರ ದೇವಾಲಯ ಆವರಣದಲ್ಲಿ ಕಿಚ್ಚು ಹಾಯಿಸುವುದಕ್ಕೆ ಮುಂಚಿತವಾಗಿ ರಾಸುಗಳಿಗೆ ಸಾಮೂಹಿಕವಾಗಿ ಗೋಗ್ರಾಸ (ಎಳ್ಳು, ಬೆಲ್ಲ, ಕಾಯಿ, ಇಂಡಿ-ಬೂಸಾ, ರವೆ) ಪ್ರಸಾದ ವಿತರಿಸಲಾಯಿತು.