ಹಾನಗಲ್ಲ: ವೈದ್ಯಕೀಯ ವೃತ್ತಿ ಗೌರವ ಕಾಪಾಡಿಕೊಂಡು ಇದನ್ನು ಸೇವೆ ಎಂದು ಸಮಾಜದ ಉಪಕಾರಕ್ಕೆ ನಿಂತರೆ ವೈದ್ಯ ವೃತ್ತಿ ಸಾರ್ಥಕತೆ ತಂದು ಕೊಡಬಲ್ಲದು ಎಂದು ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ. ಈಶ್ವರ ಮಾಳೋದೆ ಕರೆ ನೀಡಿದರು.
ವೈದ್ಯ ವೃತ್ತಿ ಈಗ ಹಳ್ಳಿಗಳವರೆಗೆ ವ್ಯಾಪಿಸಿದೆ. ಆದರೆ ಮುಗ್ಧ ಜನರಿಗೆ ನಕಲಿ ವೈದ್ಯರು ಪ್ರಾಣಾಪಾಯ ತಂದೊಡ್ಡುತ್ತಿದ್ದು, ಇದನ್ನು ತಡೆಯಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ. ವೈದ್ಯರು ತಮ್ಮ ಸೇವೆಯನ್ನು ಪಣಕ್ಕಿಟ್ಟು ಕೆಲಸ ಮಾಡುವ ಕೊರೊನಾದಂಥ ಸಂದರ್ಭಗಳು ವೈದ್ಯ ವೃತ್ತಿಗೆ ಬಲು ದೊಡ್ಡ ಸವಾಲಾಗಿವೆ. ಈ ಸಂದರ್ಭದಲ್ಲಿ ಹಲವು ವೈದ್ಯರೇ ಪ್ರಾಣ ಕಳೆದುಕೊಂಡರು. ಇನ್ನು ಕೆಲವರು ಸಾಹಸದಿಂದ ಬದುಕುಳಿದಿದ್ದಾರೆ. ಈ ನಡುವೆ ನಕಲಿ ವೈದ್ಯರ ಚಿಕಿತ್ಸೆಯಿಂದ ಸಣ್ಣ ಸಣ್ಣ ರೋಗಗಳೂ ಉಲ್ಬಣಗೊಂಡು ಹಲವು ರೋಗಿಗಳು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಈ ಬಗ್ಗೆ ಗ್ರಾಮ, ಪಟ್ಟಣಗಳಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳೂ ಕೂಡ ಕೈಜೋಡಿಸುವ ಅವಶ್ಯವಿದೆ ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾರುತಿ ಶಿಡ್ಲಾಪೂರ ಮಾತನಾಡಿ, ಎಲ್ಲ ಕ್ಷೇತ್ರಗಳೂ ಉತ್ತಮ ಸೇವಾ ಗುಣದಿಂದ ಕಾರ್ಯೋನ್ಮುಖವಾದರೆ ಸಾರ್ಥಕ ಸೇವೆಯಾಗಬಲ್ಲದು. ವೈದ್ಯರನ್ನು ದೇವತಾ ಸ್ವರೂಪದಲ್ಲಿ ಕಾಣಬೇಕಾದ ಸಂದರ್ಭಗಳೇ ಹೆಚ್ಚು. ಪ್ರತಿ ರೋಗಿಯೂ ವೈದ್ಯರ ಮೇಲೆ ಪರಿಪೂರ್ಣವಾದ ವಿಶ್ವಾಸವನ್ನಿಟ್ಟು ಚಿಕಿತ್ಸೆಗೆ ಒಳಗಾಗುತ್ತಾನೆ. ಕೆಲವು ರೋಗಗಳಿಂದ ಬಳಲುವವರು ಮರಣದ ಹತ್ತಿರವಿದ್ದಾಗಲೂ ವೈದ್ಯರ ಚಿಕಿತ್ಸೆಯಿಂದ ಗುಣಮುಖರಾಗಿ ಬದುಕಿ ಬಾಳಿದ ಸಾಕಷ್ಟು ಉದಾಹರಣೆಗಳಿವೆ. ಪತ್ರಿಕೆಗಳು ಸಮಾಜಕ್ಕೆ ಪೂರಕವಾದ ಸುದ್ದಿಗಳನ್ನು ನೀಡುವುದು ಹಾಗೂ ಸಮಾಜ ವಿಘಟಕ ಶಕ್ತಿಗಳ ವಿರುದ್ಧ ನಿರಂತರ ಜಾಗೃತಿ ಮೂಡಿಸುತ್ತಲೇ ಇವೆ ಎಂದರು.ಶಿರ್ಶಿಯ ಡಾ.ರೋಹಿತ್ ಹೆಗಡೆ ಮೂತ್ರರೋಗ ನಿರ್ವಹಣೆ ಕುರಿತು ವಿಚಾರಗಳನ್ನು ಮಂಡಿಸಿ, ಉರಿಮೂತ್ರದ ಬಗ್ಗೆ ಸಾರ್ವಜನಿಕರಲ್ಲಿ ತಪ್ಪುಕಲ್ಪನೆಗಳೇ ಹೆಚ್ಚಾಗಿವೆ. ಸಕಾಲಿಕವಾಗಿ ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಬದಲಾದ ವೈಜ್ಞಾನಿಕ ಆವಿಷ್ಕಾರಗಳ ನಡುವೆ ಯಾವುದೂ ಅಸಾಧ್ಯವಲ್ಲ. ಹಾರ್ಮೋನ್ ಸಮಸ್ಯೆಯಾದಾಗ ಇಂಥ ತೊಂದರೆಗಳು ಕಂಡು ಬರುತ್ತವೆ. ಆರಂಭದಲ್ಲೇ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ಸಲಹೆ ಮಾಡಿದರು.
ಸನ್ಮಾನ : ಇದೇ ಸಂದರ್ಭದಲ್ಲಿ ಪತ್ರಕರ್ತರರಾದ ಗಿರೀಶ ದೇಶಪಾಂಡೆ, ಮಾರುತಿ ಪೇಟಕರ, ಮಂಜುನಾಥ ಬಡಿಗೇರ, ರಾಜೇಶ ಪಾಟೀಲ, ಹೊನ್ನಪ್ಪ ಬಾರ್ಕಿ, ಇರ್ಫಾನ್ ನಾಗರೊಳ್ಳಿ, ಬಾಲಕೃಷ್ಣ ರಾಯ್ಕರ್, ಬಿ.ಎಸ್. ಅಪ್ಪಣ್ಣನವರ, ಲೋಕೇಶ ಸುಣಗಾರ ಅವರುಗಳನ್ನು ಪತ್ರಕರ್ತರ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.