ಮಂಗಗಳಿಗೂ ತಟ್ಟಿದ ಬಿಸಿಲಿನ ಬೇಗೆ

KannadaprabhaNewsNetwork |  
Published : Apr 03, 2025, 12:32 AM IST
ಹಳ್ಳಿಕೇರಿ ಗ್ರಾಮದಲ್ಲಿ ಚಲಿಸುವ ಟ್ರಾಕ್ಟರ್ ಮೇಲೆ ಮಂಗವೊಂದು ದಾಳಿಮಾಡಿ ಕುಳಿತಿರುವುದು. | Kannada Prabha

ಸಾರಾಂಶ

ಕಳೆದ ಒಂದೂವರೆ ತಿಂಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬೇಸಿಗೆಯ ಬೇಗೆಗೆ ಜನರಷ್ಟೇ ಅಲ್ಲದೇ ಜಾನುವಾರು ತೊಂದರೆ ಅನುಭವಿಸುತ್ತಿವೆ. ಜತೆಗೆ ಕಾಡಿನಲ್ಲಿರುವ ಕೆರೆ, ಹಳ್ಳ, ಕೊಳ್ಳಗಳು ಒಣಗಿ ಹೋಗಿರುವ ಹಿನ್ನೆಲೆಯಲ್ಲಿ ಮಂಗಗಳು ಪಟ್ಟಣ, ಗ್ರಾಮಗಳತ್ತ ಲಗ್ಗೆಯಿಡುತ್ತಿವೆ.

ಫಕೃದ್ದೀನ್ ಎಂ.ಎನ್.

ನವಲಗುಂದ: ಕಳೆದ ಒಂದೂವರೆ ತಿಂಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬೇಸಿಗೆಯ ಬೇಗೆಗೆ ಜನರಷ್ಟೇ ಅಲ್ಲದೇ ಜಾನುವಾರು ತೊಂದರೆ ಅನುಭವಿಸುತ್ತಿವೆ. ಜತೆಗೆ ಕಾಡಿನಲ್ಲಿರುವ ಕೆರೆ, ಹಳ್ಳ, ಕೊಳ್ಳಗಳು ಒಣಗಿ ಹೋಗಿರುವ ಹಿನ್ನೆಲೆಯಲ್ಲಿ ಮಂಗಗಳು ಪಟ್ಟಣ, ಗ್ರಾಮಗಳತ್ತ ಲಗ್ಗೆಯಿಡುತ್ತಿವೆ.

ಚಳಿಗಾಲ, ಮಳೆಗಾಲದಲ್ಲಿ ಹೊಲಗಳಲ್ಲಿ ಎಲ್ಲಿ ನೋಡಿದರಲ್ಲಿ ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿರುತ್ತಿತ್ತು. ಆದರೆ, ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಕಾರಣ ನೀರಿನ ಮೂಲಗಳೆಲ್ಲ ಒಣಗಿ ಹೋಗಿದ್ದು, ಕಾಡಲ್ಲಿ ನೆಲೆಸಿದ್ದ ಮಂಗಗಳು ಗ್ರಾಮಗಳತ್ತ ಲಗ್ಗೆಯಿಡುತ್ತಿರುವುದು ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಕೇರಿ ಗ್ರಾಮಸ್ಥರಿಗೆ ದೊಡ್ಡ ತಲೆ ನೋವಾಗಿ ಪರಿಣಿಮಿಸಿದೆ.

ಗ್ರಾಮದ ಹೊರವಲಯದಲ್ಲಿರುವ ಬೆಟ್ಟದಲ್ಲಿ ಮತ್ತು ಅರಣ್ಯಗಳಲ್ಲಿ ಸದಾಕಾಲ ಇರುತ್ತಿದ್ದ ಕೋತಿಗಳ ಹಿಂಡು ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶಗಳ ಕಡೆಗೆ ವಲಸೆ ಬರುತ್ತಿವೆ. ಮನೆಯ ಮುಂಭಾಗ, ಒಣಗಲು ಹಾಕಿರುವ ಬಟ್ಟೆಗಳನ್ನು ಕಿತ್ತು ಹಾಕುವುದು, ಅವುಗಳ ಮೇಲೆ ಮಲಮೂತ್ರ ವಿಸರ್ಜನೆ ಮಾಡುವುದು, ಮನೆಯೊಳಗೆ ಪ್ರವೇಶಿಸಿ ಹಣ್ಣು ಮತ್ತು ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಹೋಗುವುದು ಒಂದೆಡೆಯಾದರೆ ಇದನ್ನು ತಡೆಯಲು ಹೋಗುವ ಜನರ ಮೇಲೆ ಮಂಗಗಳು ಮುಗಿ ಬೀಳುವ ಮೂಲಕ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ.

ಮನೆಯ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನ, ಕಾರ್, ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳ ಮೇಲೆ ಕುಳಿತು ಆಸನ ಕಿತ್ತು ಹಾಕುವುದು, ಗ್ರಾಮದಲ್ಲಿ ಅಳವಡಿಸಲಾಗಿರುವ ಕೇಬಲ್‌ ವೈರ್‌ಗಳನ್ನು ಕಿತ್ತು ಹಾಕುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗಿದೆ. ಅಷ್ಟೇ ಅಲ್ಲದೇ ಅಂಗಡಿ ಮತ್ತು ತಳ್ಳುವ ಗಾಡಿಗಳಲ್ಲಿನ ಹಣ್ಣು, ತಿಂಡಿ ತಿನಿಸುಗಳನ್ನು ಕಿತ್ತುಕೊಂಡು ಹೋಗುತ್ತಿರುವುದರಿಂದ ವ್ಯಾಪಾರಸ್ಥರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ.

ಗ್ರಾಮಕ್ಕೆ ಯಾರೇ ಬ್ಯಾಗ್ ಹಿಡಿದುಕೊಂಡು ಬಂದರೆ ಸಾಕು ಅವರನ್ನು ಬೆನ್ನತ್ತಿ, ಬೆದರಿಸಿ ಕೈಯಲ್ಲಿರುವ ಬ್ಯಾಗ್ ಕಸಿದುಕೊಂಡು ಅದರಲ್ಲಿನ ತಿಂಡಿ- ತನಿಸು ತಿಂದು ಹಾಕುತ್ತಿವೆ. ಹೀಗಾಗಿ, ಗ್ರಾಮಕ್ಕೆ ಬರುವ ಜನರು ಭಯದಲ್ಲಿಯೇ ಆಗಮಿಸುವಂತಾಗಿದೆ. ಈ ಕುರಿತು ಗ್ರಾಪಂ ಆಡಳಿತ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಈ ಸಮಸ್ಯೆಗೆ ಮುಕ್ತಿ ದೊರೆಕಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಕೋತಿಗಳ ಸೆರೆ

ಹಳ್ಳಿಕೇರಿ ಗ್ರಾಮದಲ್ಲಿ ಮಂಗಗಳ ಕಾಟ ಹೆಚ್ಚಾಗಿರುವುದು ನಿಜ. ಹಲವಾರು ಮಂಗಗಳು ಗ್ರಾಮದಲ್ಲೇ ಬೀಡು ಬಿಟ್ಟಿವೆ. ಪಂಚಾಯಿತಿ ಅಧ್ಯಕ್ಷರು, ಮೇಲಧಿಕಾರಿಗಳ ಗಮನಕ್ಕೆ ತಂದು ಅರಣ್ಯ ಇಲಾಖೆಯವರಿಗೆ ತಿಳಿಸಿ ಕೋತಿಗಳ ಸೆರೆ ಹಿಡಿಯಲಾಗುವುದು.

ಗುರುನಾಥ ಜೋಗಿ, ಪಿಡಿಒ200ಕ್ಕೂ ಅಧಿಕ

ಹಳ್ಳಿಕೇರಿ ಗ್ರಾಮದಲ್ಲಿ 2 ವರ್ಷಗಳಿಂದ ಸುಮಾರು 200ಕ್ಕೂ ಅಧಿಕ ಮಂಗಗಳ ಕಾಟ ಹೆಚ್ಚಾಗಿದೆ. ಜನರ ಮೇಲೆ ದಾಳಿ ಮಾಡುವ ಮೂಲಕ ನಿತ್ಯ ತೊಂದರೆ ಕೊಡುತ್ತಿವೆ. ಆದಷ್ಟು ಬೇಗನೆ ಮಂಗಗಳನ್ನು ಸೆರೆ ಹಿಡಿಯುವ ಕಾರ್ಯವಾಗಲಿ.

- ಪ್ರಭು ಕಮ್ಮಾರ, ಹಳ್ಳಿಕೇರಿ ಗ್ರಾಮಸ್ಥ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''