ಗಿಡಗಂಟೆಗಳು ಬೆಳೆದು ಸಂಪೂರ್ಣ ಮುಚ್ಚಿರುವ ಹೇಮಾವತಿ ಎಡದಂಡೆ ನಾಲೆ

KannadaprabhaNewsNetwork |  
Published : Jul 08, 2024, 12:33 AM IST
6ಕೆಎಂಎನ್ ಡಿ11,12 | Kannada Prabha

ಸಾರಾಂಶ

ಉದ್ಘಾಟನೆಗೆ ತೋರಿದ ಉತ್ಸಾಹವನ್ನು ಅಂದಿನ ಸಚಿವರು ಕಾಮಗಾರಿ ಮುಕ್ತಾಯಕ್ಕೆ ತೋರಿಸಲಿಲ್ಲ. ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರ ಅಲ್ಲಲ್ಲಿ ಕಾಮಗಾರಿ ಹೆಸರಿನಲ್ಲಿ ವಿತರಣಾ ನಾಲೆಯನ್ನು ಕಿತ್ತು ಹಾಕಿದ್ದನ್ನು ಹೊರತುಪಡಿಸಿದರೆ ಕಾಮಗಾರಿ ಮಾತ್ರ ಪ್ರಗತಿ ಕಾಣಲಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹೇಮಾವತಿ ಜಲಾಶಯದ ಎಡದಂಡೆಯ 54ನೇ ವಿತರಣಾ ನಾಲೆ ನೀರಾವರಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಂಪೂರ್ಣ ಮುಚ್ಚಿಹೋಗಿದೆ. ನಾಲೆಯಲ್ಲಿ ನೀರು ಹರಿಸಿದರೂ ಕೊನೆ ಭಾಗದ ರೈತರ ಕೃಷಿ ಭೂಮಿಗೆ ತಲುಪದ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಕುಂದೂರು ಗ್ರಾಮದ ಎಲ್ಲೆಯಲ್ಲಿರುವ ಹೇಮಾವತಿ ಎಡದಂಡೆ ಸರಪಳಿ 118.500 ಕಿ.ಮೀ ನಲ್ಲಿ ಡಿ-54 ವಿತರಣಾ ನಾಲೆ ಕಸಬಾ ಹೋಬಳಿಯ ಮಲ್ಲೇನಹಳ್ಳಿಯಲ್ಲಿ ಕೊನೆಗೊಳ್ಳಲಿದೆ. 66 ಕ್ಯುಸೆಕ್ ಸಾಮರ್ಥ್ಯದ ಸುಮಾರು 31.25 ಕಿ.ಮೀ ಉದ್ದದ ನಾಲೆ 5371 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ.

ಈ ನಾಲೆ ವ್ಯಾಪ್ತಿಯಲ್ಲಿರುವ 15 ಸಣ್ಣ ನೀರಾವರಿ ಕೆರೆಗಳನ್ನು ಸೋರು ನೀರಿನಿಂದ ತುಂಬಿಸಲಾಗುತ್ತದೆ. ಈ ಕೆರೆಗಳು ಕೂಡಾ ಸುಮಾರು 1175 ಎಕರೆ ಜಮೀನುಗಳಿಗೆ ನೀರು ಒದಗಿಸುತ್ತವೆ. ಈ ನಾಲೆಯಲ್ಲಿ ನೀರು ಹರಿದರೆ ಕುಂದೂರುನಿಂದ ಮಲ್ಲೇನಹಳ್ಳಿಯವರೆಗೆ ಅಂತರ್ಜಲ ಹೆಚ್ಚಾಗಿ ಈ ಭಾಗದ ಎಲ್ಲಾ ಬೋರ್‌ ವೇಲ್ ಗಳಲ್ಲಿ ನೀರು ಮರುಪೂರಣವಾಗುತ್ತವೆ.

ಈ ನಾಲೆ ವ್ಯಾಪ್ತಿಗೆ ಸೇರುವ ಅಧಿಕೃತ ಜಮೀನಿನ ಎರಡು ಪಟ್ಟು ಜಮೀನುಗಳಿಗೆ ನೀರು ಒದಗುತ್ತದೆ. ಆದರೆ, ನೀರಾವರಿ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ 54 ನೇ ವಿತರಣಾ ನಾಲೆ ತನ್ನ ನೀರು ಹರಿಸುವ ಸಾಮರ್ಥ್ಯವನ್ನು ಕಳೆದುಕೊಂಡು ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

1984-85 ನೇ ಸಾಲಿನಲ್ಲಿ ಆರಂಭವಾದ ಈ ನಾಲೆಯಲ್ಲಿ ಕೆಲವು ವರ್ಷಗಳ ಕಾಲ ಸಂಪೂರ್ಣವಾಗಿ ನೀರು ಹರಿದು ರೈತರ ಮೊಗದಲ್ಲಿ ಸಂತಸ ತಂದಿತ್ತು. ಅನಂತರ ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕ ವಿನ್ಯಾಸದಿಂದ ನಾಲೆಯಲ್ಲಿ ನೀರು ಹರಿಯುವಿಕೆ ಪ್ರಮಾಣ ಕಡಿಮೆ ಆಗುತ್ತಾ ಬಂತು. ಪರಿಣಾಮ ಈಗ ಕೇವಲ 18 ಕಿ.ಮೀ ವರೆಗೆ ಮಾತ್ರ ನೀರು ಹರಿಯುತ್ತಿದೆ.

ಒಟ್ಟು 6646 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೇವಲ 2698 ಎಕರೆಗೆ ಮಾತ್ರ ನೀರು ಒದಗಿಸಲಾಗುತ್ತಿದೆ. ಇನ್ನು ಉಳಿದ 3948 ಎಕರೆ ಪ್ರದೇಶ ನೀರಾವರಿಯಿಂದ ವಂಚಿತವಾಗಿದೆ. ಈ ವಿತರಣಾ ನಾಲೆ ವ್ಯಾಪ್ತಿಯ 15 ಕೆರೆಗಳಲ್ಲಿ 8 ಕೆರೆಗಳು ನೀರಿನ ಅಭಾವ ಎದುರಿಸುತ್ತಿವೆ. ಕೆರೆ ಅವಲಂಬಿಸಿರುವ ಗ್ರಾಮಗಳ ಜಾನುವಾರುಗಳು ಮತ್ತು ಕಾಡಿನ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ.

ನಾಲೆ ದುರಸ್ತಿಗೆ 2013ರಿಂದಲೇ ಹೋರಾಟ:

ನಾಲೆ ದುರಸ್ತಿಗಾಗಿ ಮಾಕವಳ್ಳಿ ಕುಮಾರ್ ನೇತೃತ್ವದಲ್ಲಿ ರೈತರು 2013 ರಿಂದಲೇ ಹೋರಾಟ ಆರಂಭಿಸಿದ್ದರು. ಅಂದಿನ ಶಾಸಕರಾಗಿದ್ದ ಕೆ.ಸಿ.ನಾರಾಯಣಗೌಡರು ನಾಲೆ ಅಧುನೀಕರಣಕ್ಕೆ ಮುಂದಾದರು. ಇದಕ್ಕಾಗಿ ಸುಮಾರು 55 ಕೋಟಿ ರು. ಅಂದಾಜು ವೆಚ್ಚದ ಯೋಜನೆ ರೂಪಿಸಿ ತರಾತುರಿಯಲ್ಲಿ ಟೆಂಡರ್ ಕರೆದು ಪಿ.ಕೆ.ಶಿವರಾಮು ಎನ್ನುವ ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಣೆಯನ್ನು ವಹಿಸಲಾಯಿತು.

ಉದ್ಘಾಟನೆಗೆ ತೋರಿದ ಉತ್ಸಾಹವನ್ನು ಅಂದಿನ ಸಚಿವರು ಕಾಮಗಾರಿ ಮುಕ್ತಾಯಕ್ಕೆ ತೋರಿಸಲಿಲ್ಲ. ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರ ಅಲ್ಲಲ್ಲಿ ಕಾಮಗಾರಿ ಹೆಸರಿನಲ್ಲಿ ವಿತರಣಾ ನಾಲೆಯನ್ನು ಕಿತ್ತು ಹಾಕಿದ್ದನ್ನು ಹೊರತುಪಡಿಸಿದರೆ ಕಾಮಗಾರಿ ಮಾತ್ರ ಪ್ರಗತಿ ಕಾಣಲಿಲ್ಲ.

ಈಗ ಮಳೆಗಾಲ ಆರಂಭವಾಗಿದೆ. ಹೇಮಾವತಿ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿದೆ. ಹೇಮಾವತಿ ಕಾಲುವೆಗೆ ನೀರು ಹರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ರೈತರ ಒತ್ತಡ ಹೆಚ್ಚುತ್ತಿರುವುದರಿಂದ ಯಾವುದೇ ಕ್ಷಣದಲ್ಲಾದರೂ ಹೇಮಾವತಿ ಜಲಾಶಯದಿಂದ ಮುಖ್ಯ ನಾಲೆಗೆ ನೀರು ಹರಿಸಬಹುದು. ಆದರೆ, ನಾಲೆಯಲ್ಲಿ ನೀರು ಹರಿದರೂ ವಿತರಣಾ ನಾಲೆ ಸಂಪೂರ್ಣವಾಗಿ ಗಿಡ-ಗಂಟೆಗಳಿಂದ ಮುಚ್ಚಿ ಹೋಗಿ ತನ್ನ ನೀರು ಹರಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದೆ.

ಗುತ್ತಿಗೆದಾರ ಕಾಮಗಾರಿ ನಿರ್ವಹಣೆಯತ್ತ ತಲೆಹಾಕಿಲ್ಲ. ನೀರಾವರಿ ಇಲಾಖೆ ತನ್ನ ಜವಾಬ್ದಾರಿ ಅರಿತು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದರೆ ಮಾತ್ರ ಈ ಭಾಗದ ರೈತರು ಹೇಮೆಯ ನೀರಿನಿಂದ ಅನ್ನ ಬೆಳೆಯಲು ಸಾಧ್ಯ ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ.

‘ಮುಚ್ಚಿ ಹೋಗಿರುವ ಹೇಮಾವತಿ ಎಡದಂಡೆ 54ನೇ ವಿತರಣೆ ನಾಲೆ ದುರಸ್ತಿಗೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಗಮನ ಹರಿಸಬೇಕು. ನಾಲೆಗೆ ನೀರು ಬಿಡುವ ಮುನ್ನವೇ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕಿ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಿಸಿ ದುರಸ್ತಿ ಕಾರ್ಯ ಮಾಡಿಸಬೇಕು.’

ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ.

PREV

Recommended Stories

ಕರಾವಳಿ, ಮಲೆನಾಡದಲ್ಲಿ ಗಾಳಿಸಹಿತ ಜಡಿ ಮಳೆ : ಶಾಲೆಗಳಿಗೆ ಇಂದು ರಜೆ
ಆರೆಸ್ಸೆಸ್‌ ಭಾರತದ ತಾಲಿಬಾನ್‌: ಹರಿಪ್ರಸಾದ್ ವಿವಾದ