ದೇಶದ ಸ್ವಾತಂತ್ರ್ಯಕ್ಕೆ ಪ್ರಾಣ ಕೊಟ್ಟ ವೀರರು ನಮಗೆ ಸ್ಫೂರ್ತಿ

KannadaprabhaNewsNetwork |  
Published : Aug 17, 2026, 03:15 AM IST
(ಪೋಟೋ-16ಬಿಕೆಟಿ6, ದಶ ಮಾಜಿ ಸೈನಿಕರಿಗೆ ಗೌರವ ಸಮ್ಮಾನ ನಡೆಯಿತು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಬ್ರಿಟಿಷರ ದಾಸ್ಯದ ಸಂಕೋಲೆ ಕಳಚಿ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಅಂದಿನ ಬಾಗಲಕೋಟೆ-ವಿಜಯಪುರ ನಾಡಿನ ಕ್ರಾಂತಿವೀರರ ಹೋರಾಟ ಹಾಗೂ ಇಂದು ದೇಶದ ಗಡಿ ಕಾಯುವ ಸೈನಿಕರ ಸಾಹಸಮಯ ಜಾಗೃತಿ ನಮ್ಮ ಸ್ವಾತಂತ್ರ್ಯವನ್ನು ಪರಿಪೂರ್ಣಗೊಳಿಸಿವೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬ್ರಿಟಿಷರ ದಾಸ್ಯದ ಸಂಕೋಲೆ ಕಳಚಿ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಅಂದಿನ ಬಾಗಲಕೋಟೆ-ವಿಜಯಪುರ ನಾಡಿನ ಕ್ರಾಂತಿವೀರರ ಹೋರಾಟ ಹಾಗೂ ಇಂದು ದೇಶದ ಗಡಿ ಕಾಯುವ ಸೈನಿಕರ ಸಾಹಸಮಯ ಜಾಗೃತಿ ನಮ್ಮ ಸ್ವಾತಂತ್ರ್ಯವನ್ನು ಪರಿಪೂರ್ಣಗೊಳಿಸಿವೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.ನಗರದ ಕಾರ್ಹಳ್ಳದಲ್ಲಿರುವ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶರಣಬಸವ ಆಶ್ರಮದಲ್ಲಿ ಹಮ್ಮಿಕೊಂಡ 80ನೇ ಸ್ವಾತಂತ್ರ್ಯೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ನೆತ್ತರೆತ್ತಿದ ಸ್ವಾತಂತ್ರ್ಯಕ್ಕೆ ಸೈನಿಕರ ಕಾವಲು. ಅಂದಿನ ಸೇನಾನಿಗಳ ತ್ಯಾಗ, ಇಂದಿನ ಯೋಧರ ರಕ್ಷಣೆ. ಭಾರತೀಯರ ಸ್ವಾತಂತ್ರ್ಯ ಜೀವನಕ್ಕೆ ಆಧಾರವಾಗಿದೆ ಎಂದರು. ಅಂದು ಬ್ರಿಟಿಷರೆದುರು ಕೆಚ್ಚೆದೆಯ ಕ್ರಾಂತಿಯನ್ನು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಗಲಕೋಟೆ ಜಿಲ್ಲೆಯ ಹಲಗಲಿಯ ಬೇಡರು ತಮ್ಮ ಶಸ್ತ್ರಾಸ್ತ್ರಗಳನ್ನು ಬ್ರಿಟಿಷರಿಗೆ ಒಪ್ಪಿಸದೆ ವೀರಾವೇಶದಿಂದ ಹೋರಾಡಿ ಪ್ರಾಣಾರ್ಪಣೆ ಮಾಡಿದ್ದರು. ವಿಜಯಪುರದ ಮಸಬಿನಾಳದಂತಹ ಗ್ರಾಮಗಳು ನೂರಾರು ದೇಶಭಕ್ತರನ್ನು ಹೋರಾಟಕ್ಕಿಳಿಸಿದ ಇತಿಹಾಸವನ್ನು ಹೊಂದಿವೆ. ಶ್ರೀನಿವಾಸರಾವ್ ಕೌಜಲಗಿ, ಹರ್ಡಕರ್ ಮಂಜಪ್ಪ ಹಾಗೂ ಗಂಗಾಧರರಾವ್ ದೇಶಪಾಂಡೆ ಅವರಂತಹ ಗಣ್ಯರ ಮಾರ್ಗದರ್ಶನದಲ್ಲಿ ಈ ಭಾಗದ ಯುವಕರು ಹಾಗೂ ಖಾದಿ ಕ್ರಾಂತಿಗಾಗಿ ಉಮಾಬಾಯಿ ನೇತೃತ್ವದಲ್ಲಿ ಸಹಸ್ರಾರು ಮಹಿಳೆಯರು ನಿಸ್ವಾರ್ಥವಾಗಿ ತಮ್ಮ ಜೀವವನ್ನೇ ಮಾತೃಭೂಮಿಗೆ ಅರ್ಪಿಸಿದ್ದರು ಎಂದು ನೆನಪಿಸಿದರು.ಇಂದು ಗಡಿಯಲ್ಲಿ ಜೀವನ್ಮರಣದ ಹೋರಾಟ. ಸ್ವಾತಂತ್ರ್ಯ ಸೇನಾನಿಗಳು ಗಳಿಸಿಕೊಟ್ಟ ಈ ಅಮೂಲ್ಯ ಸ್ವಾತಂತ್ರ್ಯಕ್ಕೆ ಯಾವುದೇ ಕುಂದು ಬಾರದಂತೆ ಇಂದು ಭಾರತೀಯ ಸೈನಿಕರು ಹಿಮಚ್ಛಾದಿತ ಸಿಯಾಚಿನ್, ರಣಬಿಸಿಲ ಮರುಭೂಮಿ ಹಾಗೂ ಭೀಕರ ಕಾಡುಗಳಲ್ಲಿ ಹಗಲಿರುಳೆನ್ನದೆ ಕಾವಲು ಕಾಯುತ್ತಿದ್ದಾರೆ. ಶತ್ರುಪಡೆಗಳ ಆಕ್ರಮಣ ಹಾಗೂ ಭಯೋತ್ಪಾದನೆಯ ಸವಾಲುಗಳ ನಡುವೆ ಸೈನಿಕರು ನಡೆಸುವ ಜೀವನ್ಮರಣದ ಹೋರಾಟವೇ ಇಡೀ ದೇಶದ ಸುರಕ್ಷತೆಗೆ ಭದ್ರ ಬುನಾದಿಯಾಗಿದೆ ಎಂದರು.

ಅಂದು ಹಳಗಳ್ಳಿಯ ಬೇಡರಂತಹ ನಾಡಿನ ವೀರರು ಬಿತ್ತಿದ ದೇಶಭಕ್ತಿಯ ಬೀಜವೇ ಇಂದು ಪ್ರತಿಯೊಬ್ಬ ಸೈನಿಕನ ಧಮನಿಯಲ್ಲೂ ರಕ್ತವಾಗಿ ಹರಿಯುತ್ತಿದೆ. ಸ್ವಾತಂತ್ರ್ಯ ತಂದುಕೊಟ್ಟ ಅಂದಿನ ಸ್ವಾತಂತ್ರ್ಯ ಸೇನಾನಿಗಳು ಮತ್ತು ಅದನ್ನು ಗಡಿಯಲ್ಲಿ ಪ್ರಾಣದ ಹಂಗು ತೊರೆದು ಕಾಯುತ್ತಿರುವ ಇಂದಿನ ಮಿಲಿಟರಿ ಯೋಧರ ಈ ಸಾಗರಸದೃಶ ತ್ಯಾಗದಿಂದಾಗಿ ಭಾರತದ ಸ್ವಾತಂತ್ರ್ಯ ಇಂದು ಪರಿಪೂರ್ಣಗೊಂಡಿದೆ ಎಂದರು.ದಶ ಮಾಜಿ ಸೈನಿಕರಿಗೆ ಗೌರವ ಸಮ್ಮಾನ ನಡೆಯಿತು:

ಪ್ರವಚನಕಾರ ಅಮರೇಶ್ವರ ಶಾಸ್ತ್ರಿಗಳು ಗುಡ್ಡಾಪುರದ ದಾನಮ್ಮ ದೇವಿ ಜೀವನ ದರ್ಶನ ಪ್ರವಚನ ಮಾಲಿಕೆಯಲ್ಲಿ ದಾನಮ್ಮ ಜನನ ಪೂರ್ವ ಸಂದರ್ಭವನ್ನು ಪ್ರಸ್ತುತಪಡಿಸಿದರು. ಶ್ರೀಕಾಂತ ದೇವರು ನಾನಾರು ಕುರಿತು ಉಪನ್ಯಾಸ ನೀಡಿದರು.

ಮಲ್ಲಿಕಾರ್ಜುನ ಕೋಲ್ಹಾರ ನಿರೂಪಿಸಿದರು. ಶಶಿಧರ ಹೀರೆಮಠ, ಬಳ್ಳಾರಿ ಅವರು ವಚನ ಸಂಗೀತ ನಡೆಸಿಕೊಟ್ಟರು, ಶ್ರೀಪೀಠದ ಧರ್ಮದರ್ಶಿಗಳು, ಹಾಗೂ ಅಕ್ಕನ ಬಳಗದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ, ಜನಜಾನುವಾರುಗಳಿಗೆ ಮಾತ್ರ ನೀರು ಬಿಡುಗಡೆ
ಅಭಿವೃದ್ಧಿ ಫಲ ಕಡೆಯ ವ್ಯಕ್ತಿಗೂ ಸಿಗಲಿ: ಪ್ರೊ.ವಿಜಯಾ