ಹಲವೆಡೆ ಭೂ ಕುಸಿತ, ಧರೆಗುರುಳಿದ ಮರಗಳಿಂದ ಸಂಚಾರ ಬಂದ್ । ಕಿಗ್ಗಾದಲ್ಲಿ 256.4 ಮಿ.ಮೀ ಮಳೆ ದಾಖಲು
ನ್ನಡಪ್ರಭ ವಾರ್ತೆ ಚಿಕ್ಕಮಗಳೂರುಪುನರ್ವಸು ಮಳೆಯ ಆರ್ಭಟಕ್ಕೆ ಕಾಫಿಯ ನಾಡು ತತ್ತರಿಸಿದ್ದು, ಶ್ರೀ ಶಾರದಾಂಬೆಯ ತವರೂರು ಶೃಂಗೇರಿ ಜಲ ದಿಗ್ಬಂಧನಕ್ಕೆ ಒಳಗಾಗಿದೆ. ಹಲವು ಪ್ರಮುಖ ರಸ್ತೆಗಳು ಸೇರಿ ತಗ್ಗಿನ ಪ್ರದೇಶಗಳು ಜಲಾವ್ರತವಾಗಿವೆ. ಮರಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಹಲವೆಡೆ ಧರೆ ಕುಸಿತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಬಲವಾಗಿ ಬೀಸುತ್ತಿರುವ ಗಾಳಿಗೆ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಮಲೆನಾಡಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕಳೆದ 24 ಗಂಟೆಗಳಲ್ಲಿ ವರುಣನ ರೌದ್ರನರ್ತನಕ್ಕೆ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು, ಹಳ್ಳಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಹೊಲಗದ್ದೆಗಳು, ರಸ್ತೆಗಳು ಜಲಾವ್ರತವಾಗಿವೆ.ಶೃಂಗೇರಿ ಪಟ್ಟಣದಲ್ಲಿ 165 ಮಿ.ಮೀ ಮಳೆಯಾಗಿದ್ದರೆ, ಕಿಗ್ಗಾದಲ್ಲಿ 256.4 ಹಾಗೂ ಕೆರೆಕಟ್ಟೆಯಲ್ಲಿ 280 ಮಿ.ಮೀ. ಮಳೆಯಾಗಿದ್ದರಿಂದ ತುಂಗಾ ನದಿಯ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾದ ಪರಿಣಾಮ ಶೃಂಗೇರಿ ಪಟ್ಟಣ ಮಂಗಳವಾರ ಜಲ ದಿಗ್ಬಂಧನಕ್ಕೆ ಒಳಗಾಗಿತ್ತು.ನೆಮ್ಮಾರ್ ಬಳಿ ಶೃಂಗೇರಿ-ಮಂಗಳೂರು ರಸ್ತೆ ಜಲಾವ್ರತವಾಗಿದ್ದು, ಶೃಂಗೇರಿ ಪಟ್ಟಣದಿಂದ ಕಿಗ್ಗಾಕ್ಕೆ ತೆರಳುವ ರಸ್ತೆ ಮಾಣಿಬೈಲು ಬಳಿ ಸಂಪರ್ಕ ಕಡಿತಗೊಂಡಿದೆ. ಶೃಂಗೇರಿ ಪಟ್ಟಣದಲ್ಲಿ ಭಾರತೀ ಬೀದಿ, ಕೆವಿಆರ್ ಸಂಪರ್ಕದ ಬೈಪಾಸ್ ರಸ್ತೆ, ಶ್ರೀ ಮಠದ ನರಸಿಂಹ ವನ ರಸ್ತೆ, ಶೃಂಗೇರಿ- ಕೊಪ್ಪ ಕಾವಾಡಿ ರಸ್ತೆ, ಗಾಂಧಿ ಮೈದಾನ ಹಾಗೂ ವಿದ್ಯಾರಣ್ಯಪುರ ರಸ್ತೆ ಸ್ಥಗಿತಗೊಂಡಿದೆ. ಶ್ರೀ ಮಠದ ಭೋಜನ ಶಾಲೆಗೆ ನೀರು ನುಗ್ಗಿದ್ದು, ಕಪ್ಪೆ ಶಂಕರ ದೇವಾಲಯ, ಸಂಧ್ಯಾವಂದನಾ ಮಂಟಪ ಮುಳುಗಡೆಯಾಗಿವೆ.
*ರಸ್ತೆಯ ಉದ್ದಕ್ಕೂ ಬಿದ್ದ ಮರಗಳು:ಗಾಳಿ ರಭಸಕ್ಕೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತಿದ್ದು, ಇದರಿಂದಾಗಿ ಮಲೆನಾಡಿನ ಜನರು ಮನೆಯಿಂದ ಹೊರಗೆ ಬರಲು ಆತಂಕ ಪಡುತ್ತಿದ್ದಾರೆ. ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕೇಳಗೂರು ಸಮೀಪದ ಜೆ.ಹೊಸಳ್ಳಿ-ಮಾಳಿಗಾನಾಡು ರಸ್ತೆಯ ಉದಕ್ಕೂ ಹಲವು ಮರಗಳು ಬಿದ್ದಿದ್ದು, ಅವುಗಳ ತೆರವು ಕಾರ್ಯಾಚರಣೆ ಬೆಳಗ್ಗೆಯಿಂದಲೇ ಶುರುವಾಗಿದೆ.
ಕೊಟ್ಟಿಗೆ ಹಾರದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಂಪೌಂಡ್ ಮಳೆಯಿಂದಾಗಿ ನೆಲಕ್ಕೆ ಅಪ್ಪಳಿಸಿದ್ದು, ಕೇಳಗೂರಿನ ಕಾಫಿ ಎಸ್ಟೇಟ್‌ನಲ್ಲಿರುವ ಮನೆಗಳ ಮೇಲೆ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಮೂವರಿಗೆ ಗಾಯವಾಗಿದ್ದು, ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳಸ ತಾಲೂಕಿನಾದ್ಯಂತ ಸರಿದ ಮಳೆಗೆ ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ್ ಸೇತುವೆ ಸೋಮವಾರ ರಾತ್ರಿ ಮುಳುಗಡೆಯಾಗಿದ್ದು, ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಸಂಚರಿಸದಂತೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಮಂಗಳವಾರ ಬೆಳಗ್ಗೆ ನೀರಿನ ಪ್ರಮಾಣ ಇಳಿಮುಖವಾಗಿದ್ದರಿಂದ ಸೇತುವೆಯಲ್ಲಿ ಓಡಾಡಲು ದಾರಿ ಮುಕ್ತವಾಗಿತ್ತು.ನಾರ್ವೆಯಲ್ಲಿ ಭೂ ಕುಸಿತಚಿಕ್ಕಮಗಳೂರು-ಕೊಪ್ಪ ರಸ್ತೆಯಲ್ಲಿರುವ ನಾರ್ವೆ ಬಳಿ ಉಂಟಾದ ಭೂ ಕುಸಿತದಿಂದ ಜಿಲ್ಲಾಡಳಿತ ಮಾರ್ಗ ಬದಲಾವಣೆ ಮಾಡಿದೆ. ನಾರ್ವೆ ಸರ್ಕಲ್‌ನಿಂದ ನಾಗಲಾಪುರ ಮೂಲಕ ಕೊಪ್ಪ ಪಟ್ಠಣಕ್ಕೆ ಹಾಗೆಯೇ ಕೊಪ್ಪದಿಂದ ಹಂದಗಾರ ಮೂಲಕ ಕಲ್ಕೆರೆ ಮುಖ್ಯ ರಸ್ತೆಗೆ ತಲುಪಿ ಚಿಕ್ಕಮಗಳೂರಿಗೆ ಸಂಪರ್ಕಿಸಬಹುದಾಗಿದೆ. ಹರಿಹರಪುರ ಬಳಿ ಸೂರುಳಿ, ಬಸರೀಕಟ್ಟೆಯ ಭರ್ಕನಕಟ್ಟೆ, ಬಿಳಲಕೊಪ್ಪ ರಸ್ತೆ, ಗುಡ್ಡೆ ತೋಟದ ಉಮೇಶ್ ಎಂಬುವವರ ಮನೆ ಬಳಿ ಧರೆ ಕುಸಿತ ಉಂಟಾಗಿದೆ. ಕೊಪ್ಪದಲ್ಲಿ ಬಿಸಿದ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ಬಿದ್ದು ಕೊಪ್ಪ ಪಟ್ಟಣದಲ್ಲಿ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ವಿದ್ಯುತ್ ಸಂಪರ್ಕದಲ್ಲಿ ಅಡಚಣೆ ಉಂಟಾಗಿತ್ತು.
ಎನ್.ಆರ್.ಪುರ ತಾಲೂಕಿನ ಕುದುರೆಗುಂಡಿ-ಕಾನೂರು ಬಳಿ ಮಧ್ಯದಲ್ಲಿರುವ ಕಪಿಲಾಹಳ್ಳದ ನೀರು ರಸ್ತೆ ಬಂದಿದ್ದರಿಂದ ರಸ್ತೆ ಸಂಚಾರ ಬಂದ್ ಆಗಿದ್ದು. ಕಡವಂತಿ ಗ್ರಾಪಂ ವ್ಯಾಪ್ತಿಯ ಬಾಸಾಪುರ ಗ್ರಾಮದ ಬಳಿ ನೀರು ರಸ್ತೆಯ ಮೇಲೆ ಹರಿಯುತ್ತಿರುವ ಪರಿಣಾಮ ಶಿರವಾಸೆ-ಸಂಗಮೇಶ್ವರ ಪೇಟೆ ರಸ್ತೆ ಸಂಪರ್ಕ ಕಡಿತಗೊಂಡಿದೆ.ಮುಳ್ಳಯ್ಯನಗಿರಿ ರಸ್ತೆಯಲ್ಲಿ ಧರೆ ಕುಸಿತಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ತಾಲೂಕಿನಾದ್ಯಂತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಗಿರಿ ಪ್ರದೇಶದಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಮುಳ್ಳಯ್ಯನಗಿರಿ ರಸ್ತೆಯ ನಾಲ್ಕೈದು ಕಡೆಗಳಲ್ಲಿ ಧರೆ ಕುಸಿತ ಉಂಟಾಗಿದೆ.
ಚಿಕ್ಕಮಗಳೂರು ತಹಸೀಲ್ದಾರ್ ಡಾ.ಸುಮಂತ್ ಹಾಗೂ ಕಸಬಾ ಕಂದಾಯ ನಿರೀಕ್ಷಕರಾದ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಚೇತನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ರಸ್ತೆ ಉದ್ದಕ್ಕೂ ಭೂ ಕುಸಿತ ಉಂಟಾಗಿದ್ದರಿಂದ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡುವುದು ಸುರಕ್ಷಿತವಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. ಕಳೆದ ವರ್ಷ ಕವಿಕಲ್ ಗಂಡಿ ಬಳಿ ರಸ್ತೆಗೆ ಸಮೀಪದ ಕಲ್ಲುಗಳು ಜರಿದುಕೊಂಡಿದ್ದವು. ಬಾಬಾಬುಡನ್‌ಗಿರಿ ಹಾಗೂ ಮಾಣಿಕ್ಯಾಧಾರದ ಕೆಲವೆಡೆ ಭೂ ಕುಸಿತ ಉಂಟಾಗಿತ್ತು. ಮಳೆ ಇದೇ ರೀತಿಯಲ್ಲಿ ನಿರಂತರವಾಗಿ ಬರುತ್ತಿದ್ದರೆ ಧರೆ ಕುಸಿತ ಹೆಚ್ಚಾಗುವ ಸಾಧ್ಯತೆ ಇದೆತೆ ಎಂದು ತಿಳಿಸಲಾಗಿದೆ.24 ಗಂಟೆಯಲ್ಲಿ 280 ಮಿ.ಮೀ. ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ 280 ಮಿ.ಮೀ. ಮಳೆ ದಾಖಲಾಗಿದೆ. ಶೃಂಗೇರಿ ಪಟ್ಟಣದಲ್ಲಿ 165, ಕಿಗ್ಗಾದಲ್ಲಿ 256.4, ಎನ್.ಆರ್.ಪುರದಲ್ಲಿ 93, ಬಾಳೆಹೊನ್ನೂರು 155.8, ಕಡೂರು 22, ಬೀರೂರು 23, ಯಗಟಿ 16.2, ಸಖರಾಯಪಟ್ಟಣ 42.4, ಕೊಪ್ಪ ಹಾಗೂ ಹರಿಹರಪುರದಲ್ಲಿ ತಲಾ 170, ಜಯಪುರ 144.6, ಬಸರೀಕಟ್ಟೆ 175.5, ಕಮ್ಮರಡಿ 140.2, ಕಳಸ 110.6, ಮೂಡಿಗೆರೆ 123.8, ಕೊಟ್ಟಿಗೆಹಾರ 174, ಗೋಣಿಬೀಡು 85.2, ಜಾವಳಿ156.3, ಅಜ್ಜಂಪುರ 19.4, ಶಿವನಿ 26.3, ಚಿಕ್ಕಮಗಳೂರು 51.2, ವಸ್ತಾರೆ 85.4, ಆಲ್ದೂರು 99, ಅತ್ತಿಗುಂಡಿ 120, ಸಂಗಮೇಶ್ವರಪೇಟೆ 115.4, ಬ್ಯಾರವಳ್ಳಿ 104.8 ಮಿ.ಮೀ. ಮಳೆಯಾಗಿದೆ.