ಶಿರಸಿ: ಅತಿಯಾದ ಮೊಬೈಲ್ ವ್ಯಾಮೋಹದಿಂದ ಪುಸ್ತಕ ಓದುವ ಹವ್ಯಾಸ ಕಣ್ಮರೆಯಾಗುತ್ತಿದ್ದು, ಇದರಿಂದ ಗ್ರಂಥಾಲಯದಲ್ಲಿರುವ ಪುಸ್ತಕಗಳು ಧೂಳು ತಿನ್ನುತ್ತಿರುವುದು ವಿಷಾದನೀಯ ಎಂದು ಶಿರಳಗಿಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಪುಸ್ತಕ ಓದಿದವರು ಜೀವನದಲ್ಲಿ ಸಾಧನೆ ಮಾಡಿದ್ದಾರೆ.ರಾಮಾಯಣ, ಮಹಾಭಾರತ ಓದಿ ನಮ್ಮ ಪೂರ್ವಜನರು ಜೀವನ ಕಳೆಯುತ್ತಿದ್ದರು. ಆದರೆ ನಾವು ಓದುವ ಹವ್ಯಾಸದಿಂದ ದೂರವಾಗುತ್ತಿದೆ.ಭಗವದ್ಗೀತೆ ಪಠಣ ಮಾಡುವುದರಿಂದ ಉದ್ದೇಶ ಬೆಳೆಸಿಕೊಳ್ಳುವುದರ ಜತೆ ಬದುಕು ಬದಲಾಗುತ್ತದೆ. ಅಲ್ಲದೇ, ಬದುಕು ಆದರ್ಶವಾಗುವುದಲ್ಲದೇ, ಬದಲಾವಣೆಯ ಚಿಂತನೆಗಳನ್ನು ಭಗವದ್ಗೀತೆ ತಿಳಿಸುತ್ತದೆ. ಸನಾತನ ಧರ್ಮದಲ್ಲಿ ಗ್ರಂಥಗಳಿಗೆ ಬರಗಾಲವಿಲ್ಲ.ನಮ್ಮ ಪ್ರಾಚೀನರು ಜ್ಞಾನಕ್ಕೆ ಒತ್ತು ನೀಡಿದ್ದರು. ಅನೇಕ ವಿಷಯಗಳು ಗ್ರಂಥ ಅಧ್ಯಯನದಿಂದ ಬರುತ್ತದೆ ಎಂದು ಹೇಳಿದರು.
ಉಮ್ಮಚಗಿ ಸಂಸ್ಕೃತ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಮಹೇಶ ಭಟ್ಟ ಕೃತಿ ಪರಿಚಯಿಸಿ, ಪ್ರಪಂಚದ ಸತ್ಯ ಇರುವುದು ನಮ್ಮ ಕರ್ಮದಿಂದ. ಕರ್ಮ ಬಂಧ,ಬಿಡುಗಡೆಯನ್ನು ಬಹಳ ಸ್ಪುಟವಾಗಿ ಮತ್ತು ಶಾಸ್ತ್ರೀಯವಾಗಿ ಬಾಲಕೃಷ್ಣ ಕಾರಂತರು ತಮ್ಮ ಕೃತಿಯಲ್ಲಿ ನಿರೂಪಿಸಿದ್ದಾರೆ. ಅನೇಕ ಜನ್ಮದ ಪುಣ್ಯದಿಂದ ಮೋಕ್ಷ ಹೊಂದಲು ಸಾಧ್ಯ. ಮೋಕ್ಷ ಪಡೆಯಲು ಗುರುವಿನ ಅನುಗ್ರಹದ ಅಲೆ ಬೇಕಾಗುತ್ತದೆ. ಅನೇಕ ದರ್ಶನಗಳನ್ನು ನೋಡಿದಾಗ ಪ್ರಜ್ಞೆ ವಿವೇಕಯುಕ್ತವಾಗುತ್ತದೆ ಎಂದರು.ಕೃತಿಕಾರ ಬಾಲಕೃಷ್ಣ ಕಾರಂತ ಮಾತನಾಡಿ, ಬ್ಯಾಂಕ್ ಉದ್ಯೋಗಿಯಾಗಿ ಜನರು ನಿರೀಕ್ಷಿಸುವ ಸಂಗತಿಗಳನ್ನು ಕೃತಿಗಳಲ್ಲಿ ಅಭಿವ್ಯಕ್ತಗೊಳಿಸಿದ್ದೇನೆ. ಮನೆಯಲ್ಲಿ ಹಾಕಿಕೊಟ್ಟ ಮಾರ್ಗದರ್ಶನ ಈಗ ಪ್ರತಿಕಾರವಾಗುತ್ತಿದ್ದು, ನಾನು ಚಿಕ್ಕವನಾಗಿರುವ ವೇಳೆ ಸ್ವಾದ, ಗೃಹಿಸಿರುವುದು ಈಗ ಅರಳಿ ನಿಂತು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಕೃತಿಯಲ್ಲಿರುವ ೨೦ಲೇಖನಗಳಲ್ಲಿ ೧೪ ಆಧ್ಯಾತ್ಮಿಕ, ೬ ಮೌಲ್ಯಾಧಾರಿತ ಲೇಖನಗಳನ್ನು ಓದಿ, ಮನನ ಮಾಡಿಕೊಂಡರೆ ಜೀವನ ಹಸನ್ಮುಖಿಯಾಗುತ್ತದೆ. ಜೀವನಾನಂದ ಎಲ್ಲರಿಗೂ ಬೇಕು. ಆದರೆ ಅದನ್ನು ಪಡೆಯುವ ವಿಧಾನ ಯಾರ ಬಳಿಯಲ್ಲಿಯೂ ಇಲ್ಲ. ಸಾಹಿತ್ತಿಕ ದೃಷ್ಟಿಕೋನದಿಂದ ಓದಬೇಕು ಎಂದರು.
ಡಾ. ಕೇಶವ ಕೊರ್ಸೆ ಪರಿಚಯಿಸಿದರು. ಸುಶೀಲಾ ಹೆಗಡೆ ತಟ್ಟೀಸರ ಪ್ರಾರ್ಥಿಸಿದರು. ದಯಾಶಂಕರ ಕಾರಂತ ಶ್ರೀಗಳಿಗೆ ಫಲ ಸಮರ್ಪಿಸಿದರು. ಶ್ರೀಧರ ಭಟ್ಟ ನಿರೂಪಿಸಿದರು. ಡಾ.ಜ್ಞಾನಪ್ರಕಾಶ ಕಾರಂತ ವಂದಿಸಿದರು.