ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸುವ ಆಶಯ: ಶಿವಾನಂದ

KannadaprabhaNewsNetwork | Published : Dec 25, 2024 12:47 AM

ಸಾರಾಂಶ

ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸುವುದೇ ನಮ್ಮ ಧ್ಯೇಯ.

ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಕನ್ನಡಪ್ರಭ ವಾರ್ತೆ ಕೊಪ್ಪಳ

ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸುವುದೇ ನಮ್ಮ ಧ್ಯೇಯ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಹೇಳಿದರು.

ತಾಲೂಕಿನ ಹಿರೇಸಿಂದೋಗಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಾ. ಎ.ಪಿ.ಜಿ ಅಬ್ದುಲ್ ಕಲಾಂ, ವಸತಿ ಪಿಯುಸಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಹಿರೇಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಜರುಗಿದ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕ್ಷಯರೋಗ ಮುಕ್ತ ಅಭಿಯಾನದ ಕಾರ್ಯಕ್ರಮ ಡಿ. 7ರಿಂದ 2025ರ ಮಾ. 23ರ ವರೆಗೆ ಜಿಲ್ಲೆಯ್ಯಾದಂತ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ ಹಮ್ಮಿಕೊಳ್ಳಲಾಗಿದೆ. ತೀವ್ರತರವಾಗಿ ಕ್ಷಯರೋಗವನ್ನು ಪತ್ತೆ ಹಚ್ಚುವುದು, ಕ್ಷಯರೋಗದ ಮರಣದ ಪ್ರಮಾಣ ಕಡಿಮೆ ಮಾಡುವುದು ಹಾಗೂ ಹೊಸ ಕ್ಷಯರೋಗಿಗಳು ಉಲ್ಬಣವಾಗದಂತೆ ನೋಡಿಕೊಳ್ಳುವುದು ಈ ಅಭಿಯಾನದ ಗುರಿ ಮತ್ತು ಉದ್ದೇಶವಾಗಿದೆ ಎಂದರು.

ರೋಗವೂ ಸೋಂಕಿತ ರೋಗಿಯು ಕೆಮ್ಮುವುದರ ಮೂಲಕ ಹಾಗೂ ಸೀನುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಯಾರಿಗಾದರೂ ಎರಡು ವಾರಗಳಿಂದ ಕೆಮ್ಮು ಕಾಣಿಸಿಕೊಂಡರೆ, ಕೆಮ್ಮಿನಲ್ಲಿ ಕಫ ಬಂದರೆ, ಕಫದಲ್ಲಿ ರಕ್ತ ಬಂದರೆ, ತೂಕ ಕಡಿಮೆಯಾದರೆ, ಸಂಜೆ ವೇಳೆ ಜ್ವರ ಬರುವ ಲಕ್ಷಣಗಳು ಇದ್ದರೆ ತಕ್ಷಣ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿಕೊಂಡು, ರೋಗ ಕಂಡು ಬಂದರೆ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಯಾರೂ ಕೂಡ ಟಿಬಿ ರೋಗದ ಬಗ್ಗೆ ನಿರ್ಲಕ್ಷ ಮಾಡಬಾರದು. ಕ್ಷಯರೋಗಿಗಳು ಎಲ್ಲೆಂದರಲ್ಲಿ ಉಗುಳಬಾರದು, ಕೆಮ್ಮು ಮತ್ತು ಸೀನುವಾಗ ಕಡ್ಡಾಯವಾಗಿ ಕರವಸ್ತ್ರ ಬಳಸಬೇಕು. ಆಶಾ ಕಾರ್ಯಕರ್ತೆಯರು ತಮ್ಮ ಮನೆಗೆ ಭೇಟಿ ನೀಡಿದಾಗ, ಆರೋಗ್ಯದ ಯಾವುದೇ ಸಮಸ್ಯೆವಿದ್ದರೆ, ಅವರ ಹತ್ತಿರ ಚರ್ಚಿಸಿ, ಸಲಹೆ ಪಡೆದುಕೊಳ್ಳಬಹುದು ಎಂದು ಹೇಳಿದರು.

ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಈ ಕ್ಷಯರೋಗಕ್ಕೆ ಬೇಗನೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕ್ಷಯರೋಗದ ಲಕ್ಷಣ ಉಳ್ಳವರು ಅಸಡ್ಡೆ ತೊರದೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿಕೊಳ್ಳಬೇಕು. 2025ಕ್ಕೆ ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿ ಮಾಡಲು ಸಹಕರಿಸುವಂತೆ ತಿಳಿಸಿದರು.

ಪೌಷ್ಠಿಕ ಆಹಾರದ ಸಲುವಾಗಿ ನಿಕ್ಷಯ ಪೋಷಣ ಅಭಿಯಾನದಡಿಯಲ್ಲಿ ಪೌಷ್ಠಿಕ ಆಹಾರ ಸೇವಿಸಲು ಪ್ರತಿ ರೋಗಿಗೆ ಮಾಸಿಕ ₹1000 ಗಳನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ರೋಗಿಯ ಮನೆಗೆ ಭೇಟಿ ನೀಡಿ, ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಕಾಯಿಲೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ, ಟಿ.ಬಿ ಸೋಲಿಸಿ-ದೇಶ ಗೆಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕಿ ಕಲ್ಪನಾ, ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ ಮಾತನಾಡಿದರು.

ಸಹ-ಉಪನ್ಯಾಸಕರಾದ ವೀರೇಶ ಎಂ ಹಾಗೂ ವೀರೇಶ, ಆರೋಗ್ಯ ನಿರೀಕ್ಷಣಾಧಿಕಾರಿ ಶಿವರಾಜ, ಆಶಾ ಕಾರ್ಯಕರ್ತೆ ಅಂಬಿಕಾ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

Share this article