ಕನ್ನಡಪ್ರಭ ವಾರ್ತೆ ಮೈಸೂರು
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಮಂಗಳವಾರ ಸಂಜೆ ಆಗುತ್ತಿದ್ದಂತೆ ರೈತರು ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದರು.ಬೆಳಗ್ಗೆಯಿಂದ ತಮ್ಮ ಪ್ರೀತಿಯ ರಾಸುಗಳಿಗೆ ಸ್ನಾನ ಮಾಡಿಸಿ, ಬಣ್ಣ ಹಚ್ಚಿದರು. ಕೊಂಬುಗಳನ್ನು ಬಣ್ಣದ ಕಾಗದಗಳಿಂದ ಸಿಂಗರಿಸಿದರು. ಕೊರಳಿಗೆ ಹಾಕಿದ ಹೂಮಾಳೆ ರಾಸುಗಳ ಸೌಂದರ್ಯ ಹೆಚ್ಚಿಸಿತು. ರಸ್ತೆಗಳ ನಡುವೆ ಬೈಹಲ್ಲು, ಒಣಗಿದ ತೆಂಗಿನ ಗರಿಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿದರು. ಸುತ್ತಲೂ ಸೇರಿದ ಜನರ ಶಿಳ್ಳೆ, ಕೇಕೆಯ ನಡುವೆ ರಾಸುಗಳು ಬೆಂಕಿಯನ್ನು ದಾಟಿದವು.
ಬೆಂಗಳೂರು- ಮೈಸೂರು ಹೆದ್ದಾರಿಯ ರಸ್ತೆಯಲ್ಲಿರುವ ಸಿದ್ದಲಿಂಗಪುರ ಗ್ರಾಮದಲ್ಲಿ ಮೂರು ಹಂತದಲ್ಲಿ ಹುಲ್ಲುಗಳನ್ನು ಹಾಸಿ, ಶ್ರದ್ಧಾ ಭಕ್ತಿಯಿಂದ ಅರ್ಚಕರುಗಳು ಪೂಜೆಗೈದು, ರಾಸುಗಳನ್ನು ಕಿಚ್ಚು ಹಾಯಿಸಲು ಚಾಲನೆ ನೀಡಲಾಯಿತು. ಈ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ಅಕ್ಕ ಪಕ್ಕದ ಗ್ರಾಮಸ್ಥರಲ್ಲದೇ ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು. ಮೊದಲನೆಯದಾಗಿ ಗ್ರಾಮದ ಬಸವಪ್ಪನವರು ಕಿಚ್ಚನ್ನು ಆಯ್ದುಕೊಂಡು ಹೋದರು. ನಂತರ ಗ್ರಾಮಸ್ಥರೆಲ್ಲರೂ ತಮ್ಮ ತಮ್ಮ ರಾಸುಗಳನ್ನು ಕಿಚ್ಚು ಹಾಯಿಸುವುದರ ಮೂಲಕ ಜನ ಜಾನುವಾರುಗಳಿಗೆ ಯಾವುದೇ ರೋಗ ರುಜಿನಗಳು ಬಾರದಂತೆ, ಆಯುರಾರೋಗ್ಯವನ್ನು ಕರುಣಿಸಿ, ರೈತ ಸಮುದಾಯಕ್ಕೆ ಉನ್ನತವಾದಂತಹ ಮಳೆ ಹಾಗೂ ಬೆಳೆಯನ್ನು ಕರುಣಿಸಿ ಕಾಪಾಡುವಂತೆ ದೇವರಲ್ಲಿ ಪ್ರಾರ್ಥಿಸಿದರು.ಇನ್ನೂ ಗ್ರಾಮದ ಎಲ್ಲಾ ರಾಸುಗಳನ್ನು ಕಿಚ್ಚು ಹಾಯಿಸಿದ ನಂತರ ಗ್ರಾಮದಲ್ಲಿ ಸಾಕಾಣಿಕೆ ಮಾಡಲಾಗಿರುವಂತಹ ಹಳ್ಳಿಕಾರ್ ಹೋರಿಗಳು ಹಾಗೂ ವಿವಿಧ ವಯಸ್ಸಿನ ಕರುಗಳನ್ನು ಅದ್ಧೂರಿಯಾಗಿ ತಮಟೆ, ನಗಾರಿ, ಬ್ಯಾಂಡ್ ಸೆಟ್ ಹಾಗೂ ಬಾಣ ಬಿರುಸುಗಳ ಸಮೇತ ಗ್ರಾಮದೆಲ್ಲೆಡೆ ಸಂಜೆ ಹೊತ್ತಿಗೆ ಮೆರವಣಿಗೆ ಮಾಡಲಾಯಿತು.
ಶ್ರೀರಾಮದೇವರ ಉತ್ಸವ ಸಂಪನ್ನಮೈಸೂರು ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವಂತಹ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ದಿನದಂದು ಗ್ರಾಮದ ಶ್ರೀರಾಮದೇವರ ಮೂಲ ವಿಗ್ರಹವನ್ನು ಅಲಂಕರಿಸಿ, ಮುಂಜಾನೆಯಿಂದ ಗ್ರಾಮದ ಸುತ್ತಲೂ ಸ್ವಾಮಿಯವರ ಸಂಕ್ರಮಣ ಉತ್ಸವವನ್ನು ನೆರವೇರಿಸಲಾಯಿತು.ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆಯ ಇಳುವರಿಯ ಮೊದಲ ಪಾಲನ್ನು ಶ್ರೀರಾಮದೇವರಿಗೆ ತಳಿಗೆ ರೂಪದಲ್ಲಿ ನೈವೇದ್ಯಕ್ಕೆ ನೀಡಿ, ಪ್ರಸಾದವನ್ನು ನಾಲ್ಕು ಜನರಿಗೆ ಹಂಚಿ, ಹೆಚ್ಚೊಕ್ಕಲಾಗಲೆಂದು ಬೇಡುವುದು ಇಲ್ಲಿನ ವಾಡಿಕೆಯಾಗಿದೆ. ಅದರಂತೆ ಎಲ್ಲ ರೈತರೂ ಈ ಪದ್ಧತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಮುಂಜಾನೆಯಿಂದ ಶ್ರೀ ರಾಮದೇವರ ಉತ್ಸವ ಮೂರ್ತಿಯು ಗ್ರಾಮದೆಲ್ಲೆಡೆ ಬಿಜಂಗೈಯಿಸಿ, ನಂತರ ಸಂಜೆ ಗುಡಿಯನ್ನು ಸೇರಿತು.
ಒಟ್ಟಾರೆಯಾಗಿ ಸಂಕ್ರಾಂತಿ ಸಂಭ್ರಮಕ್ಕೆ ಹೆಸರುವಾಸಿಯಾಗಿರುವ ಸಿದ್ದಲಿಂಗಪುರ ಗ್ರಾಮದಲ್ಲಿ ಬಹಳ ಪೂರ್ವಕಾಲದಿಂದಲೂ ಈ ಪದ್ಧತಿಗಳು ಅನುಸರಣೆಯಲ್ಲಿದ್ದು , ಎಷ್ಟೇ ಅಭಿವೃದ್ಧಿ ಹೊಂದಿದರೂ ತಮ್ಮ ಪೂರ್ವಜರಿಂದ ಬಂದಂತಹ ರೀತಿ ನೀತಿಗಳು ಹಾಗೂ ಕಟ್ಟುಪಾಡುಗಳನ್ನು ಇಂದಿಗೂ ಪಾಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಅರ್ಚಕರು, ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.