ಏಕನಾಥ ಜಿ. ಮೆದಿಕೇರಿ
ಹನುಮಸಾಗರ: ಜಿಲ್ಲೆಯಲ್ಲಿ ದೊಡ್ಡ ಗ್ರಾಮ ಎಂದು ಹೆಸರುವಾಸಿಯಾಗಿರುವ ಹನುಮಸಾಗರದಲ್ಲಿ ಸಮುದಾಯ ಆಸ್ಪತ್ರೆ ನಿರ್ಮಿಸಿ, ಉದ್ಘಾಟನೆಗೊಂಡಿದ್ದರೂ ಕಾರ್ಯಾಚರಣೆ ಆರಂಭಿಸಿಲ್ಲ. ಹೀಗಾಗಿ ಜನರು ಚಿಕಿತ್ಸೆಗೆ ಬೇರೆಡೆ ತೆರಳುವಂತಾಗಿದೆ.ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಆದರೆ ಕೆಲವು ವಿಭಾಗದಲ್ಲಿ ವೈದ್ಯರ ಕೊರತೆ ಇದೆ. ಗ್ರಾಮದಲ್ಲಿ ೨೫ ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಅವರಿಗೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.
ಸೇವೆಗಿಲ್ಲದ ಸಮುದಾಯ ಆಸ್ಪತ್ರೆ: ಗ್ರಾಮದ ಬದಾಮಿ ರಸ್ತೆಯಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಅಭಿಯಾನ ಯೋಜನೆಯಡಿ ₹೧.80 ಕೋಟಿ ಅನುದಾನದಲ್ಲಿ ೩೦ ಹಾಸಿಗೆಯ ಸಮುದಾಯ ಆಸ್ಪತ್ರೆ ನಿರ್ಮಿಸಲಾಗಿದೆ. ಆಸ್ಪತ್ರೆ ಪೂರ್ಣಗೊಂಡು ನಾಲ್ಕೂವರೆ ವರ್ಷಗಳು ಕಳೆದಿದ್ದು, ಉದ್ಘಾಟನೆಗೊಂಡಿದೆ. ಸಮುದಾಯ ಆಸ್ಪತ್ರೆ ಕಟ್ಟಡವನ್ನು ಕಂಡು ಗ್ರಾಮಸ್ಥರು, ಸುತ್ತಲಿನ ಗ್ರಾಮಸ್ಥರು ಎಲ್ಲ ರೀತಿಯ ಚಿಕಿತ್ಸೆಗಳು ಇಲ್ಲಿಯೇ ಲಭ್ಯವಾಗಬಹುದು ಎಂಬ ಆಶಾಭಾವನೆ ಹೊಂದಿದ್ದರು. ಆದರೆ ಈಗ ಸಣ್ಣ ಚಿಕಿತ್ಸೆಗೂ ಬೇರೆಡೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಅವರಲ್ಲಿ ಬೇಸರ ಮೂಡಿಸಿದೆ. ಬಾಗಲಕೋಟೆ, ಗದಗ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ನಾನಾ ಜಿಲ್ಲೆಗಳಿಗೆ ಹೆಚ್ಚಿನ ಚಿಕಿತ್ಸೆಗೆ ಅಲೆಯುವುದು ಮಾತ್ರ ತಪ್ಪುತ್ತಿಲ್ಲ.ಸಮುದಾಯ ಕೇಂದ್ರ ವ್ಯಾಪ್ತಿ: ೪೫ ಕಿಮೀ ಅಂತರದ ಗಡಿಭಾಗದ ಹಳ್ಳಿಗಳು ಹಾಗೂ ಹಿರೇಗೊಣ್ಣಾಗರ, ಹನುಮನಾಳ, ಮಾಲಗಿತ್ತಿ, ಚಳಗೇರಾ ಗ್ರಾಮಗಳ ಈ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತವೆ. ಸದ್ಯ ಹನುಮಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾವಿನ ಇಟಗಿ, ಚಂದ್ರಗಿರಿ, ಮುದಟಗಿ, ಹನುಮಗಿರಿ, ಮನ್ನೇರಾಳ, ಹೂಲಗೇರಿ, ಕಾಟಾಪುರ, ಯರಗೇರಾ, ಕುಂಬಳಾವತಿ, ಮೂಗನೂರು ವ್ಯಾಪ್ತಿಯ ರೋಗಿಗಳು ಆಗಮಿಸುತ್ತಿದ್ದಾರೆ.
ಸಿಬ್ಬಂದಿ ವಿವರ: ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರು ಆಯುರ್ವೇದ ವೈದ್ಯರು, ಮೂವರು ಕಿರಿಯ ಆರೋಗ್ಯ ಸಹಾಯಕರು, ಮೂವರು ಶುಶ್ರೂಷಕ ಅಧಿಕಾರಿಗಳು, ಒಬ್ಬರು ಪುರುಷ ಕಿರಿಯ ಆರೋಗ್ಯ ಸಹಾಯಕರು, ಒಬ್ಬರು ಔಷಧ ವಿತರಕ, ಒಬ್ಬರು ಪ್ರಯೋಗ ತಜ್ಞರು, ಒಬ್ಬರು ಪ್ರಥಮ ದರ್ಜೆ ಸಹಾಯಕ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಮೆಡಿಕಲ್ ಆಫೀಸರ್, ಒಬ್ಬರು ಹಿರಿಯ, ಇಬ್ಬರು ಕಿರಿಯ ಆರೋಗ್ಯ ಸಹಾಯಕರು, ಡಿ ಗ್ರೂಪ್ ಹೀಗೆ ತಲಾ ಒಂದು ಹುದ್ದೆ ಖಾಲಿ ಉಳಿದಿದೆ.ಸಮುದಾಯ ಕೇಂದ್ರ ಆರಂಭವಾದರೆ ಹೆರಿಗೆ ತಜ್ಞ, ಅರವಳಿಕೆ, ದಂತ ವೈದ್ಯ ತಲಾ ಒಬ್ಬರು ತಜ್ಞರು, ಇಬ್ಬರು ಮೆಡಿಕಲ್ ಆಫೀಸರ್, ೬ ಜನ ಶುಶ್ರೂಷಕರು, ಆಫೀಸ್ ವ್ಯವಸ್ಥಾಪಕ, ಎಸ್‌ಡಿಸಿ ತಲಾ ಒಬ್ಬರು, ಡಾಟಾ ಎಂಟ್ರಿ ಆಪರೇಟರ್ ಹಾಗೂ ೧೨ ಜನ ಡಿ ಗ್ರೂಪ್ ನೌಕರರು ಹಾಗೂ ಇತರ ಸಿಬ್ಬಂದಿ ಬೇಕಾಗುತ್ತಾರೆ.
ಗ್ರಾಮದ ಆಸ್ಪತ್ರೆಯ ವೈದ್ಯಾಧಿಕಾರಿಗಳು ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೆ ಸಮುದಾಯ ಆಸ್ಪತ್ರೆ ಆರಂಭವಾದರೆ ಇನ್ನೂ ಅನುಕೂಲವಾಗುತ್ತದೆ. ಆದಷ್ಟು ಬೇಗನೆ ಸಮುದಾಯ ಆಸ್ಪತ್ರೆ ಆರಂಭಿಸಬೇಕಾಗಿದೆ ಎಂದು ಗ್ರಾಮಸ್ಥರಾದ ನಾಗರಾಜ ಶೆಬಿನಕಟ್ಟಿ, ಗಣೇಶ ಮೆಹರವಾಡೆ ಹೇಳುತ್ತಾರೆ.