ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆ ಜಾತ್ರೆ ದಿನವೇ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪತ್ನಿ ಜೊತೆಗೆ ಜಗಳವಾಡಿ, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ಅರ್ಪಿತಾ(24 ವರ್ಷ) ಕೊಲೆಯಾದ ದುರ್ದೈವಿ. ಪತಿ ಹನುಮಂತ(28) ಪತ್ನಿ ಅರ್ಪಿತಾಳನ್ನು ಹೊಡೆದು ಕೊಂದ ಆರೋಪಿ. ಪ್ರತಿ 5 ವರ್ಷಕ್ಕೆ ಗ್ರಾಮ ದೇವತೆ ಜಾತ್ರೆ ಹಿನ್ನೆಲೆಯಲ್ಲಿ ಇಡೀ ಊರು ಹಬ್ಬದ ಸಂಭ್ರಮದಲ್ಲಿತ್ತು. ಅದೇ ರೀತಿ ಅರ್ಪಿತಾ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಹಬ್ಬದ ದಿನವೇ ಕಂಠಪೂರ್ತಿ ಕುಡಿದು ಬಂದ ಹನುಮಂತಪ್ಪ ರಾತ್ರೋರಾತ್ರಿ ಹೆಂಡತಿ ಅರ್ಪಿತಾ ಜೊತೆಗೆ ಜಗಳ ಶುರು ಮಾಡಿದ್ದಾನೆ. ಪದೇ ಪದೇ ಜಗಳ ಮಾಡುತ್ತಿದ್ದ ಹನುಮಂತನ ಕುಡಿತದ ಚಟದಿಂದಾಗಿ ಸಂಸಾರದಲ್ಲಿ ಶಾಂತಿ, ನೆಮ್ಮದಿಯೇ ಇಲ್ಲದಂತಾಗಿತ್ತು. ಅರ್ಪಿತಾ, ಹನುಮಂತ ಮಧ್ಯೆ ಮಾತಿಗೆ ಮಾತು, ಜಗಳ ಶುರುವಾಗಿದೆ. ಆಗ ಹನುಮಂತ ಅರ್ಪಿತಾಗೆ ಹೊಡೆದಿದ್ದರಿಂದ ಕಿವಿಗೆ ತೀವ್ರ ಪೆಟ್ಟು ಬಿದ್ದು, ರಕ್ತ ಬಂದು ಆಕೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.ಈಗ್ಗೆ 2 ವರ್ಷಗಳ ಹಿಂದೆ ಮದುವೆಯಾಗಿದ್ದ ಅರ್ಪಿತಾ, ಹನುಮಂತಪ್ಪ ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಈಚೆಗೆ ಹನುಮಂತನ ಕುಡಿತ ಹೆಚ್ಚಾಗಿತ್ತಲ್ಲದೇ, ಪತ್ನಿ ಜೊತೆಗೆ ಜಗಳವನ್ನೂ ಆಡಲಾರಂಭಿಸಿದ್ದ. ಇಡೀ ಊರು ಐದು ವರ್ಷಕ್ಕೊಮ್ಮೆ ಬರುವ ಗ್ರಾಮ ದೇವತೆಹಬ್ಬದ ಸಂಭ್ರಮದಲ್ಲಿದ್ದರೆ, ಹನುಮಂತನ ಮನೆಗೂ ಬಂಧು, ಬಳಗದವರು ಬಂದಿದ್ದರು. ಕುಡಿದ ಮತ್ತಿನಲ್ಲಿ ಮನೆಗೆ ಬಂದ ಹನುಮಂತ ಪತ್ನಿ ಜೊತೆ ಜಗಳದ ವೇಳೆ ಅರ್ಪಿತಾಗೆ ಹಲ್ಲೆ ಮಾಡಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ. ಆರೋಪಿ ಹನುಮಂತನಿಗೆ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.