ಛಲವಾದಿಗಳು ‘ಹೊಲೆಯ’ ಎಂದೇ ನಮೂದಿಸಿ

KannadaprabhaNewsNetwork |  
Published : May 05, 2025, 12:51 AM IST
ಸಿಕೆಬಿ-1 ಸುದ್ದಿಗೋಷ್ಟಿಯಲ್ಲಿ  ಛಲವಾದಿ ಮಹಾಸಭಾದ ರಾಜ್ಯ ಸಂಘಟನಾ ಸಂಚಾಲಕ ಕೈವಾರ ಮಂಜುನಾಥ್ ಮಾತನಾಡಿದರು | Kannada Prabha

ಸಾರಾಂಶ

ರಾಜ್ಯದ ಪರಿಶಿಷ್ಟಜಾತಿಗಳಲ್ಲಿ ಛಲವಾದಿ ಅಥವಾ ಹೊಲೆಯ ಸಮುದಾಯ ಬಹುಸಂಖ್ಯಾತ ರಾಗಿದ್ದರೂ ಪರಿಶಿಷ್ಟಜಾತಿ ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಬರೆಸಿರುವ ಕಾರಣ ಛಲವಾದಿ ಸಮುದಾಯದ ನಿಖರವಾದ ಮಾಹಿತಿ ಸಿಗುತ್ತಿಲ್ಲ. ಸಮೀಕ್ಷೆ ವೇಳೆ ಛಲವಾದಿ ಸಮುದಾಯ ತಪ್ಪದೆ ಜಾತಿ ಕಾಲಂನಲ್ಲಿ ಹೊಲೆಯ ಎಂದೇ ನಮೂದಿಸಿ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿ ಸಂಬಂಧ ಕಾರ್ಯಪ್ರವೃತ್ತವಾಗಿದೆ. ಈ ನಿಟ್ಟಿನಲ್ಲಿ ಮೇ 5ರಿಂದ 17 ರವರೆಗೆ ನಡೆಯುವ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧದ ದತ್ತಾಂಶ ಸಂಗ್ರಹದ ವೇಳೆ ಮನೆಮನೆಗೆ ಬರುವ ಅಧಿಕಾರಿಗಳ ಬಳಿ ಜಾತಿ ಕಾಲಂ 61ರಲ್ಲಿ ಛಲವಾದಿ ಸಮುದಾಯ ತಪ್ಪದೆ ‘ಹೊಲೆಯ’ ಎಂದು ನಮೂದು ಮಾಡಬೇಕು. ಬೇರೇನೂ ಮಾಡಬಾರದು ಎಂದು ಕರ್ನಾಟಕ ಛಲವಾದಿ ಮಹಾಸಭಾದ ರಾಜ್ಯ ಸಂಘಟನಾ ಸಂಚಾಲಕ ಕೈವಾರ ಮಂಜುನಾಥ್ ಮನವಿ ಮಾಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರ್ನಾಟಕ ಛಲವಾದಿ ಮಹಾಸಭಾದಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದ ಪರಿಶಿಷ್ಟಜಾತಿಗಳಲ್ಲಿ ಛಲವಾದಿ ಅಥವಾ ಹೊಲೆಯ ಸಮುದಾಯ ಬಹುಸಂಖ್ಯಾತ ರಾಗಿದ್ದರೂ ಪರಿಶಿಷ್ಟಜಾತಿ ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಬರೆಸಿರುವ ಕಾರಣ ಛಲವಾದಿ ಸಮುದಾಯದ ನಿಖರವಾದ ಮಾಹಿತಿ ಇಲ್ಲವಾಗಿದೆ ಎಂದರು.

ಇಂದಿನಿಂದ ದತ್ತಾಂಶ ಸಂಗ್ರಹ

ಇದರಿಂದಾಗಿ ಮಾದಿಗ ಮತ್ತು ಹೊಲೆಯ ಸಮುದಾಯದ ನಡುವೆ ಜನಸಂಖ್ಯೆಯ ವಿಚಾರದಲ್ಲಿ ನಾವು ಹೆಚ್ಚು ನಾವು ಹೆಚ್ಚು ಎಂಬ ಅಪನಂಬಿಕೆ ಸೃಷ್ಟಿಯಾಗಿದೆ. ಇದು ತಪ್ಪಬೇಕಾದರೆ ಮೇ 5ರಿಂದ ನಡೆಯುವ ನಾಗಮೋಹನ್‌ದಾಸ್ ಸಮಿತಿಯ ದತ್ತಾಂಶ ಸಂಗ್ರಹದ ವೇಳೆ ಛಲವಾದಿ ಸಮುದಾಯ ತಪ್ಪದೆ ಜಾತಿ ಕಾಲಂನಲ್ಲಿ ಹೊಲೆಯ ಎಂದೇ ನಮೂದಿಸುವುದನ್ನು ಮರೆಯಬೇಡಿ ಎಂದು ಮನವಿ ಮಾಡಿದರು.

ಛಲವಾದಿ ಸಮುದಾಯದ ಮುಖಂಡ ತ್ಯಾಗರಾಜ್ ಮಾತನಾಡಿ, ಒಳಮೀಸಲಾತಿ ಸಂಬಂಧ ಜಸ್ಟೀಸ್ ಸದಾಶಿವ ಆಯೋಗ, ಕಾಂತರಾಜು ಆಯೋಗ ತಯಾರಿಸಿರುವ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದನ್ನು ವಿರೋಧಿಸಿ ಸಾಕಷ್ಟು ಬಾರಿ ಛಲವಾದಿ ಸಮುದಾಯ ಪ್ರತಿಭಟನೆ ಮಾಡಿತ್ತು. ಇದರ ಭಾಗವಾಗಿ ಸರ್ಕಾರ ಒಳಮೀಸಲಾತಿ ಜಾರಿ ಸಂಬಂಧ ನಾಗಮೋಹನ್‌ದಾಸ್ ಸಮಿತಿ ನೇಮಿಸಿತ್ತು. ಈ ಸಮಿತಿ ಒಳಮೀಸಲಾತಿ ಜಾರಿ ಸಂಬಂಧ ವೈಜ್ಞಾನಿಕವಾಗಿ ಮತ್ತೊಮ್ಮೆ ದತ್ತಾಂಶ ಸಂಗ್ರಹಕ್ಕೆ ಮುಂದಾಗಿರುವುದನ್ನು ಛಲವಾದಿ ಸಮುದಾಯ ಸ್ವಾಗತಿಸಲಿದೆ ಎಂದರು.ಜನಜಾಗೃತಿ ಮೂಡಿಸಿ

ಮೇ 5ರಿಂದ 17 ರವರೆಗೆ ನಡೆಯುವ ಜಾತಿಸಮೀಕ್ಷೆಯಲ್ಲಿ ನಮ್ಮ ಸಮುದಾಯದ ಪ್ರಜ್ಞಾವಂತರು, ಹೋರಾಟಗಾರರು, ಸುಶಿಕ್ಷಿತರು ತಪ್ಪದೆ ಭಾಗವಹಿಸಿ ಜನರಲ್ಲಿ ಜಾಗೃತಿ ಮೂಡಿಸಿ ಜಾತಿ ಕಾಲಂನಲ್ಲಿ ತಪ್ಪದೆ ಹೊಲೆಯ ಎಂದು ನಮೂದಿಸಲು ನೆರವಾಗಬೇಕು.ಈಮುಖೇನ ಹೊಲೆಯ ಸಮುದಾಯದ ನಿಖರ ಮಾಹಿತಿ ತಿಳಿಯಲು ಸಹಾಯ ಮಾಡಬೇಕು ಎಂದು ಕೋರಿದರು.ಶಿಕ್ಷಕ ಶ್ರೀನಿವಾಸ್ ಮಾತನಾಡಿ, ಪರಿಶಿಷ್ಟಜಾತಿಗಳಲ್ಲಿ 101 ಉಪಜಾತಿಗಳಿವೆ.ಛಲವಾದಿ ಅಥವಾ ಹೊಲೆಯ ಸಮುದಾಯದಲ್ಲಿಯೇ 37 ಉಪಜಾತಿಗಳಿದ್ದು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ತಮ್ಮನ್ನು ತಾವು ಕರೆದುಕೊಳ್ಳುತ್ತಿದ್ದಾರೆ. ಇದು ಗೊಂದಲಗಳಿಗೆ ಕಾರಣವಾಗಿದ್ದು ಈಬಾರಿ ಯಾವುದೇ ಕಾರಣಕ್ಕೂ ಮೂಲ ಜಾತಿ ಕಾಲಂನಲ್ಲಿ ಹೊಲೆಯ ಅಥವಾ ಛಲವಾದಿ ಎಂದೇ ನಮೂದು ಮಾಡಬೇಕು. ಅನಕ್ಷರಸ್ಥ ಸಮುದಾಯಕ್ಕೂ ಹೀಗೇ ಬರೆಸಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಛಲವಾದಿ ಸಮುದಾಯದ ಸಿ.ವಿ.ಕೃಷ್ಣಪ್ಪ,ಗೌರಿಬಿದನೂರು ನಾರಾಯಣಸ್ವಾಮಿ, ಪಾಳ್ಯಕೆರೆ ವೆಂಕಟೇಶ್, ಕೆ.ಜಿ.ಶ್ರೀನಿವಾಸ್, ಸಿದ್ಧರಾಜು, ಜಿ.ಸಿ.ವೆಂಕಟೇಶ್,, ಬಿ.ವಿ.ವೆಂಕಟೇಶ್, ವೆಂಕಟಕೃಷ್ಣ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ