ಭ್ರಮೆ ಸೃಷ್ಟಿಸುವವರ ಮುಖವಾಡ ಕಳಚಿ ಬಿದ್ದಿದೆ: ಕಾಗೇರಿ

KannadaprabhaNewsNetwork | Published : Jun 5, 2024 12:30 AM

ಸಾರಾಂಶ

ನಮ್ಮ ಪಕ್ಷ ವ್ಯಕ್ತಿ ಆಧರಿತವಾಗಿಲ್ಲ, ಪಕ್ಷದ ತತ್ವ-ಸಿದ್ಧಾಂತಗಳಿಗೆ ಆಧರಿತವಾಗಿದೆ. ಇದನ್ನು ಕ್ಷೇತ್ರದಲ್ಲಿ ಹಿಂದಿನಿಂದ ತೋರಿಸಿಕೊಂಡು ಬಂದಿದ್ದು, ಈಗಲೂ ಅದನ್ನೇ ತೋರಿಸಿದ್ದೇವೆ ಎಂದು ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕುಮಟಾ: ಚುನಾವಣೆಯಲ್ಲಿ ಕೆಲವೊಬ್ಬರು ತಾವೇ ಎಲ್ಲ ಎಂಬ ಭ್ರಮೆ ಸೃಷ್ಟಿಸುವ ಕೆಲಸ ಮಾಡಿದ್ದರು. ಆದರೆ ಮತದಾರರು ಸೂಕ್ತ ನಿರ್ಣಯ ನೀಡುವ ಮೂಲಕ ಅವರ ಮುಖವಾಡ ಕಳಚಿ ಬಿದ್ದಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದಕ್ಕೆ ಫಲಿತಾಂಶವೆ ಸಾಕ್ಷಿಯಾಗಿದೆ ಎಂದು ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಮಂಗಳವಾರ ಇಲ್ಲಿನ ಎ.ವಿ. ಬಾಳಿಗಾ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕೋಳಿ ಕೂಗಿದರಷ್ಟೇ ಬೆಳಕಾಗುತ್ತದೆ ಎಂಬ ಮೂಢನಂಬಿಕೆಯಲ್ಲಿ ಕೆಲವರು ರಾಜಕಾರಣ ಮಾಡಲು ಹೊರಟಿದ್ದರು. ಆದರೆ ಇಂದು ಅವರ ಮೀಸೆ ನೆಲಕ್ಕೆ ತಾಗಿ ಮಣ್ಣಾಗಿದೆ ಎಂದು ಹೇಳುವ ಮೂಲಕ ಅನಂತಕುಮಾರ ಹೆಗಡೆ ಮೇಲಿದ್ದ ಅಸಮಾಧಾನವನ್ನು ಕಾಗೇರಿ ಹಾಕಿದರು.

ನಮ್ಮ ಪಕ್ಷ ವ್ಯಕ್ತಿ ಆಧರಿತವಾಗಿಲ್ಲ, ಪಕ್ಷದ ತತ್ವ-ಸಿದ್ಧಾಂತಗಳಿಗೆ ಆಧರಿತವಾಗಿದೆ. ಇದನ್ನು ಕ್ಷೇತ್ರದಲ್ಲಿ ಹಿಂದಿನಿಂದ ತೋರಿಸಿಕೊಂಡು ಬಂದಿದ್ದು, ಈಗಲೂ ಅದನ್ನೇ ತೋರಿಸಿದ್ದೇವೆ. ಹಿಂದುತ್ವ ಹಾಗೂ ರಾಷ್ಟ್ರೀಯತೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ನಂಬಿಕೆ ಇದೆ ಎಂದರು.ಸನಾತನ ಹಿಂದು ಧರ್ಮದ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆ ಜನರಿಗೆ ಬಂದಿದೆ. ಅದಕ್ಕಾಗಿ ಚುನಾವಣೆಯಲ್ಲಿ ಮತದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾವ ಕ್ಷೇತ್ರಕ್ಕೂ ತಾರತಮ್ಯ ಆಗದಂತೆ ಭೇದ- ಭಾವ ಆಗದಂತೆ ನಿಮ್ಮ ಜತೆ ಇದ್ದೇನೆ. ಏಕೆಂದರೆ ಕೆಲವು ಮಾಧ್ಯಮದವರು, ಕಾಂಗ್ರೆಸ್‌ನವರು ನಮ್ಮ ಬಗ್ಗೆ ಬೇರೆ ಅಭಿಪ್ರಾಯ ಮೂಡಿಸಿರಬಹುದು. ಆದರೆ, ಬಿಜೆಪಿ ಯಾವತ್ತಿದ್ದರೂ ಬಿಜೆಪಿಯೇ, ಒಟ್ಟಾಗಿ ಕೆಲಸ ಮಾಡೋಣ ಎಂದರು.

ಮಳೆ ಎಷ್ಟೇ ಜೋರು ಬಂದರೂ ತೋಟ- ಗದ್ದೆಗೆ ನೀರು ಸರಿಯಾಗಿ ಹರಿಯಲು ಕಾಲುವೆ ಬೇಕು. ಮೋದಿ ಅವರು ಮಾಡಿದ ಶ್ರೇಷ್ಠ ಕಾರ್ಯಗಳ ಗಾಳಿಯ ಜತೆಗೆ ಕಾಲುವೆಯಂತೆ ಸಂಘಟನೆಯ ಶಕ್ತಿಯೂ ಹರಿದುಬಂದಿದೆ. ಸಂಘಟನೆ ಕೆಲಸ ಮಾಡಿದರೆ ಹೇಗೆ ಗೆಲುವು ಸಾಧ್ಯ ಎಂಬುದಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಿದೆ. ನಮ್ಮ ಎಲ್ಲ ಮಂಡಲದವರು ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದರು.ಯಲ್ಲಾಪುರ ಕ್ಷೇತ್ರದಲ್ಲಿ ಗೊಂದಲಗಳೇನೇ ಇದ್ದರೂ ಮತದಾರರು ಸಂಪೂರ್ಣವಾಗಿ ಬಿಜೆಪಿ ಬೆಂಬಲಿಸಿ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಪರೋಕ್ಷವಾಗಿ ಹೆಬ್ಬಾರ ಅವರಿಗೆ ಟಾಂಗ್ ನೀಡಿದರು.

ಕಳೆದ ೨ ತಿಂಗಳಲ್ಲಿ ನಮ್ಮ ಪ್ರಚಾರ ಪ್ರವಾಸದಲ್ಲಿ ಮೋದಿ ಅವರನ್ನು ಪ್ರಧಾನಿಯಾಗಿಸುವ ಒಂದೇ ಧ್ವನಿ ಮತ್ತು ಅಪಸ್ವರ ರಹಿತವಾಗಿ ಮಾಡಿದ ಕೆಲಸ ಸಾರ್ಥಕವಾಗಿದೆ. ಎಲ್ಲೆಡೆ ನಮಗೆ ಜೆಡಿಎಸ್ ಸಹಕಾರ ನೀಡಿದೆ. ಮುಖ್ಯವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಎಲೆಮರೆಯ ಕಾಯಿಯಂತೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಎಲ್ಲರೂ ಅಭಿನಂದನೀಯರು ಎಂದರು.

ಮತದಾರ ದೇವರ ಆಶೀರ್ವಾದ: ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾಳಜಿಯ ಯೋಜನೆಗಳು ಹಾಗೂ ಬಿಜೆಪಿ ಕಾರ್ಯಕರ್ತರ ನಿಷ್ಠೆಯ ಶ್ರಮದಿಂದ ಮತದಾರ ದೇವರ ಆಶೀರ್ವಾದಕ್ಕೆ ಪಾತ್ರರಾಗುವಂತಾಯಿತು. ಈ ವಿಶ್ವಾಸ- ಪ್ರೀತಿಗೆ ಕೃತಜ್ಞತೆಯ ದ್ಯೋತಕವಾಗಿ ಉತ್ತರ ಕನ್ನಡ ಕ್ಷೇತ್ರದ ಅಭಿವೃದ್ಧಿಗೆ ವಿಶೇಷವಾಗಿ ದುಡಿಯುತ್ತೇನೆ ಎಂದು ಕಾಗೇರಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಶಾಸಕ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನೀಲ ಹೆಗಡೆ, ಸುನೀಲ ನಾಯ್ಕ, ನಾಗರಾಜ ನಾಯ್ಕ ಕಾರವಾರ, ವಿವೇಕಾನಂದ ವೈದ್ಯ, ಜಿ.ಐ. ಹೆಗಡೆ ಇನ್ನಿತರರು ಇದ್ದರು.

Share this article