ಹಸಿರು ಕಾಶಿಯಾದ ಕಪ್ಪತ್ತಗುಡ್ಡದ ಹೆಚ್ಚಿದ ಆಕರ್ಷಣೆ!

KannadaprabhaNewsNetwork |  
Published : Jun 10, 2025, 01:36 AM IST
ಪೋಟೊ ಕ್ಯಾಪ್ಸನ್: ಅರಣ್ಯ ಇಲಾಖೆಯ ಪರಿಶ್ರಮದಿಂದ ಕಪ್ಪತ್ತಗುಡ್ಡದಲ್ಲಿ ಕಂಡು ಬಂದ ಸುಂದರ ಪರಿಸರದ ನಡುವೆ ಕಂಡು ಬಂದ ನಮ್ಮ ಕಪ್ಪತ್ತಗುಡ್ಡ ಎನ್ನುವ ಲೋಗೋ ಪ್ರವಾಸಿಗರ ಸ್ಪೇಲ್ಪಿ ತಾಣ. | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಿಸಿದ ನಂತರ ಕಪ್ಪತ್ತಗಿರಿಯ ಸೊಗಸಿಗೆ ಮತ್ತಷ್ಟು ರಮ್ಯತೆ ಮೂಡಿದೆ. ಕುರುಚಲು ಕಾಡಿನ ಸೊಬಗು ದಿನೇ ದಿನೇ ದಟ್ಟವಾಗುತ್ತಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಿಸಿದ ನಂತರ ಕಪ್ಪತ್ತಗಿರಿಯ ಸೊಗಸಿಗೆ ಮತ್ತಷ್ಟು ರಮ್ಯತೆ ಮೂಡಿದೆ. ಕುರುಚಲು ಕಾಡಿನ ಸೊಬಗು ದಿನೇ ದಿನೇ ದಟ್ಟವಾಗುತ್ತಿದೆ.

ಖನಿಜ ನಿಕ್ಷೇಪಗಳು ಸುರಕ್ಷಿತಗೊಂಡಿವೆ. ಔಷಧೀಯ ಗುಣವುಳ್ಳ ಸಸ್ಯ ಸಂಪತ್ತು ವೃದ್ಧಿಸಿ, ಕನ್ನಡ ನಾಡಿನ ಶುದ್ಧ ಹವೆಯ ತಾಣ ಎನಿಸಿದೆ. ಈ ಹಸಿರು ಸರಪಳಿಯ ಜತೆಗೆ ಇಲ್ಲಿನ ವನ್ಯಜೀವಿಗಳ ಸಂತತಿಯೂ ಹೆಚ್ಚಾಗಿರುವುದು ಗಮನಾರ್ಹ ವಿಷಯವಾಗಿದೆ.

ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರಿನ ವರೆಗೆ ಕಪ್ಪತ್ತಗುಡ್ಡ ಚಾಚಿಕೊಂಡಿದೆ. ಶಿರಹಟ್ಟಿ ಸೇರಿ ಮೂರು ತಾಲೂಕುಗಳಲ್ಲಿ 65 ಕಿ.ಮೀಗಳಷ್ಟು ಉದ್ದಕ್ಕೆ ಕವಲು ಕವಲಾಗಿ ಸಣ್ಣ ಮತ್ತು ದೊಡ್ಡ ಗುಡ್ಡಗಳ ಸಾಲುಗಳಿಂದ ಹಚ್ಚು ಹಸಿರಿನಿಂದ ಕಂಗೊಳಿಸುವ ಕಪ್ಪತ್ತಗುಡ್ಡವಾಗಿದೆ.

ಗುಡ್ಡ ಮತ್ತು ಕೊಳ್ಳಗಳು:ಕಪ್ಪತ್ತಗುಡ್ಡದಲ್ಲಿರುವ ಸೂಜಿ ಮಡ್ಡಿ, ಕೆಂಪ ಗುಡ್ಡ, ಗಾಳಿಗುಂಡಿ ಬಸವಣ್ಣ, ಎತ್ತಿನ ಗುಡ್ಡ, ಅನೆ ಸೊಂಡಿಲು, ಉಪ್ಪಿನ ಪಡಿ, ಮಂಜಿನ ದೋಣಿ, ಮಜ್ಜಿಗೆ ಬಸವಣ್ಣ ಗುಡ್ಡ ಸೇರಿದಂತೆ ಇತರ ಗುಡ್ಡಗಳಲ್ಲಿ ಕತ್ತೆಕಿರುಬ, ತೋಳ, ಚಿರತೆ, ನರಿ, ಗುಳ್ಳೆನರಿ, ರಸ್ತೆ ಸ್ಪಾಟೆಡ್ ಕ್ಯಾಟ್. ಪುನುಗು ಬೆಕ್ಕು, ಚುಕ್ಕೆ ಜಿಂಕೆ, ಕೃಷ್ಣಮೃಗ ಕೊಂಡುಕುರಿ, ಮುಳ್ಳುಹಂದಿ, ಕಾಡುಹಂದಿ ಕಂಡುಬಂದರೆ ಔಷಧೀಯ ಪಂಚಲೋಹಗಳ ಗುಡ್ಡವಾಗಿರುವುದರಿಂದ ಇಲ್ಲಿ ಬೆಳೆಯುವ ವನಸ್ಪತಿಗಳು ನಾನಾ ರೋಗಗಳ ನಿವಾರಣೆಗೆ ತುಂಬಾ ಪರಿಣಾಮಕಾರಿಯಾಗಿವೆ. ದೇಶದ ನಾನಾ ಮೂಲೆಗಳಿಂದ ನಾಟಿ ವೈದ್ಯರು, ಪಾರಂಪರಿಕ ವೈದ್ಯರು ಇಲ್ಲಿಗೆ ಆಗಮಿಸಿ ವನಸ್ಪತಿಗಳನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ.

ಆಧ್ಯಾತ್ಮಿಕ ಸುಕ್ಷೇತ್ರ: ಕಪ್ಪತ್ತಗುಡ್ಡ ಅನೇಕ ದೇವಾಲಯಗಳು, ಮಠಗಳು, ಶ್ರದ್ಧಾ ಕೇಂದ್ರಗಳನ್ನು ಹೊಂದಿರುವ ಅಧ್ಯಾತ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಪ್ರತಿದಿನ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಹಬ್ಬ ಹರಿದಿನಗಳು, ಹುಣ್ಣಿಮೆ, ಅಮಾವಾಸ್ಯೆ, ಜಾತ್ರೆ, ಉತ್ಸವ, ಆರಾಧನೆ ಸಮಯಗಳಲ್ಲಿ ಭಕ್ತ ಸಾಗರ ಕಪ್ಪತ್ತಗುಡ್ಡದತ್ತ ಹರಿದು ಬರುವುದು ವಿಶೇಷವಾಗಿದೆ.

ಕಪ್ಪತ್ತಗುಡ್ಡ ಮೇಲು ತುದಿಯಲ್ಲಿ ನಮ್ಮ ಕಪ್ಪತ್ತಗುಡ್ಡ ಎನ್ನುವ ಲೋಗೊ, ಕಪ್ಪತ್ತಗುಡ್ಡಕ್ಕೆ ಹೋಗುವ ದಾರಿಯನ್ನು ಫಲಕದಲ್ಲಿ ಕಪ್ಪತ್ತಗುಡ್ಡದಲ್ಲಿ ಇರುವ ಪ್ರಾಣಿಗಳ ಚಿತ್ರಣ, ಬಾಗೇವಾಡಿಯ ನರ್ಸರಿಯಲ್ಲಿ ಸಿಗುವ ಸಸಿಗಳು, ಕಪ್ಪತ್ತಗುಡ್ಡದಲ್ಲಿ ಪ್ಲಾಸ್ಟಿಕ್ ನಿಷೇಧ, ಪ್ಲಾಸ್ಟಿಕ್ ತಡೆಗಾಗಿ ಹಲವಾರು ಕ್ರಮಗಳ ಮೂಲಕ ಮತ್ತು ವಿವಿಧ ವಿನೂತನ ಮಾದರಿಯ ಫಲಕಗಳನ್ನು ಅಳವಡಿಕೆಯ ಮೂಲಕ ಪರಿಸರದ ಕುರಿತು ಜನರಲ್ಲಿ ಅದರ ಮೌಲ್ಯವನ್ನು ತಿಳಿಸುವ ಮಹತ್ತ ಕಾರ್ಯವನ್ನು ಅರಣ್ಯ ಇಲಾಖೆಯ ಆರ್‌ಎಫ್‌ಒ ಮಂಜುನಾಥ ಮೇಗಲಮನಿ ಮತ್ತು ಸಿಬ್ಬಂದಿ ವರ್ಗ ಮಾಡಿರುವುದು ಜನರಲ್ಲಿ ಪ್ರಶಂಸೆಗೆ ಕಾರಣವಾಗಿದೆ.

''''ಎಪ್ಪತ್ತಗಿರಿ ನೋಡೋದಕ್ಕಿಂತ ಕಪ್ಪತ್ತಗಿರಿ ನೋಡೋದು ಲೇಸು'''' ಎಂಬ ಹಿರಿಯರ ಮಾತಿನಂತೆ ಕಪ್ಪತ್ತಗುಡ್ಡದ ನೈಸರ್ಗಿಕ ಸಿರಿ ಸೌಂದರ್ಯ ಹೃದಯಕ್ಕೆ ತಂಪೆರೆಯುತ್ತದೆ. ಬೇಸಿಗೆಯಲ್ಲಿ ದಣಿವಾರಿಸಿಕೊಳ್ಳಲು, ಮಳೆಗಾಲದಲ್ಲಿ ವರ್ಷಧಾರೆಯ ಸೊಬಗು ಕಣ್ಣುಂಬಿಕೊಳ್ಳಲು, ಚಳಿಗಾಲದಲ್ಲಿ ಸೃಷ್ಟಿಯ ವಿಸ್ಮಯ ನೋಡಲು ಒಮ್ಮೆ ಬಂದರೆ ಮತ್ತೆ ಮತ್ತೆ ಬರಬೇಕೆನಿಸುವ ಸುಂದರ 100ರಷ್ಟು ಪರಿಶುದ್ಧ ಗಾಳಿಯ ನೈಸರ್ಗಿಕ ತಾಣ ಇದಾಗಿದೆ.ನಮ್ಮ ಉಸಿರಾಟದ ಗಾಳಿಯನ್ನು ಶುದ್ಧಗೊಳಿಸಲು ದೇವರು ನಿರ್ಮಿಸಿದ ಕಾರ್ಖಾನೆಯೇ ಅರಣ್ಯವಾಗಿದೆ. ನಾವು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಆಮ್ಲಜನಕವನ್ನು ನೀಡಬೇಕಾದರೆ ನಾವು ನೀವೆಲ್ಲರೂ ಪರಿಸರ ಉಳಿಸುವ ಪಣತೊಡುವುದು ತುಂಬಾ ಅವಶ್ಯಕ. ಕಪ್ಪತ್ತಗುಡ್ಡಕ್ಕೆ ದೇಶ, ವಿದೇಶದ ಪ್ರವಾಸಿಗರು ದಿನ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಪರಿಸರಪ್ರಿಯರಿಗೆ ಉಲ್ಲಾಸ ನೀಡುತ್ತಿದೆ ಎಂದು ಮುಂಡರಗಿ ಆರ್‌ಎಫ್‌ಓ ಮಂಜುನಾಥ ಮೇಗಲಮನಿ ಹೇಳಿದರು.ಕಪ್ಪತ್ತಗುಡ್ಡ ನಿರ್ಮಲ ಪರಿಸರದ ತಾಯಿಬೇರು. ಇದು ಉಳಿದರೆ ಪರಿಸರ ವೃಕ್ಷ ಉಳಿದೀತು. ಇಲ್ಲದೆ ಹೋದರೆ ಭವಿಷ್ಯತ್ತಿನ ಜನಾಂಗದ ಭವಿಷ್ಯ ಅಳಿದು ಹೋದಿತು‌, ಪ್ರತಿಯೊಬ್ಬರೂ ಎಚ್ಚರಗೊಳ್ಳಿ. ಆಧುನಿಕ ಜಗತ್ತಿನ ಮನುಷ್ಯ ಕೆಲ ಆಮಿಷಗಳಿಗೆ ಕಟ್ಟುಬಿದ್ದು ಪ್ರಕೃತಿಯ ಉಳಿಸುವ ಬದಲು ಅಳವಿನಂಚಿನಲ್ಲಿ ಒಯ್ಯುತ್ತಿದ್ದಾನೆ. ನಾವೆಲ್ಲರೂ ಎಚ್ಚೆತ್ತು ಪರಿಸರಕ್ಕೆ ಆದ್ಯತೆ ನೀಡಲು ಮುಂದಾಗಬೇಕು. ಅರಣ್ಯ ಇಲಾಖೆ 1.50 ಲಕ್ಷಗಳ ಗಿಡಗಳನ್ನು ಸಿದ್ಧಪಡಿಸಿರುವುದು ಪ್ರಶಂಸನೀಯ, ಅದರ ಸದುಪಯೋಗ ಪಡಿಸಿಕೊಳ್ಳಿ ಎಂದು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!