ಅಮಾಯಕರ ಬಂಧಿಸಲ್ಲ, ತಪ್ಪಿತಸ್ಥರನ್ನಂತೂ ಸುಮ್ನೇ ಬಿಡಲ್ಲ: ಐಜಿಪಿ ಹೇಳಿಕೆ

KannadaprabhaNewsNetwork | Published : Sep 21, 2024 1:51 AM
(ಸಾಂದರ್ಭಿಕ ಚಿತ್ರ) | Kannada Prabha

ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿದ್ದು, ನಮ್ಮ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪರಿಸ್ಥಿತಿಯನ್ನು ಸಾಕಷ್ಟು ನಿಯಂತ್ರಣ ಮಾಡಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ರಮೇಶ ಬಾನೋಟ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದಾವಣಗೆರೆಯಲ್ಲಿ 144ನೇ ಸೆಕ್ಷನ್ ಹಾಕುವ ಸ್ಥಿತಿ ಇಲ್ಲ: ಐಜಿಪಿ ರಮೇಶ ಬಾನೋಟ್‌

- - -

- ಸಾಕ್ಷಾಧಾರಗಳಿಂದಲೇ ಬಂಧನ, ಅಮಾಯಕರನ್ನು ಬಂಧಿಸಿದ್ದಾರೆಂದು ಯಾರೂ ಹೇಳಬಾರದು

- ಪೊಲೀಸ್‌ ಸಿಬ್ಬಂದಿಯಿಂದ ಉತ್ತಮ ಕಾರ್ಯನಿರ್ವಹಣೆ

- ಸಾರ್ವಜನಿಕರಿಗೆ ಗಾಯವಾದ ಬಗ್ಗೆ ಯಾರೂ ದೂರು ನೀಡಿಲ್ಲ

- ಪರೋಕ್ಷವಾಗಿಯೂ ಬೆಂಬಲಿಸಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುತ್ತೇವೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿದ್ದು, ನಮ್ಮ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪರಿಸ್ಥಿತಿಯನ್ನು ಸಾಕಷ್ಟು ನಿಯಂತ್ರಣ ಮಾಡಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ರಮೇಶ ಬಾನೋಟ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಗಳ ಮೇಲೆ ಕಲ್ಲು ತೂರಾಟ, ಸಾರ್ವಜನಿಕರ ಮೇಲೆ ಕಲ್ಲು ತೂರಾಟ ಸೇರಿದಂತೆ ಒಟ್ಟು 5 ಪ್ರಕರಣ ದಾಖಲಿಸಲಾಗಿದೆ. ಕಿಡಿಗೇಡಿಗಳ ಪತ್ತೆ ಕೆಲಸ ನಡೆದಿದೆ. ಇಬ್ಬರು ಪೊಲೀಸ್ ಸಿಬ್ಬಂದಿ ಕಲ್ಲು ತೂರಾಟದ ವೇಳೆ ಗಾಯಗೊಂಡಿದ್ದಾರೆ. 30 ಜನರನ್ನು ವಶಕ್ಕೆ ಪಡೆದಿದ್ದೇವೆ. ದಾವಣಗೆರೆ ಡಿಸಿ, ಎಸ್‌ಪಿ ನೇತೃತ್ವದಲ್ಲಿ ಸದ್ಯದಲ್ಲೇ ಶಾಂತಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಮಾಯಕರನ್ನೂ ಬಂಧಿಸುವುದಿಲ್ಲ. ಸಾಕ್ಷ್ಯಾಧಾರಗಳ ಆಧಾರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಅಮಾಯಕರನ್ನು ಬಂಧಿಸಿದ್ದಾರೆಂದು ಯಾರು ಸಹ ಹೇಳಬಾರದು. 144ನೇ ಸೆಕ್ಷನ್ ಜಾರಿಗೊಳಿಸುವ ಅವಶ್ಯಕತೆ ಇಲ್ಲ. ಸಾರ್ವಜನಿಕರಿಂದ ಉತ್ತಮ ಸಹಕಾರ ಸಿಕ್ಕಿದೆ ಎಂದು ಐಜಿಪಿ ತಿಳಿಸಿದರು.

ಗಣೇಶ ಮೂರ್ತಿ ಮೆರವಣಿಗೆ ವೇಳೆ ನಮ್ಮ ಸಿಬ್ಬಂದಿಯೂ ಇದ್ದರು. ಸೂಕ್ಷ್ಮ ಪ್ರದೇಶಗಳಲ್ಲಿ ನಮ್ಮ ಸಿಬ್ಬಂದಿಯನ್ನು ಮೊದಲೇ ನಿಯೋಜನೆ ಮಾಡಿರುತ್ತೇವೆ. ಇಬ್ಬರು ಸಿಬ್ಬಂದಿಗೆ ಗಾಯವಾಗಿದೆ. ಸಾರ್ವಜನಿಕರಿಗೆ ಗಾಯವಾದ ಬಗ್ಗೆ ಯಾರೂ ದೂರು ನೀಡಿಲ್ಲ. ಕಿಡಿಗೇಡಿಯೊಬ್ಬರು ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಆಸ್ತಿ ನಷ್ಟದ ಬಗ್ಗೆ ಯಾವುದೇ ದೂರು ಬಂದಿಲ್ಲ. ಖಾಲಿ ಬಿಯರ್ ಬಾಟಲಿಗಳನ್ನು ಪತ್ತೆ ಮಾಡಿದ್ದು, ಅವುಗಳು ಪೆಟ್ರೋಲ್ ಬಾಂಬ್ ಆಗಿರಲಿಲ್ಲ. ಅಲ್ಲಿ 10 ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಕಲ್ಲು ತೂರಾಟಕ್ಕೆ ಯಾರು ಪ್ರಚೋದನೆ ನೀಡಿದ್ದು ಎಂಬ ಬಗ್ಗೆಯೂ ತನಿಖೆ ನಡೆದಿದೆ. ಯಾರೇ ಪ್ರಚೋದನೆ ನೀಡಿರಲಿ, ನೇರವಾಗಿ ಆಗಲಿ, ಪರೋಕ್ಷವಾಗಿಯೇ ಆಗಿರಲಿ ಬೆಂಬಲಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಎಚ್ಚರಿಸಿದರು. ದಾವಣಗೆರೆ ಅರಳೀಮರ ಇತರೆ ಭಾಗದಲ್ಲಿ ಗುರುವಾರ ಸಂಜೆ ನಂತರ ಕಲ್ಲು ತೂರಾಟ, ಘರ್ಷಣೆಯನ್ನು ನಿಯಂತ್ರಿಸುವಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಸಾಕಷ್ಟು ಶ್ರಮಿಸಿದ್ದಾರೆ. ಸಾರ್ವಜನಿಕರು ಸಹ ಇದಕ್ಕೆ ಸಹಕಾರ ನೀಡಿದ್ದಾರೆ. 144ನೇ ಸೆಕ್ಷನ್ ಹಾಕುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ನಾವು ಬಿಟ್ಟೇ ಇಲ್ಲ. ಶಾಂತಿ, ಸಾಮರಸ್ಯ ಕದಡಲು ಯಾರೇ ಪ್ರಯತ್ನಿಸಿದರೂ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಐಜಿಪಿ ರಮೇಶ ಬಾನೋಟ್ ಪುನರುಚ್ಚರಿಸಿದರು.

- - - (ಸಾಂದರ್ಭಿಕ ಚಿತ್ರ)