ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸುವುದೇ ಜನಗಣಮನ ಯಾತ್ರೆಯ ಮೂಲ ಕಲ್ಪನೆಯಾಗಿದೆ ಎಂದು ವಾಗ್ಮಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಬುಧವಾರ ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಆರಂಭವಾದ ಜನಗಣಮನ ಯಾತ್ರೆಯ ಬೈಕ್ ರ್‍ಯಾಲಿಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿರುವ ಭಿನ್ನಭಿನ್ನ ಜನರನ್ನು ಮುನ್ನೆಲೆಗೆ ಕರೆದುಕೊಂಡು ಬರುವುದರೊಂದಿಗೆ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಯಾತ್ರೆ ಕೋಲಾರದಿಂದ ಆರಂಭವಾಗಿ ಮೈಸೂರು, ಚಾಮರಾಜನಗರ ಸೇರಿದಂತೆ ಉತ್ತರ ಕರ್ನಾಟಕ ಪೂರ್ಣಗೊಳಿಸಿ ಈಗ ಹುಬ್ಬಳ್ಳಿಗೆ ಬಂದಿದೆ.ಯಾತ್ರೆಗೆ ದಾರಿಯುದ್ದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯಾತ್ರೆಯ ವೇಳೆ ಹಕ್ಕಿ ಪಿಕ್ಕಿ ಜನಾಂಗದವರನ್ನು ಭೇಟಿ ನೀಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಗೊತ್ತಾ ಎಂದು ಕೇಳಿದರೆ ಅವರಿಂದ ಬಂದ ಉತ್ತರ ಮೋದಿ ಗೊತ್ತು, ನಮಗೆಲ್ಲ ಉಚಿತ ಗ್ಯಾಸ್ ನೀಡಿದ್ದು ಅವರೆ ಎಂದು ಹೇಳುತ್ತಾರೆ, 370 ಬಗ್ಗೆ, ನೋಟುಗಳ ಅಮಾನ್ಯೀಕರಣದ ಬಗ್ಗೆ ಮಾತನಾಡುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸಮಾಜದ ಮೂಲೆ ಮೂಲೆಗಳಲ್ಲಿ ತಲುಪಿವೆ. ಅದನ್ನು ಈ ಯಾತ್ರೆಯ ಮೂಲಕ ಜಾಗೃತಗೊಳಿಸಿ ಮೂರನೇ ಬಾರಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಕೆಲಸ ಕೈಗೊಳ್ಳಲಾಗುತ್ತಿದೆ ಎಂದರು.ಜನಗಣಮನಕ್ಕೆ ಅದ್ಧೂರಿ ಸ್ವಾಗತ:
ಇಡೀ ರಾಜ್ಯಾದ್ಯಂತ ಜನಗಣಮನ ಬೆಸೆಯೋಣ ಕಾರ್ಯಕ್ರಮದ ಅಂಗವಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬುಧವಾರ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಗಮಿಸುತ್ತಿದ್ದಂತೆ ಡೊಳ್ಳು ಮೇಳಗಳಿಂದ ಹಿಂದೂ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ರೈಲ್ವೆ ನಿಲ್ದಾಣದಲ್ಲಿರುವ ಸ್ವಾಮಿ ವಿವೇಕಾನಂದ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.