ದೇವರಹಿಪ್ಪರಗಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Jan 29, 2024, 01:32 AM IST
ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ..ಪಟ್ಟಣದಲ್ಲಿ ಮೊಳಗಿದ ಕನ್ನಡ ಸಂಭ್ರಮ ! | Kannada Prabha

ಸಾರಾಂಶ

ದೇವರಹಿಪ್ಪರಗಿ ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಹತ್ತಿರ ಭಾನುವಾರ ಕನ್ನಡ ಜ್ಯೋತಿ ರಥಯಾತ್ರೆ ಪ್ರವೇಶಿಸುತ್ತಿದ್ದಂತೆ ರಥದಲ್ಲಿ ಅಲಂಕೃತಗೊಂಡಿರುವ ಕನ್ನಡಾಂಬೆ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣದಲ್ಲಿ ಮೊಳಗಿದ ಕನ್ನಡ ಕಹಳೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಜಯಘೋಷದ ಸಂಭ್ರಮ. ಬಾನೆತ್ತರಕ್ಕೆ ಹಾರಾಡಿದ ಕೆಂಪು ಹಳದಿಯ ಬಾವುಟ. ಎಲ್ಲೆಲ್ಲೂ ಕನ್ನಡ ಬನ್ನಿ ನಮ್ಮ ಸಂಗಡ ಎಂಬ ಒಕ್ಕೊರಲದ ಕೂಗು, ಹರ್ಷೋದ್ಗಾರ. ಈ ಮೂಲಕ ಸಾವಿರಾರು ಕನ್ನಡದ ಮನಸುಗಳು ಪಟ್ಟಣದಲ್ಲಿ ಅದ್ಧೂರಿಯಾಗಿ ಕನ್ನಡ ರಥ ಯಾತ್ರೆಯನ್ನು ಮುಕ್ತವಾಗಿ ಬೆರೆತು ಸ್ವಾಗತಿಸಿದವು.

ದೇವರಹಿಪ್ಪರಗಿ ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಹತ್ತಿರ ಭಾನುವಾರ ಕನ್ನಡ ಜ್ಯೋತಿ ರಥಯಾತ್ರೆ ಪ್ರವೇಶಿಸುತ್ತಿದ್ದಂತೆ ರಥದಲ್ಲಿ ಅಲಂಕೃತಗೊಂಡಿರುವ ಕನ್ನಡಾಂಬೆ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಲಾಯಿತು. ನಂತರ ಪುಷ್ಪನಮನ ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಪ್ರಕಾಶ ಸಿಂದಗಿ, ರಾಜ್ಯಾದ್ಯಂತ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಅರಿವು ಮೂಡಿಸುವ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಕನ್ನಡ ರಥಯಾತ್ರೆಗೆ ಭವ್ಯ ಸ್ವಾಗತ ಕೋರಿದ ತಾಲೂಕಿನ ಕನ್ನಡ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ, ಇಡೀ ವರ್ಷ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡ ಭಾಷೆ, ನುಡಿ, ಜಲ ಅಸ್ಮಿತೆಗಾಗಿ ಸಂಘರ್ಷ, ಹೋರಾಟ ಮಾಡಿದ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾತನಾಡಿ, ಕನ್ನಡ ನಾಡನ್ನು ಕಟ್ಟಿ ಬೆಳೆಸಲು ಅನೇಕ ಹೋರಾಟಗಾರರು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ಅವರ ಸಹಕಾರದಿಂದ ಕರ್ನಾಟಕ ರೂಪುಗೊಂಡಿದೆ ಎಂಬ ಸಂಗತಿಯನ್ನು ಯುವ ಸಮುದಾಯ ಅರಿತುಕೊಳ್ಳಬೇಕು ಎಂದರು.

ಅಂಬೇಡ್ಕರ್ ವೃತ್ತದಲ್ಲಿ ಮಾತನಾಡಿದ ಪರದೇಶಿ ಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳು, ಕನ್ನಡ ನೆಲದ ರಕ್ಷಣೆಗೆ ನಿಂತ ಪ್ರತಿಯೊಬ್ಬರನ್ನೂ ನೆನೆಯುದರ ಜೊತೆಗೆ ಯುವ ಸಮುದಾಯಕ್ಕೆ ಹಿಂದಿನ ಇತಿಹಾಸ ತಿಳಿಸಿ ಕೊಡುವ ಪ್ರಯತ್ನ ಮಾಡಬೇಕಾಗಿದೆ. ಇಲ್ಲದಿದ್ದರೆ ಯುವ ಪೀಳಿಗೆಗೆ ಇತಿಹಾಸ ಸೃಷ್ಟಿಸಲು ಆಗುವುದಿಲ್ಲ. ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ತನ್ನದೆ ಆದ ಕಲೆ ಸಂಸ್ಕೃತಿ, ಪರಂಪರೆ ಹೊಂದಿದೆ ಎಂದು ಹೇಳಿದರು.

ರಥಯಾತ್ರೆ ಮೆರವಣಿಗೆ ಸಂದರ್ಭದಲ್ಲಿ ಕನ್ನಡ ಮತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಡಿ ವಿವಿಧ ಕಲಾತಂಡಗಳು ಡೊಳ್ಳು ಕುಣಿತ, ಕಂಸಾಳೆ, ನೃತ್ಯ ಪ್ರದರ್ಶನ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಗಮನ ಸೆಳೆದವು.

ಈ ಸಂದರ್ಭದಲ್ಲಿ ಜಡೆ ಸಿದ್ದೇಶ್ವರ ಮಠದ ಜೆಡಿ ಸಿದ್ದೇಶ್ವರ ಸ್ವಾಮೀಜಿ, ತಾಪಂ ಇಒ ಭಾರತಿ ಚೆಲುವಯ್ಯ, ಪಪಂ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ಕಸಾಪ ಅಧ್ಯಕ್ಷ ಜಿ.ಪಿ. ಬಿರಾದಾರ, ಕಂದಾಯ ನಿರೀಕ್ಷಕ ಸುರೇಶ ಮ್ಯಾಗೇರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಎಸ್.ಬಿ.ಹಚ್ಚಡದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲಿಕಾರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರಪ್ಪ ಕುದುರಿ, ಸಾಲಕ್ಕಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವಿ.ಎಂ.ಪಾಟೀಲ, ಸಿದ್ದೇಶ್ವರ ಸ್ವಾಮೀಜಿ ಶಾಲಾ ಸಂಚಾಲಕ ವಿ.ಕೆ.ಪಾಟೀಲ, ಶಾಸಕರ ಮಾದರಿ ಶಾಲಾ ಮುಖ್ಯ ಗುರುಗಳಾದ ಪಿ.ಸಿ.ತಳಕೇರಿ, ಪಪಂ ಸದಸ್ಯರು, ಪಟ್ಟಣದ ವಿವಿಧ ಸಂಘ, ಸಂಸ್ಥೆಗಳ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

---------

ಕನ್ನಡ ನೆಲದ ರಕ್ಷಣೆಗೆ ನಿಂತ ಪ್ರತಿಯೊಬ್ಬರನ್ನೂ ನೆನೆಯುದರ ಜೊತೆಗೆ ಯುವ ಸಮುದಾಯಕ್ಕೆ ಹಿಂದಿನ ಇತಿಹಾಸ ತಿಳಿಸಿ ಕೊಡುವ ಪ್ರಯತ್ನ ಮಾಡಬೇಕಾಗಿದೆ. ಇಲ್ಲದಿದ್ದರೆ ಯುವ ಪೀಳಿಗೆಗೆ ಇತಿಹಾಸ ಸೃಷ್ಟಿಸಲು ಆಗುವುದಿಲ್ಲ. ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ.

- ಶ್ರೀ ಶಿವಯೋಗಿ ಮಹಾಸ್ವಾಮಿಗಳು, ಪರದೇಶಿ ಮಠ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ