- ಧುಳೆಹೊಳೆ ಶಾಲೆಯಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆ- - -
ಮಲೇಬೆನ್ನೂರು: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂಥ ಹಿನ್ನೆಲೆ ಹೊಂದಿರುವ ಭೂಮಿ ಇರೋವರೆಗೂ ಕನ್ನಡ ಭಾಷೆ ಮೆರೆಯಲಿದೆ. ಕನ್ನಡ ಎಂದಿಗೂ ನಾಶವಾಗಲು ಸಾಧ್ಯವಿಲ್ಲ ಎಂದು ಹರಿಹರ ತಾಲೂಕು ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಅಭಿಪ್ರಾಯಪಟ್ಟರು.ಇಲ್ಲಿಗೆ ಸಮೀಪದ ಧೂಳೆಹೊಳೆ ಗ್ರಾಮದ ಗೊಲ್ಲರಹಳ್ಳಿ ಮಠದ ಚನ್ನಮ್ಮ ಗುರುಬಸಯ್ಯ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೧ನೇ ಸಂಸ್ಥಾಪನಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಡಿನಲ್ಲಿ ಹಲವು ಸಂಸ್ಥೆಗಳು ಜನಿಸುತ್ತವೆ ಮತ್ತು ಕೆಲವು ಇತಿಹಾಸದ ಪುಟ ಸೇರುತ್ತವೆ. ಆದರೆ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾತ್ರ ನಿರಂತರ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತ ಕ್ರಿಯಾಶೀಲವಾಗಿದೆ. ಇದು ನಿತ್ಯೋತ್ಸವ ಪರಿಷತ್ತು ಆಗಿದೆ ಎಂದು ಶ್ಲಾಘಿಸಿದರು.
ನವ ಜೋಡಿಗಳಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡ ಶಾಲು ಹಾಗೂ ಪುಸ್ತಕ ನೀಡುವ ಸಂಕಲ್ಪ ಮಾಡಿದ ಕಸಬಾ ಅಧ್ಯಕ್ಷೆ ಕೆ.ಟಿ. ಗೀತಾ ಮಾತನಾಡಿ, ಕನ್ನಡ ನೆಲ, ಜಲ, ಭಾಷೆಗೆ ಧಕ್ಕೆ ಆದಲ್ಲಿ ಹೋರಾಟ ಮಾಡುವ ಮತ್ತು ನಿರಂತರ ಸಮ್ಮೇಳನಗಳು, ಶಾಲಾ- ಕಾಲೇಜುಗಳಲ್ಲಿ ಉಪಯುಕ್ತ ಕನ್ನಡ ಮಾಹಿತಿಗಳನ್ನು, ದತ್ತಿ ಉಪನ್ಯಾಸವನ್ನು ಏರ್ಪಡಿಸುವ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಚಲನಶೀಲತೆ ಉಳಿಸಿಕೊಂಡಿದೆ ಎಂದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಈ ಮಾಹೆಯಲ್ಲಿ ಹೊಳೆಸಿರಿಗೆರೆ ಅಥವಾ ಕೊಕ್ಕನೂರು ಗ್ರಾಮದಲ್ಲಿ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಲಲು ತಾಲೂಕು ಸಮಿತಿ ಗಮನಹರಿಸಬೇಕು. ಪರಿಷತ್ತು ಸದಸ್ಯರಾಗಲು ನೂರಾರು ಕನ್ನಡಿಗರು ಉತ್ಸುಕತೆ ತೋರುತ್ತಿದ್ದಾರೆ ಎಂದರು.
ಮೂರನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಷಣ್ಮುಖಪ್ಪ, ಸಂಘಟನಾ ಕಾರ್ಯದರ್ಶಿ ಎಚ್.ಎಂ. ಸದಾನಂದ, ದತ್ತಿ ದಾನಿ ಮಲ್ಲಿಕಾರ್ಜುನ್ ಕಲಾಲ್, ಕವಿಗಳಾದ ಪಂಚಾಕ್ಷರಿ, ರೇಣುಕಾ, ಮಂಜಪ್ಪ, ನಿವೃತ್ತ ಶಿಕ್ಷಕ ನೀಲನಗೌಡ, ವೀರಭದ್ರಯ್ಯ ಮತ್ತಿತರರು ಇದ್ದರು. ಆರಂಭದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.- - -
-೫ಎಂಬಿಆರ್೨.ಜೆಪಿಜಿ:ಧೂಳೆಹೊಳೆ ಗ್ರಾಮದ ಗೊಲ್ಲರಹಳ್ಳಿ ಮಠದ ಚನ್ನಮ್ಮ ಗುರುಬಸಯ್ಯ ಪ್ರೌಢಶಾಲೆಯಲ್ಲಿ ಕಸಾಪ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.