ಬ್ರಿಟಿಷರಿಂದಾಗಿ ನಾಲ್ಕು ಭಾಗವಾಗಿದ್ದ ಕನ್ನಡ ನಾಡು: ಸುಮತಿ

KannadaprabhaNewsNetwork |  
Published : Nov 25, 2026, 01:45 AM IST
ಕ್ಯಾಪ್ಷನ24ಕೆಡಿವಿಜಿ31 ದಾವಣಗೆರೆಯಲ್ಲಿ ವನಿತಾ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೇಖಕಿ ಕಿರಣ್ ಪ್ರಸಾದ್ ರಾಜನಹಳ್ಳಿ ಅವರಿಗೆ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಕನ್ನಡ ನಾಡು ವೈವಿಧ್ಯತೆ, ಪ್ರಕೃತಿ ಸಂಪತ್ತಿನಿಂದ ಸಮೃದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಐಟಿ, ಬಿಟಿ ಕ್ಷೇತ್ರಗಳಿಂದ ವಿಶ್ವದ ಗಮನವನ್ನೂ ಸೆಳೆದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಹೇಳಿದ್ದಾರೆ.

- 71ನೇ ಕನ್ನಡ ರಾಜ್ಯೋತ್ಸವ, ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ನಾಡು ವೈವಿಧ್ಯತೆ, ಪ್ರಕೃತಿ ಸಂಪತ್ತಿನಿಂದ ಸಮೃದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಐಟಿ, ಬಿಟಿ ಕ್ಷೇತ್ರಗಳಿಂದ ವಿಶ್ವದ ಗಮನವನ್ನೂ ಸೆಳೆದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಹೇಳಿದರು.

ನಗರದ ಪಿ.ಜೆ. ಬಡಾವಣೆಯ ವನಿತಾ ಸಮಾಜದಲ್ಲಿ ಸೋಮವಾರ ನಗರದ ದಾವಣಗೆರೆ ವನಿತಾ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ, 32ನೇ ವಾರ್ಷಿಕೋತ್ಸವ, ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕದಂಬರು, ಗಂಗರು, ರಾಷ್ಟ್ರಕೂಟರು, ಹೊಯ್ಸಳರು, ಚಾಲುಕ್ಯರು, ವಿಜಯನಗರದ ಅರಸರು ಮತ್ತು ಮೈಸೂರು ಒಡೆಯರಂತಹ ಶ್ರೇಷ್ಠ ರಾಜವಂಶಗಳು ಈ ನಾಡನ್ನು ಆಳಿವೆ. ಈ ಹಿಂದೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ್ದ ಸಮೃದ್ಧ ಕನ್ನಡ ನಾಡಿನಲ್ಲಿ ಕನ್ನಡವು ಸಾಮ್ರಾಜ್ಯ ಭಾಷೆಯಾಗಿತ್ತು. ಆದರೆ, 1799ರಲ್ಲಿ ಟಿಪ್ಪು ಸುಲ್ತಾನನ ಪತನದ ನಂತರ ಬ್ರಿಟಿಷರು, ಕನ್ನಡ ನಾಡನ್ನು 4 ಭಾಗಗಳನ್ನಾಗಿ ವಿಭಜಿಸಿದರು ಎಂದರು.

ನಿಜಾಮ ಮತ್ತು ಮರಾಠರ ನಡುವೆ ನಾಡು ಹಂಚಿದ್ದಲ್ಲದೇ ತಾವೇ ದೊಡ್ಡ ಪ್ರದೇಶವನ್ನು ಇಟ್ಟುಕೊಂಡು, ಸಣ್ಣ ಪ್ರದೇಶವನ್ನು ಮೈಸೂರು ಮಹಾರಾಜರಿಗೆ ಹಂಚುತ್ತಾರೆ. ಈ ರೀತಿ ಅಖಂಡವಾಗಿದ್ದ ನಮ್ಮ ಕನ್ನಡನಾಡು ಹರಿದುಹಂಚಿ ಹೋಯಿತು. ಇಂಥ ಕರ್ನಾಟವನ್ನು ಒಗ್ಗೂಡಿಸಲು ​ಹೋರಾಟ ಮತ್ತು ಜಾಗೃತಿ ಆರಂಭಿಸಲಾಯಿತು. ಆಲೂರು ವೆಂಕಟರಾಯರ ''''ಕರ್ನಾಟಕದ ಗತ ವೈಭವ''''ದಂತಹ ಕೃತಿಗಳು, ಕವಿತೆಗಳು ಮತ್ತು ಹೋರಾಟಗಳ ಫಲವಾಗಿ 1956 ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ಉದಯವಾಯಿತು ಎಂದು ತಿಳಿಸಿದರು.

ಅನಂತರ ಮೈಸೂರು ರಾಜ್ಯ ಎನ್ನುವ ಹೆಸರು ಸರಿಹೊಂದುತ್ತಿಲ್ಲ ಎನ್ನುವ ನಿಟ್ಟಿನಲ್ಲಿ ಭಾವನಾತ್ಮಕ ಹೋರಾಟಗಳು ನಡೆದು, ನಂತರ 1973 ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕಾಲದಲ್ಲಿ ''''ಮೈಸೂರು'''' ಎಂಬ ಹೆಸರನ್ನು ಬದಲಿಸಿ ''''ಕರ್ನಾಟಕ'''' ಎಂದು ಮರುನಾಮಕರಣ ಮಾಡಲಾಯಿತು ಎಂದು ಹೇಳಿದರು.

​ವಿಶ್ವದಲ್ಲೇ ಗತವೈಭವ ಪಡೆದಿರುವ ಅತ್ಯಂತ ಪ್ರಾಚೀನ ಮೊದಲ ಹತ್ತು ಭಾಷೆಗಳಲ್ಲಿ ಕನ್ನಡಕ್ಕೆ ಏಳನೇ ಸ್ಥಾನವಿದೆ. ಭಾರತದ ಪ್ರಾಚೀನ ಭಾಷೆಗಳಲ್ಲಿ ಸಂಸ್ಕೃತ ಮತ್ತು ತಮಿಳಿನ ನಂತರ ಕನ್ನಡಕ್ಕೆ ಮೂರನೇ ಸ್ಥಾನ ಕನ್ನಡಕ್ಕಿದೆ. ಕನ್ನಡಕ್ಕೆ ಸ್ವಂತ ಲಿಪಿ, ವಿಶಾಲ ವರ್ಣಮಾಲೆ ಮತ್ತು ಸ್ವಂತ ಅಂಕಿಗಳಿವೆ. ಜೊತೆಗೆ ಸಂಬಂಧಗಳನ್ನು ನಿಖರವಾಗಿ ಸೂಚಿಸುವ ಶ್ರೀಮಂತ ಪದಭಂಡಾರವಿದೆ. ಆ ರೀತಿ ​ಲಿಪಿ ಮತ್ತು ಪದಸಂಪತ್ತು ಹೊಂದಿರುವ ಕನ್ನಡ ಭಾಷೆ ನಮ್ಮದು.

ಇದಲ್ಲದೇ ಶಾಸ್ತ್ರೀಯ ಸ್ಥಾನಮಾನದ ಜತೆ ದೇಶದಲ್ಲೇ ಅತ್ಯಂತ ಹೆಚ್ಚು ​ಜ್ಞಾನಪೀಠ ಪ್ರಶಸ್ತಿಗಳನ್ನು ಹೊಂದಿದ ಭಾಷೆ ನಮ್ಮದಾಗಿದೆ. ಆದರೆ, ದೈನಂದಿನ ಮಾತುಗಳಲ್ಲಿ ಇಂಗ್ಲಿಷ್ ಪದಗಳ ಅತಿಯಾದ ಬಳಕೆ ಮತ್ತು ಕನ್ನಡದಲ್ಲಿ ಉದ್ಯೋಗ ಅವಕಾಶಗಳ ಕೊರತೆಯಿಂದಾಗಿ ಭಾಷೆಗೆ ಸವಾಲುಗಳು ಎದುರಾಗಿವೆ. ​ಭಾಷೆಯ ಬಳಕೆ ಮತ್ತು ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

​ಕನ್ನಡವನ್ನು ಕೇವಲ ಪುಸ್ತಕಕ್ಕೆ ಸೀಮಿತಗೊಳಿಸದೆ, ನಮ್ಮ ಎದೆಯ ಮೇಲೆ ಬರೆದುಕೊಳ್ಳಬೇಕು. ದೈನಂದಿನ ಬದುಕಿನಲ್ಲಿ ಬಳಸಬೇಕು ಮತ್ತು ಅನ್ಯಭಾಷಿಕರಿಗೂ ಕನ್ನಡ ಕಲಿಸುವ ಪ್ರಯತ್ನ ಮಾಡಬೇಕು. ಎಲ್ಲ ಜ್ಞಾನ ಕನ್ನಡದಲ್ಲಿ ಸಿಗುವಂತಾಗಬೇಕು. ಆ ಮೂಲಕ ನಮ್ಮ ಮುಂದಿನ ಹೆಜ್ಜೆ ಇಡಬೇಕಾಗಿದೆ ಎಂದು ತಿಳಿಸಿದರು.

ಎಚ್.ಕೆ.ಸತ್ಯಭಾಮ ಮಂಜುನಾಥ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ವನಿತಾ ಸಮಾಜದ ಅಧ್ಯಕ್ಷೆ ಪ್ರೇಮ ನಾಗರಾಜ್, ವೇದಿಕೆ ಕಾರ್ಯದರ್ಶಿ ಎ.ಬಿ.ರುದ್ರಮ್ಮ, ಸುಶೀಲಾ ದೇವಿ, ನಳಿನಾ ಅಚ್ಯುತ್, ಡಿ.ಜಿ.ಸುಭಾಷ್, ಪದ್ಮಾ ಪ್ರಕಾಶ್ ಇತರರು ಇದ್ದರು.

ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್.ಎಂ.ಎಲಿ, ದೊಡ್ಡ ದ್ಯಾಮಪ್ಪ ಗುರುಸಿದ್ದಪ್ಪ ಮತ್ತು ಶ್ರೀಮತಿ ನಾಗಮ್ಮ ಗುರುಸಿದ್ದಪ್ಪ ಮೆಳ್ಳೇಕಟ್ಟೆ ಅವರ ಸ್ಮರಣಾರ್ಥ ಡಿ.ಜಿ.ಸುಭಾಷ್ ಅವರಿಗೆ ಮತ್ತು ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಲೇಖಕಿ ಮತ್ತು ಸಂಪಾದಕಿ ಕಿರಣ್ ಪ್ರಸಾದ್ ರಾಜನಹಳ್ಳಿ ಅವರಿಗೆ ನೀಡಿ ಸನ್ಮಾನಿಸಲಾಯಿತು.

- - -

-24ಕೆಡಿವಿಜಿ31:

ದಾವಣಗೆರೆಯಲ್ಲಿ ವನಿತಾ ಸಾಹಿತ್ಯ ವೇದಿಕೆಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೇಖಕಿ ಕಿರಣ್ ಪ್ರಸಾದ್ ರಾಜನಹಳ್ಳಿ ಅವರಿಗೆ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಪಾನಿಂದಲೇ ಆಶಾ ಮನವೊಲಿಕೆಗೆ ಸಿಎಂ ಯತ್ನ
ವೈದ್ಯರ ಚೀಟಿ ಇಲ್ಲದೆ ಗರ್ಭಪಾತ ಮಾತ್ರೆಗಳ ಮಾರಾಟ: ಅಧಿಕಾರಿಗಳ ದಾಳಿ