ರಾಮನಗರ: ನಗರದ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಅಂಗವಾಗಿ ನಡೆದ ಅಗ್ನಿಕೊಂಡೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರ ಜಯಘೋಷಗಳ ನಡುವೆ ಕರಗಧಾರಕ ದೇವಿ ಪ್ರಸಾದ್ ಸಿಂಗ್ ಅವರು ಅಗ್ನಿಕೊಂಡ ಹಾಯ್ದರು.
ಕರಗ ಸಂಚರಿಸುವ ದಾರಿಗಳಲ್ಲಿ ಭಕ್ತರು ಹೂವಿನ ನೆಲ ಹಾಸನ್ನು ನಿರ್ಮಿಸಿ ಕರಗವನ್ನು ಬರಮಾಡಿಕೊಂಡರು. ಅಗ್ನಿಕೊಂಡದ ಬಳಿ ಪೋಲಿಸ್ ಭದ್ರತೆಯನ್ನು ಒದಗಿಸಲಾಗಿತ್ತು. ಅಗ್ನಿಕೊಂಡ ಪ್ರವೇಶದ ನಂತರ ಭಕ್ತರು ಕೊಂಡಕ್ಕೆ ಎಳ್ಳು ಮತ್ತು ಉಪ್ಪನ್ನು ಹಾಕುವ ಮೂಲಕ ಹರಕೆಯನ್ನು ತೀರಿಸಿಕೊಂಡರು.
ಉತ್ಸವ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದೇವಾಲಯದ ಆವರಣದಲ್ಲಿ ಸಿಡಿ ಉತ್ಸವ ನಡೆಯಿತು. ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.ಚಾಮುಂಡೇಶ್ವರಿ ಕರಗದ ಜತೆಗೆ, ಬಿಸಿಲುಮಾರಮ್ಮ, ಮಗ್ಗದಕೆರೆ ಮಾರಮ್ಮ, ಮುತ್ತುಮಾರಮ್ಮ, ಭಂಡಾರಮ್ಮ, ಕೊಂಕಾಣಿದೊಡ್ಡಿ, ಚಾಮುಂಡಿಪುರ, ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ, ಹುಲಿಯೂರಮ್ಮ ಅಮ್ಮನವರ ಹೂವಿನ ಕರಗ ಮಹೋತ್ಸವವೂ ವಿಜೃಂಭಣೆಯಿಂದ ನಡೆಯಿತು. ಒಟ್ಟಾರೆ ಭಕ್ತರ ಜಯಘೋಷಣೆಯ ನಡುವೆ ಕರಗ ಮಹೋತ್ಸವ ಸಂಪನ್ನಗೊಂಡಿತು.
ಕರಗ ಮಹೋತ್ಸವ ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ಇತರೆ ಕಡೆಯಿಂದ ಸಾಕಷ್ಟು ಜನತೆ ಆಗಮಿಸಿದರು. ಮಂಗಳವಾರ ಇಡೀ ರಾತ್ರಿ ದೇವಾಲಯಗಳು ತೆರೆದಿತ್ತು. ಇನ್ನು ಭಕ್ತಿಯಲ್ಲಿ ಮಿಂದಿದ್ದ ಜನತೆಗೆ ಆಗೊಮ್ಮೆ ಈಗೊಮ್ಮೆ ಸುರಿದ ಮಳೆಯು ಸಾಕಷ್ಟು ತೊಂದರೆಯ್ನನುಂಟು ಮಾಡಿತು. ಹಾಗಾಗಿ ಕರಗಗಳ ನಗರ ಸಂಚಾರಕ್ಕೆ ಕೆಲ ವೇಳೆ ಕಷ್ಟ ಉಂಟಾಯಿತು.
ರಾಮನಗರದ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರ ಜಯಘೋಷಗಳ ನಡುವೆ ಕರಗಧಾರಕ ದೇವಿ ಪ್ರಸಾದ್ ಸಿಂಗ್ ಅಗ್ನಿಕೊಂಡ ಹಾಯ್ದರು.