ಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಉಳುವವನೇ ಭೂ ಒಡೆಯ ಕಾನೂನು ಜಾರಿಗೆ ತರಲು ಪ್ರಧಾನಿ ಜವಾಹರಲಾಲ್ ನೆಹರು ಅವರಿಗೂ ಭಯವಿತ್ತು. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಯಾವುದೇ ಮುಲಾಜಿಲ್ಲದೇ ಕಾನೂನು ಸಾಕಾರಗೊಳಿಸಿ ರಾಜ್ಯದ ಭೂಒಡೆಯರಿಂದ ಭೂಮಿ ಕಸಿದು ಭೂಹೀನರಿಗೆ ಭೂಮಿ ಹಂಚುವ ಮೂಲಕ ದೇವರಾಜ ಅರಸು ಜನತೆಗೆ ದೇವರಾಗಿ ಕಂಡರು ಎಂದು ಉಪನ್ಯಾಸಕ ಗೋವಿಂದರಾಜ್ ಬಾರಿಕೇರ ತಿಳಿಸಿದರು.ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ ಡಿ.ದೇವರಾಜ ಅರಸು ಅವರ ೧೧೦ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಕಾಗದದಲ್ಲಿ ತಂದ ಕಾನೂನುಗಳನ್ನು ದಿಟ್ಟತನದಿಂದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕಾರ್ಯಗತಗೊಳಿಸಿದ್ದಾರೆ. ಅವರ ಅಧಿಕಾರವಧಿಯಲ್ಲಿ ನಿಕೃಷ್ಟ, ದಮನಿತ, ಅಲೆಮಾರಿ ಸಮುದಾಯಗಳಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ರಾಜಕೀಯ ಸ್ಥಾನಮಾನ ನೀಡುವುದಲ್ಲದೇ ಬಡಮಕ್ಕಳಿಗೆ ಹಾಸ್ಟೆಲ್ ಪ್ರಾರಂಭಿಸುವ ಮೂಲಕ ಇಡೀ ರಾಜ್ಯಕ್ಕೆ ಆದರ್ಶ ಮುಖ್ಯಮಂತ್ರಿಯಾಗಿದ್ದಾರೆ ಎಂದರು.ಬೇನಾಮಿ ಆಸ್ತಿ ಗಳಿಸಿದ್ದ ಜಮೀನ್ದಾರರು ಅರಸು ಅವರ ಮೇಲೆ ಕತ್ತಿ ಮಸೆಯುತ್ತಿದ್ದರೂ ಉಳ್ಳವರನ್ನು ಎದುರು ಹಾಕಿಕೊಂಡು ಉಳುವವನೇ ಭೂಒಡೆಯ ಕಾನೂನು ತಂದು ಕತ್ತಲೆಯ ಗುಡಿಸಲಲ್ಲಿರುವವರಿಗೆ ಬೆಳಕು ತಂದರು ಎಂದರು.ಕೂಡ್ಲಿಗಿ ತಹಸೀಲ್ದಾರ್ ವಿ.ಕೆ. ನೇತ್ರಾವತಿ ಕಾರ್ಯಕ್ರಮ ಉದ್ಘಾಟಿಸಿದರು. ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಶ್ಯಾಮಪ್ಪ ಪ್ರಾಸ್ತಾವಿಕ ಮಾತನಾಡಿದರು. ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ತಾಪಂ ಇಒ ಕೆ.ನರಸಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಾಪುರ ವೆಂಕಟೇಶ್, ಸಿಡಿಪಿಒ ಮಾಲಂಬೀ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಹಮ್ಮದ್ ಜಿಲಾನ್, ಮಧ್ಯಾಹ್ನ ಉಪಾಹಾರ ಯೋಜನೆ ಸಹಾಯಕ ನಿರ್ದೇಶಕ ಕೆ.ಜಿ. ಆಂಜನೇಯ, ಒನಕೆ ಓಬವ್ವ ಸಂಘದ ರಾಜ್ಯಾಧ್ಯಕ್ಷ ಟಿ.ಉಮೇಶ್, ನಿವೃತ್ತ ನೌಕರರ ಸಂಘದ ಪಿ.ಶಿವರಾಜ್, ಹಿಂದುಳಿದ ಮುಖಂಡರಾದ ಚಿರಿಬಿ ಅಂಜಿನಪ್ಪ, ಜಿ.ಪಿ. ಗುರುಲಿಂಗಪ್ಪ, ದೊಡ್ಡಪ್ಪ, ಡಿ.ಬಿ. ಚಿತ್ತಪ್ಪ, ಸಾಸಲವಾಡ ಶಿವಣ್ಣ, ಸೂಲದಹಳ್ಳಿ ಗಂಗಪ್ಪ, ಸೇರಿ ತಾಲೂಕಿನ ಬಿಸಿಎಂ ವಸತಿ ನಿಲಯಗಳ ಮೇಲ್ವಿಚಾರಕರು ಇದ್ದರು. ನಾನಾ ಕ್ಷೇತ್ರದ ಸಾಧಕರು, ಬಿಸಿಎಂ ಇಲಾಖೆ ನಿವೃತ್ತ ನೌಕರರು ಹಾಗೂ ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ರಾಷ್ಟ್ರೀಯ ಸ್ಮಾರಕದಿಂದ ಅಂಬೇಡ್ಕರ್ ಭವನದವರೆಗೆ ಡಿ.ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಕೆ.ಎಂ. ವೀರೇಶ್ ನಿರೂಪಿಸಿದರು.