ಭವ್ಯ ಭಾರತ ನಿರ್ಮಾಣದಲ್ಲಿ ಕಾರ್ಮಿಕರ ಶ್ರಮ ಅಪಾರ: ನ್ಯಾ. ಕೇಶವಮೂರ್ತಿ

KannadaprabhaNewsNetwork |  
Published : May 02, 2024, 12:18 AM IST
1ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕಾರ್ಮಿಕರ ದಿನಾಚರಣೆಯನ್ನು ನ್ಯಾಃಕೇಶವಮೂರ್ತಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾರ್ಮಿಕರಿಲ್ಲದೆ ದೇಶವನ್ನು ಊಹಿಸಲು ಸಾಧ್ಯವೇ ಇಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಮಿಕರು ಕಷ್ಟಪಟ್ಟು ದುಡಿಯುವುದರಿಂದ ಪ್ರತಿಯೊಂದು ದೇಶ,ರಾಜ್ಯಗಳು ಪ್ರಗತಿ ಕಾಣುತ್ತಿವೆ. ಕಾರ್ಮಿಕರ ಶ್ರಮ, ತ್ಯಾಗದ ಮೇಲೆಯೇ ದೇಶದ ಅಭಿವೃದ್ಧಿ ಅಡಗಿದೆ. ಕಾರ್ಮಿಕರು ಒಗ್ಗಟ್ಟಾಗಿ ಸಂಘಟಿತರಾದರೆ ಮಾತ್ರ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಭವ್ಯ ಭಾರತ ನಿರ್ಮಾಣದಲ್ಲಿ ಕಾರ್ಮಿಕರ ಶ್ರಮ ಅಪಾರವಾಗಿದ್ದು, ಕಾರ್ಮಿಕರಿಗೆ ಕಾನೂನಿನ ಬಗ್ಗೆ ಅರಿವಿದ್ದರೆ ಅವರ ಜೀವನ ಸಹ ಸುಖಮಯವಾಗಿರುತ್ತದೆ ಎಂದು ಇಲ್ಲಿನ ಸಿವಿಲ್ ನ್ಯಾಯಾಲಯದ ನ್ಯಾ.ಕೇಶವಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ರೀಚ್ ಸಂಸ್ಥೆ ಮತ್ತು ಫೋಕಸ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಲತಲಾಂತರಗಳಿಂದ ಕಾರ್ಮಿಕರು ಹಾಗೂ ಅವರ ಕುಟುಂಬಗಳು ಕಾರ್ಮಿಕರಾಗೇ ಉಳಿದಿದ್ದಾರೆ, ಅವರು ಯಾವುದೇ ರೀತಿಯಲ್ಲಿ ಅಭಿವೃದ್ಧಿ ಹೊಂದಿಲ್ಲ, ಇದಕ್ಕೆ ಕಾರಣ ಅವರಿಗೆ ಕಾನೂನಿನ ಬಗ್ಗೆ ಅರಿವಿನ ಕೊರತೆಯಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಲು ಅಡ್ಡಿಯಾಗಿದೆ ಎಂದರು.

ಕಾರ್ಮಿಕರಿಲ್ಲದೆ ದೇಶವನ್ನು ಊಹಿಸಲು ಸಾಧ್ಯವೇ ಇಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಮಿಕರು ಕಷ್ಟಪಟ್ಟು ದುಡಿಯುವುದರಿಂದ ಪ್ರತಿಯೊಂದು ದೇಶ,ರಾಜ್ಯಗಳು ಪ್ರಗತಿ ಕಾಣುತ್ತಿವೆ. ಕಾರ್ಮಿಕರ ಶ್ರಮ, ತ್ಯಾಗದ ಮೇಲೆಯೇ ದೇಶದ ಅಭಿವೃದ್ಧಿ ಅಡಗಿದೆ. ಕಾರ್ಮಿಕರು ಒಗ್ಗಟ್ಟಾಗಿ ಸಂಘಟಿತರಾದರೆ ಮಾತ್ರ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯ, ಇಲ್ಲದಿದ್ದರೆ ಸವಲತ್ತುಗಳು ಮಾಲೀಕರ ಪಾಲಾಗುತ್ತವೆ. ಸರ್ಕಾರ ಸಹ ಶ್ರಮಿಕರ ವರ್ಗದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆ, ಇವುಗಳನ್ನು ಪಡೆಯಬೇಕಾದರೆ ಮೊದಲು ನೀವು ಸಂಘಟಿತರಾಗಿ ಹೋರಾಟ ನಡೆಸಬೇಕು, ಯಾವುದೇ ಕಂಪನಿ, ಸಂಸ್ಥೆ, ಕಾರ್ಖಾನೆಗಳ ಏಳಿಗೆಗಾಗಿ ಕಾರ್ಮಿಕರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ ಎಂದರು.

ಈ ಹಿಂದೆ ಶ್ರೀಮಂತರು ಕಾರ್ಮಿಕರನ್ನು ಜೀತ ಪದ್ಧತಿಗೆ ಇಟ್ಟುಕೊಳ್ಳುತ್ತಿದ್ದರು, ಅವರಿಗೆ ನ್ಯಾಯಯುತವಾಗಿ ವೇತನ ನೀಡುತ್ತಿರಲಿಲ್ಲ. ಈಗ ಕಾನೂನು ಬದಲಾಗಿದೆ, ಜೀತಪದ್ಧತಿಗೆ ತಿಲಾಂಜಲಿ ಹಾಕಲಾಗಿದೆ. ಆದ್ದರಿಂದ ಶ್ರಮಿಕರು ಕಾನೂನು ಬಗ್ಗೆ ಅರಿತುಕೊಂಡು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ಪ್ರತಿಯೊಬ್ಬ ಉದ್ಯಮಿಯ ಏಳಿಗೆಯ ಹಿಂದೆ ಸಾವಿರಾರು ಉದ್ಯೋಗಿಗಳ,ಕಾರ್ಮಿಕರ ಶ್ರಮವಿರುತ್ತದೆ, ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಕೆಲಸಗಳಾಗಬೇಕು. ಕಾರ್ಮಿಕರೇ ದೇಶದ ನಿಜವಾದ ಶಿಲ್ಪಿಗಳು ಎಂದು ಬಣ್ಣಿಸಿದರು.

ಫೋಕಸ್ ಸಂಸ್ಥೆಯ ನಿರ್ದೇಶಕ ಅ.ನಾ.ಹರೀಶ್,ರೀಚ್ ಸಂಸ್ಥೆಯ ಶೈಲಜ,ವಕೀಲೆ ಗೀತಾ, ಪಿಎಸ್‌ಐ ಭಾಗ್ಯಲಕ್ಷ್ಮಿ ,ಪ್ರಭಾವತಿ,ಮತ್ತಿತರರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ