-ಡಿಪಿಆರ್ ಆಗಿದ್ದು, ಇನ್ನೂ ಹತ್ತಾರು ಹೆಜ್ಜೆ ದಾಟಿ ಕೆರೆಗೆ ನೀರು ಬರಬೇಕಿದೆ
-ಗದಗ ಜಿಲ್ಲೆಯ ತಾಲೂಕುಗಳ ಬೆರಳಣಿಕೆ ಜಮೀನಿಗೆ ನೀರು
ಎಸ್.ಎಂ. ಸೈಯದ್ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಕೃಷ್ಣ ಜಲ ವಿವಾದ ನ್ಯಾಯ ಮಂಡಳಿ-೨ ತನ್ನ ಅಂತಿಮ ತೀರ್ಪನ್ನು ನ.೨೯, ೨೦೧೩ರಲ್ಲಿ ಪ್ರಕಟಿಸಿತ್ತು. ಪರಿಣಾಮ ಕೃಷ್ಣಾ ಬೀ ಸ್ಕಿಂ ಮೂಲಕ ೨೦೧೩-೧೪ರಲ್ಲಿ ಕೊಪ್ಪಳ ಏತ ನೀರಾವರಿ ಅಡಿ ಅಂದಾಜು ೧೩ ಲಕ್ಷಕ್ಕೂ ಹೆಚ್ಚು ಎಕರೆ ಒಣ ಮತ್ತು ಬರಪೀಡಿತ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದ ಯೋಜನೆ ೨೦೧೩-೧೪ರಿಂದ ವೇಗ ಪಡೆದುಕೊಂಡಿತು. ಆದರೆ ನೀರಿನ ಮೂಲಗಳಿಲ್ಲದ ಗಜೇಂದ್ರಗಡ ಹಾಗೂ ರೋಣ ತಾಲೂಕಿಗೆ ಸಿಗಬೇಕಾದ ಪ್ರಾತಿನಿಧ್ಯ ಯೋಜನೆಯಲ್ಲಿ ಸಿಗಲಿಲ್ಲ ಎಂಬ ಚರ್ಚೆಗಳು ಈಗ ಮುನ್ನೆಲೆಗೆ ಬರುತ್ತಿವೆ. ಯೋಜನೆ ಅಡಿ ಉಳಿದ ಜಿಲ್ಲೆಗಳಿಗೆ ಅಧಿಕ ಆಧ್ಯತೆ ಸಿಕ್ಕರೆ ಗದಗ ಜಿಲ್ಲೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸಿಕ್ಕಿಲ್ಲ ಎಂಬ ಆರೋಪಕ್ಕೆ ಅಂಕಿ, ಅಂಶಗಳು ಹೌದು ಎನ್ನುವ ಸಬೂಬು ನೀಡುತ್ತಿವೆ.
ತಾಲೂಕಿನ ೧೯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಈಗಾಗಲೇ ಡಿಪಿಆರ್ ಆಗಿದೆ. ಮುಂದೆ ಪ್ರೋಸಿಡಿಂಗ್ ಆಗಬೇಕು, ಸರ್ಕಾರ ಆರ್ಡರ್ ಮಾಡಬೇಕು ಬಳಿಕ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಪಡೆದು, ಎಫ್‌ಡಿಗೆ (ಫೈನಾಶಿಯಲ್ ಡಿರ್ಪಾಟಮೆಂಟ್) ಎಸ್ಟಿಮೇಟ್ ಆಗಬೇಕು, ಎಆರ್‌ಸಿಯಲ್ಲಿ ಪ್ರಸೆಂಟ್ ಮಾಡಬೇಕು, ಟೆಂಡರ್ ಕರೆಯಬೇಕು, ತಾಂತ್ರಿಕ ಬಿಡ್ ಮತ್ತು ಫೈನಾನ್ಶಿಯಲ್ ಬಿಡ್ ಆಗಬೇಕು, ನಿಗಮಕ್ಕೆ ಕಳುಹಿಸಿ, ಅಪ್ರೋವ್ ಆದ ಮೇಲೆ ಗುತ್ತಿಗೆದಾರರು ಯಾರು ಎಂದು ಅಂತಿಮ ಅಗ್ರಿಮೆಂಟ್ ಆದ ಬಳಿಕ ಕೆಲಸ ಆರಂಭಿಸಬೇಕಿದೆ. ಒಂದೆರೆಡು ವರ್ಷದೊಳಗೆ ನೀರು ತುಂಬಿಸುವುದು ಅಸಾಧ್ಯ ಎಂಬುದು ಹೋರಾಟಗಾರರ ಅಭಿಪ್ರಾಯವಾದರೆ, ರಾಜ್ಯದಲ್ಲಿ ಸುಭದ್ರ ಸರ್ಕಾರವಿದ್ದು ತ್ವರಿತಗತಿಯಲ್ಲಿ ಯೋಜನೆ ಜಾರಿಯಾಗಿ ಕೆರೆ ತುಂಬಿಸುತ್ತೇವೆ ಎಂಬುದು ಆಡಳಿತದ ವಾದವಾಗಿದೆ.ನೆರೆಯ ಜಿಲ್ಲೆಗಳಲ್ಲಿ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿ ಭಾಗಶಃ ಪೂರ್ಣವಾಗಿದೆ. ಆದರೆ ತಾಲೂಕಿಗೆ ಆದ ಅನ್ಯಾಯ ಸರಿಪಡಿಸಲು ಪಕ್ಷಾತೀತವಾಗಿ ಸಾರ್ವಜನಿಕರು ಒತ್ತಡ ಹೇರಿದರೆ ಮಾತ್ರ ಒಂದೆರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ಕೆರೆಗಳಿಗೆ ನೀರು ಬರಬಹುದು. ನಿರ್ಲಕ್ಷ್ಯ ಮಾಡಿದರೆ ಈ ಯೋಜನೆ ಸಹ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳು ಹೆಚ್ಚಿವೆ.
ಶಿವರಾಜ ಘೋರ್ಪಡೆ, ಕಾಂಗ್ರೆಸ್ ಮುಖಂಡರು