ಜಿ. ದೇವರಾಜ್ ನಾಯ್ಡು
ಪರವಾನಗಿ ಭೂಮಾಪಕರು ಕಳೆದ 45 ದಿನಗಳಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ , ಮುಷ್ಕರ ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ 6000ಕ್ಕೂ ಅಧಿಕ ಕಡತಗಳು ಬಾಕಿ ಉಳಿದಿದ್ದು, ರೈತರು, ನಾಗರಿಕರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವಂಥ ದುಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಪರವಾನಗಿ ಭೂಮಾಪಕರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಕಳೆದ 45 ದಿನಗಳಿಂದ ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ರೈತರ ಕೆಲಸ ಕಾರ್ಯಗಳಿಗೆ ಅಡಚಣೆಯುಂಟಾದ ಸ್ಥಿತಿ ನಿರ್ಮಾಣವಾಗಿದ್ದು, ಇತ್ತ ಸರ್ಕಾರ ಗಮನ ಹರಿಸಿ ಲೈಸೆನ್ಸ್ ಭೂ ಮಾಪಕರ ಬೇಡಿಕೆಗಳನ್ನು ಈಡೇರಿಸುವಂತೆ ರೈತಾಪಿ ವರ್ಗದವರು ಒತ್ತಾಯಿಸಿದ್ದಾರೆ.ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿಯೇ 3,299 ಕಡತಗಳು ಬಾಕಿ ಉಳಿದಿದ್ದು, ಗುಂಡ್ಲುಪೇಟೆ 1,152, ಯಳಂದೂರು 331, ಕೊಳ್ಳೇಗಾಲ 707, ಹನೂರು 854 ಸೇರಿ ಐದು ತಾಲೂಕಿನಿಂದ 6,343 ಕಡತಗಳು ವಿಲೇವಾರಿಯಾಗದೆ ರೈತರು, ನಾಗರಿಕರು ಪರದಾಡುತ್ತಿದ್ದಾರೆ.
ಹಾಗೂ ಪೋಡಿ ಅಳತೆ ಸೇರಿದಂತೆ ತತ್ಕಾಲ್ ಪೋಡಿ, ದರ್ಖಾಸ್ ಪೋಡಿ, ಅಲಿಗೇಷನ್ ಪೋಡಿ, ಮುಟೇಷನ್ ಪೋಡಿ, ನಿವೇಶನಗಳ ಅಳತೆ ಹಾಗೂ 11 ಇ ಸ್ಕೆಚ್ ಕಡತಗಳು ಸೇರಿ ನಾಗರಿಕರು , ರೈತರು ಭೂಮಾಪನ ಇಲಾಖೆಗೆ ಅಳತೆ ಮಾಡಿಕೊಡುವಂತೆ ಮತ್ತು ನಕಾಶೆ ನೀಡುವಂತೆ ಕೋರಿ ಕಳೆದ 45 ದಿನಗಳಿಂದ ಜಮೀನು ಅಳತೆಗೆ ಹಣ ಕಟ್ಟಿ , ಕಚೇರಿಗೆ ಅಲೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ರೈತರು, ನಾಗರಿಕರು ಒತ್ತಾಯಿಸಿದ್ದಾರೆ.
ರೈತ.
ಭೂಮಾಪನ ಇಲಾಖೆಗೆ ಸಂಬಂಧಿಸಿದ ಕಡತಗಳು ಪರವಾನಗಿ ಭೂಮಾಪಕರ ಮುಷ್ಕರದಿಂದ ಬಾಕಿ ಉಳಿದಿದ್ದು, ಈ ಭಾಗದ ರೈತರು ಮತ್ತು ಜಮೀನು ಅಳತೆ ಮಾಡಲು ಸರ್ವೇ ಇಲಾಖೆಗೆ ಹಣ ಪಾವತಿಸಿರುವ ಬಗ್ಗೆ ಸಂಬಂಧಪಟ್ಟ ಭೂಮಾಪಕರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.
-----
ನಟರಾಜ್, ಎಡಿಎಲ್‌ಆರ್,
---
ಹನೂರು ತಾಲೂಕು ಪ್ರತ್ಯೇಕವಾಗಿ ಹಲವಾರು ವರ್ಷಗಳು ಕಳೆದರೂ ರೈತರು ವಿವಿಧ ಕೆಲಸ ಕಾರ್ಯಗಳಿಗೆ ಭೂಮಾಪನ ಇಲಾಖೆಗೆ ಕೊಳ್ಳೇಗಾಲಕ್ಕೆ ಹೋಗಬೇಕಾಗಿರುವುದರಿಂದ ತಾಲೂಕಿನಲ್ಲಿಯೇ ಭೂಮಾಪನ ಕಚೇರಿ ತೆರೆದು ರೈತರಿಗೆ ಸಕಾಲದಲ್ಲಿ ಕೆಲಸ ಕಾರ್ಯಗಳು ತ್ವರಿತವಾಗಿ ಕಾರ್ಯನಿರ್ವಹಿಸಲು ಸರ್ಕಾರ ಇತ್ತ ಗಮನ ಹರಿಸಬೇಕು, ಜಿಲ್ಲಾಡಳಿತ ಸಹ ಲೈಸೆನ್ಸ್ ಭೂಮಾಪಕರ ಮುಷ್ಕರದಿಂದ ಜಿಲ್ಲೆಯಲ್ಲಿ ರೈತರಿಗೆ ಮತ್ತು ನಾಗರಿಕರಿಗೆ ಸಮಸ್ಯೆ ಉಂಟಾಗಿದೆ. ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು .ಹೊನ್ನೂರ್ ಪ್ರಕಾಶ್,
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರು.