ನೀರಿಲ್ಲದೆ ಬರಿದಾಗಿರುವ ದೊಡ್ಡಕೆರೆ ಕೆಲವರಿಂದ ಒತ್ತುವರಿ

KannadaprabhaNewsNetwork |  
Published : Aug 03, 2026, 01:30 AM IST
2ಕೆಎಂಎನ್ ಡಿ17 | Kannada Prabha

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದ ದೊಡ್ಡಕೆರೆಯನ್ನು ಸುತ್ತಮುತ್ತಲಿನ ಗ್ರಾಮಗಳ ಕೆಲವು ವ್ಯಕ್ತಿಗಳು ಒತ್ತುವರಿ ಮಾಡುತ್ತಿದ್ದಾರೆ. ಕೆರೆ ಒತ್ತುವರಿಯನ್ನು ತಕ್ಷಣವೇ ತೆರವುಗೊಳಿಸಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಆಗ್ರಹ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ವಳಗೆರೆಮೆಣಸ ಗ್ರಾಮದ ದೊಡ್ಡಕೆರೆಯನ್ನು ಸುತ್ತಮುತ್ತಲಿನ ಗ್ರಾಮಗಳ ಕೆಲವು ವ್ಯಕ್ತಿಗಳು ಒತ್ತುವರಿ ಮಾಡುತ್ತಿದ್ದಾರೆ. ಕೆರೆ ಒತ್ತುವರಿಯನ್ನು ತಕ್ಷಣವೇ ತೆರವುಗೊಳಿಸಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಆಗ್ರಹಿಸಿದ್ದಾರೆ.300 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ದಕ್ಷಿಣಕ್ಕೆ ಅಚ್ಚುಕಟ್ಟು ಪ್ರದೇಶವಿದ್ದು, ಪೂರ್ವ, ಪಶ್ಚಿಮ, ಉತ್ತರ ದಿಕ್ಕಿನಲ್ಲಿ ಹಲವಾರು ರೈತರಿಂದ ಒತ್ತುವರಿಯಾಗಿದೆ. ಮಳೆ ಇಲ್ಲದೇ, ನೀರಿಲ್ಲದ ಕಾರಣ ಕೆರೆ ಒಡಲನ್ನು ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ಬಗೆದು ಕೃಷಿ ಜಮೀನಾಗಿ ಪರಿವರ್ತಿಸುತ್ತಿದ್ದಾರೆ. ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸುವ ಬಗ್ಗೆ ಕ್ರಮವಹಿಸಿಲ್ಲ.

ವಳಗೆರೆಮೆಣಸ ಕೆರೆಯಿಂದ ಬೊಮ್ಮನಾಯಕನಹಳ್ಳಿ, ಅಗ್ರಹಾರ ಬಾಚಹಳ್ಳಿ, ಚಿಲ್ಲದಹಳ್ಳಿ, ಬಿ.ಕೋಡಿಹಳ್ಳಿ, ವಳಗೆರೆಮೆಣಸ ಗ್ರಾಮಗಳ ಸಾವಿರಾರು ಹೆಕ್ಟೇರ್ ಭೂಮಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತೂಬಿನ ನಾಲೆಗಳಲ್ಲಿ ಹೂಳು ಮತ್ತು ಗಿಡಗಂಟಿಗಳು ತುಂಬಿಕೊಂಡಿವೆ. ಇದರಿಂದ ನೀರು ಕಡೆ ಭಾಗದ ರೈತರಿಗೆ ತಲುಪುತ್ತಿಲ್ಲ.

ಕೆರೆ ಸುತ್ತಲ ಪ್ರದೇಶದಲ್ಲಿ ಜಮೀನು ಹೊಂದಿರುವ ಹಲವು ರೈತರು ಜೆಸಿಬಿ ಮತ್ತು ಹಿಟಾಚಿ ಮೂಲಕ ಕೆರೆಯ ಮಧ್ಯ ಭಾಗಕ್ಕೆ ಮಣ್ಣು ಸುರಿದು ಒತ್ತುವರಿ ಮಾಡಿಕೊಂಡಿದ್ದಾರೆ. ಅದೂ ಅಲ್ಲದೇ, ಕೆರೆಗೆ ನೂರಾರು ಪಂಪ್‌ಸೆಟ್ ಅಳವಡಿಸಿಕೊಂಡು ನೀರನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಚ್ಚಕಟ್ಟುದಾರರಿಗೆ ನೀರಿಲ್ಲದಂತಾಗಿದೆ.

ಕೂಡಲೇ ಸಂಬಂಧಪಟ್ಟ ನೀರಾವರಿ ಅಧಿಕಾರಿಗಳು ತಕ್ಷಣ ಒತ್ತುವರಿ ಮಾಡುತ್ತಿರುವ ರೈತರು ಮತ್ತು ಜೆಸಿಬಿ, ಹಿಟಾಚಿ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕೆರೆಯನ್ನು ಸಂಪೂರ್ಣ ಸರ್ವೇ ಮಾಡಿ ಒತ್ತುವರಿ ಬಿಡಿಸಿ ಕೆರೆಯನ್ನು ಉಳಿಸಿಕೊಡಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಎದುರು ಅಚ್ಚುಕಟ್ಟು ರೈತರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ವೇಳೆ ವಳಗೆರೆಮೆಣಸ ಗ್ರಾಮದ ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ, ಮಾಜಿ ಸದಸ್ಯ ಸಿ.ಆರ್.ಪಿ.ಕುಮಾರ್, ಅಚ್ಚುಕಟ್ಟು ರೈತರಾದ ನವೀನ್ ಕುಮಾರ್, ಸೋಮೇಗೌಡ, ಮೊಗಣೇಗೌಡ, ಗಿರೀಶ್, ರಾಮೇಗೌಡ, ಕುಮಾರ್, ಪ್ರಕಾಶ್, ರಂಜಿತ್, ಕಿರಣ್, ಮೋಹನ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ, ಮರಗಳ ಮಾರಣ ಹೋಮ
ವೀಡಿಯೋ ಕಾನ್ಫರೆನ್ಸ್ ಮೂಲಕ ನಶ ಮುಕ್ತ ಯುವ ಚಳವಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ