ಶಿವಾಜಿ ಮಹಾರಾಜರ ಜೀವನ ಚರಿತ್ರೆ ಮಕ್ಕಳಿಗೆ ತಿಳಿಸಬೇಕು

KannadaprabhaNewsNetwork | Published : Feb 21, 2024 2:08 AM

ಸಾರಾಂಶ

ಹಿಂದೂ ಸಮಾಜವನ್ನು ಸದೃಢಗೊಳಿಸುವ ದಿಸೆಯಲ್ಲಿ ಹಿಂದೂ ಸಾಮ್ರಾಟ್ ಛತ್ರವತಿ ಶಿವಾಜಿ ಮಹಾರಾಜರ ಸಾಹಸಮಯ ಜೀವನ ಚರಿತ್ರೆ ಮುಂದಿನ ಪೀಳಿಗೆಗೆ ತಿಳಿಸಿಹೇಳಬೇಕಾದ ಅಗತ್ಯತೆ ಹೆಚ್ಚಿದೆ. ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ರಾಜ್ಯಕ್ಕೆ ಸೀಮಿತವಾಗದೇ, ಸಮಸ್ತ ಹಿಂದೂಗಳ ಅಸ್ಮಿತೆಗಾಗಿ ಹೋರಾಡಿದ ಮಹಾನ್ ದೇಶಭಕ್ತ, ಧರ್ಮಭಕ್ತ ಎಂದು ಖ್ಯಾತ ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಶಿಕಾರಿಪುರ ಹಾಗೂ ಆನವಟ್ಟಿ ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಹಿಂದೂ ಸಮಾಜವನ್ನು ಸದೃಢಗೊಳಿಸುವ ದಿಸೆಯಲ್ಲಿ ಹಿಂದೂ ಸಾಮ್ರಾಟ್ ಛತ್ರವತಿ ಶಿವಾಜಿ ಮಹಾರಾಜರ ಸಾಹಸಮಯ ಜೀವನ ಚರಿತ್ರೆ ಮುಂದಿನ ಪೀಳಿಗೆಗೆ ತಿಳಿಸಿಹೇಳಬೇಕಾದ ಅಗತ್ಯತೆ ಹೆಚ್ಚಿದೆ ಎಂದು ಖ್ಯಾತ ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ಹಳೇ ಸಂತೆ ಮೈದಾನ ಸಮೀಪದ ಶಿವಗಿರಿಸ್ವಾಮಿ ಮಠ ಆವರಣದಲ್ಲಿ ಸೋಮವಾರ ಸಂಜೆ ತಾಲೂಕು ಮರಾಠ ಸಮಾಜ ವತಿಯಿಂದ ನಡೆದ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು.

ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ರಾಜ್ಯಕ್ಕೆ ಸೀಮಿತವಾಗದೇ, ಸಮಸ್ತ ಹಿಂದೂಗಳ ಅಸ್ಮಿತೆಗಾಗಿ ಹೋರಾಡಿದ ಮಹಾನ್ ದೇಶಭಕ್ತ, ಧರ್ಮಭಕ್ತ. ಶಿವಾಜಿ ಮಹಾರಾಜರು ಸಕಲ ಸಮಾಜಗಳ ಸಮಸ್ತ ಹಿಂದೂಗಳನ್ನು ಒಗ್ಗೂಡಿಸಿ, ಅಖಂಡ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡಿದ್ದರು. ದೇಶದ ಎಲ್ಲ ದಿಕ್ಕುಗಳಲ್ಲಿ ಸದೃಢವಾದ ನೌಕಾ ಸೇನೆ ಕಟ್ಟಿ ಮೊಘಲರನ್ನು ಸದೆಬಡೆಯಲು, ಕೈಗೊಂಡ ಗೆರಿಲ್ಲಾ ಯುದ್ಧ ಇತಿಹಾಸದ ಪುಟದಲ್ಲಿ ಶಾಶ್ವತವಾಗಿದೆ ಎಂದು ತಿಳಿಸಿದರು.

ಇಂಥ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ರಾಜ್ಯ ಸರ್ಕಾರ ಪಠ್ಯ ಪುಸ್ತಕದಿಂದ ತೆಗೆದುಹಾಕಿರುವುದು ಬಹು ದೊಡ್ಡ ದುರಂತ. ಇದೀಗ ರಾಜ್ಯದ ವಸತಿ ಶಾಲೆ ಕಾಲೇಜುಗಳಲ್ಲಿ ನಾಡಿನ ಶ್ರೇಷ್ಠಕವಿ, ಸಾಹಿತಿ ಕುವೆಂಪು ಅವರ "ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ " ಎಂಬ ಘೋಷವಾಕ್ಯವನ್ನು ತೆಗೆದು ಹಾಕುವ ಮನಸ್ಥಿತಿ ತಲುಪಿದ್ದೇವೆ. ಧೈರ್ಯವಾಗಿ ಪ್ರಶ್ನಿಸು ಎಂಬುದು ಹಿಂದೂ ಸಂಸ್ಕೃತಿಯಾಗಿದೆ. ಶ್ರೀರಾಮ ಮಂದಿರ ಲೋಕಾರ್ಪಣೆಯಂದು ಕರಸೇವಕರನ್ನು ಬಂಧಿಸುವುದು, ದೇಶವನ್ನು ವಿಭಜಿಸುವ ಹೇಳಿಕೆ ನೀಡುವವರು ನಮ್ಮ ಮಧ್ಯದಲ್ಲಿ ಇರುವುದು ವಿಪರ್ಯಾಸ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಶಿವಾಜಿ ಮಹಾರಾಜರ ಕನಸಿನ ಭಾರತ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಚಕ್ರವರ್ತಿ ಸೂಲಿಬೆಲೆ ಅವರನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ತುಳುಜಾ ಭವಾನಿ ದೇವಸ್ಥಾನ ಉತ್ಸವ ಸಮಿತಿ ಹಾಗೂ ತಾಲೂಕು ಮರಾಠ ಸಮಾಜ ಅಧ್ಯಕ್ಷ ಗುರುರಾಜ ಜಗತಾಪ್ ಅಧ್ಯಕ್ಷತೆ ವಹಿಸಿದ್ದರು.

ಮುಖಂಡ ಜಯಂತ ರಾವ್ ಪಾಟ್ವಾಳ್, ದಿವಾಕರ್, ವಿಹಿಂಪ ಉಪಾಧ್ಯಕ್ಷ ಪ್ರಕಾಶ್ ಜಿನ್ನು, ಎಸ್.ವಿ.ಕೆ. ಮೂರ್ತಿ, ಅಂಗಡಿ ರಾಮಣ್ಣ, ಪ್ರವೀಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

- - - -20ಕೆಎಸ್.ಕೆಪಿ2:

ಶಿಕಾರಿಪುರದ ಶಿವಗಿರಿಸ್ವಾಮಿ ಮಠ ಆವರಣದಲ್ಲಿ ಸೋಮವಾರ ಶಿವಾಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅವರನ್ನು ಸನ್ಮಾನಿಸಲಾಯಿತು.

Share this article