ಆಧ್ಯಾತ್ಮಿಕ ಸಾಧಕನ ಬದುಕು ಸಮಾಜಕ್ಕೆ ಅರ್ಪಣೆ: ಸುತ್ತೂರು ಶ್ರೀ

KannadaprabhaNewsNetwork | Published : Apr 19, 2024 1:00 AM

ಸಾರಾಂಶ

ಅನಾದಿ ಕಾಲದಿಂದ ನಾವು ಇತಿಹಾಸ ನೋಡಿದಂತೆ, ಆಯಾ ಕಾಲಕ್ಕೆ ಶರಣರು ತಮ್ಮ ಬದುಕಿನಲ್ಲಿ ಕಠಿಣ ಆಧ್ಯಾತ್ಮಿಕ ಸಾಧನೆಗಳ ಮೂಲಕ ಭಕ್ತರ ಸಂಕಷ್ಟಗಳನ್ನು ದೂರ ಮಾಡಿ, ಅವರ ಬದುಕನ್ನು ಸಮಾಜದ ಒಳಿತಿಗಾಗಿ ಅರ್ಪಣೆ ಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಈ ಭರತ ಭೂಮಿ ಪವಿತ್ರ ಸಾಧು-ಸಂತರ ಬೀಡಾಗಿದೆ. ಅನಾದಿ ಕಾಲದಿಂದ ನಾವು ಇತಿಹಾಸ ನೋಡಿದಂತೆ, ಆಯಾ ಕಾಲಕ್ಕೆ ಶರಣರು ತಮ್ಮ ಬದುಕಿನಲ್ಲಿ ಕಠಿಣ ಆಧ್ಯಾತ್ಮಿಕ ಸಾಧನೆಗಳ ಮೂಲಕ ಭಕ್ತರ ಸಂಕಷ್ಟಗಳನ್ನು ದೂರ ಮಾಡಿ, ಅವರ ಬದುಕನ್ನು ಸಮಾಜದ ಒಳಿತಿಗಾಗಿ ಅರ್ಪಣೆ ಮಾಡಿಕೊಂಡಿದ್ದಾರೆ. ಪರಿಣಾಮ ಇಂದು ಅವರನ್ನು ನಾವು ಆರಾಧಿಸುತ್ತಿದ್ದೇವೆ ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ಹೊನಗೇರಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ದೇವರಗುಂಡಗುರ್ತಿ ಮೈಲಾರಲಿಂಗೇಶ್ವರ ಶರಣ ಸಂಸ್ಥಾನದ ಶರಣರಾದ ಅಮಾತ್ತೆಯ್ಯ ತಾತ ಹಾಗೂ ಹೊನ್ನಯ್ಯ ತಾತನವರ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಪ್ರಸಕ್ತ ದಿನಗಳಲ್ಲಿ ಜನರು ಆಧುನಿಕತೆ ಪ್ರಭಾವಕ್ಕೆ ಒಳಗಾಗಿ ಬದುಕಿನಲ್ಲಿ ಬಾಹ್ಯ ಸಂತೋಷಕ್ಕಾಗಿ ಪರದಾಡುತ್ತಿರುವುದನ್ನು ಕಾಣುತ್ತೇವೆ. ಅದರಿಂದ ಬದುಕು ಸಮಚಿತ್ತದಿಂದ, ಆರೋಗ್ಯದಿಂದ ಇರುವುದಿಲ್ಲ. ಬದಲಾಗಿ ತಮಗೆ ಭಗವಂತ ನೀಡಿರುವ ದೈವದತ್ತ ಕಾಯಕವನ್ನು ನಿಷ್ಠೆಯಿಂದ ಮಾಡುವುದರ ಜತೆಗೆ ಪರೋಪಕಾರಿ ಮನೋಗುಣ ಮೈಗೂಡಿಸಿಕೊಂಡು ಬಾಳಬೇಕು, ಅದರಿಂದ ಸಿಗುವ ಯಶಸ್ಸು, ಆತ್ಮತೃಪ್ತಿ, ಬೇರೆ ಯಾವುದರಿಂದ ಸಿಗುವುದಿಲ್ಲ ಎಂದು ಹೇಳಿದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇವರ ಗುಂಡಗುರ್ತಿಯ ಶರಣ ಸಂಸ್ಥಾನ ಮಠದ ಶ್ರೀಗಳು ಎಲ್ಲಾ ಭಾಗದಲ್ಲಿ ಮಠದ ಶಾಖೆಗಳನ್ನು ತೆರೆಯುವ ಮೂಲಕ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ, ತ್ರೀವಿಧ ದಾಸೋಹಗಳ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಒತ್ತು ನೀಡುತ್ತಿರುವುದು ಆರೋಗ್ಯಕರ ವಿಚಾರ ಎಂದು ಶ್ರೀಗಳ ಕಾರ್ಯವನ್ನು ಶ್ಲಾಘಿಸಿದರು.

ಇಂತಹ ಪವಿತ್ರ ಕ್ಷೇತ್ರದಲ್ಲಿ ಮಠಾಧೀಶರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ 35 ನವ ದಂಪತಿಗಳು ಬದುಕಿನಲ್ಲಿ ಶಾಂತಿ, ಸಂತೋಷ, ಕಾಯಕ ಜೀವಿಗಳಾಗಿ ಆದರ್ಶ ದಂಪತಿಗಳಾಗಿ ಬಾಳುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಮಹತ್ತರ ಕೊಡುಗೆ ನೀಡಿ ಎಂದು ಸಲಹೆ ನೀಡಿದರು.

ಸಮಾರಂಭದ ನೇತೃತ್ವ ವಹಿಸಿದ ಸುಕ್ಷೇತ್ರ ದೇವರ ಗುಂಡಗುರ್ತಿ ಮೈಲಾರಲಿಂಗೇಶ್ವರ ಶರಣ ಸಂಸ್ಥಾನ ಮಠದ ಪೀಠಾಧಿಪತಿ ಶಾಂತ ನಿಜಲಿಂಗ ತಾತನವರು ಮಾತನಾಡಿ, ಶ್ರೀಮಠಕ್ಕೆ ಭಕ್ತರೇ ನಿಜವಾದ ಆಸ್ತಿಯಾಗಿದ್ದಾರೆ, ಅವರೆಲ್ಲರ ಸಹಾಯ ಸಹಕಾರದಿಂದ ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

ವೇದಿಕೆ ಮೇಲೆ ಅಬ್ಬೆತುಮಕೂರಿನ ವಿಶ್ವರಾಧ್ಯ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿ, ನೀಲಗಲ್‌ನ ಡಾ. ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮೀಜಿ, ಮೈಲಾಪೂರದ ಶರಣಪ್ಪ ತಾತನವರು, ಹಲಕರ್ಟಿಯ ಅಭಿನವ ಮುನೀಂದ್ರ ಶಿವಾಚಾರ್ಯರು, ಗುರುಮಿಠಕಲ್ ಖಾಸಾ ಮಠದ ಶಾಂತವೀರ ಮಹಾಸ್ವಾಮಿಜಿ, ಹೆಡಗಿಮದ್ರಾದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ, ಮುಂಡರಗಿಯ ಶಿವಣ್ಣ ತಾತ ಪಟ್ಟದ ದೇವರು, ದೇವರಗುಂಡಗುರ್ತಿಯ ಹೊನ್ನಲಿಂಗ ತಾತ, ಮುಂಡರಗಿ ಸದಾಶಿವಯ್ಯ ತಾತ ಪಟ್ಟದದೇವರು, ಮಾತಪಳ್ಳಿಯ ಕಾಡಪ್ಪ ಪೂಜಾರಿ, ಲಿಂಗಣ್ಣ ತಾತ ಗೊಂದೆನೂರ, ಕೋನಳ್ಳಿಯ ನಿತ್ಯಾನಂದ ಪೂಜಾರಿ, ದೇವದುರ್ಗ ಜಜಹೀರ್ ಪಾಷ ಖಾರ್ದಿ ಹಜರತ್ ಸೈಯದ್, ದೇವಿಂದ್ರಯ್ಯಸ್ವಾಮಿ, ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕ್ರಪ್ಪ ಎಸ್. ಸಾಹುಕಾರ, ಸದಸ್ಯೆ ಬಿ.ವಿ. ಗೀತಾ, ಶ್ರೀನಿವಾಸರಡ್ಡಿ ಪಾಟೀಲ್ ಚನ್ನೂರ, ಶರಣಪ್ಪ ಮಾನೇಗಾರ ಇತರರಿದ್ದರು. ಪ್ರಾಸ್ತಾವಿಕವಾಗಿ ಈಶಪ್ಪ ಸಾಹುಕಾರ ಮಾತನಾಡಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿ, ವಂದಿಸಿದರು. ಕ್ಷೇತ್ರದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಇದ್ದರು.

Share this article