ಪ್ರತಿಯೊಬ್ಬರಿಗೂ ಶ್ರೀರಾಮನ ಬದುಕು ಆದರ್ಶವಾಗಬೇಕು: ಪೇಜಾವರ ಶ್ರೀ

KannadaprabhaNewsNetwork |  
Published : Apr 07, 2025, 12:32 AM IST
ನರಸಿಂಹರಾಜಪುರ ತಾಲೂಕಿನ ಸೀತೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಾನುವಾರ ನಡೆದ ತತ್ವಜ್ಞಾನ ಮಹೋತ್ಸವ ಹಾಗೂ ಶ್ರೀ ರಾಮ ಮಹೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಆಶೀರ್ವಾಚನ ಮಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರಪ್ರತಿಯೊಬ್ಬರಿಗೂ ಶ್ರೀ ರಾಮನ ಬದುಕು ಆದರ್ಶವಾಗಬೇಕು. ರಾಮನ ಬದುಕಿನ ಹೆಜ್ಜೆ ಗುರುತನ್ನು ಗಮನಿಸಿದರೆ ನಾವು ಹೇಗೆ ಬದುಕಬೇಕು ಎಂಬುದನ್ನು ತಿಳಿಯುತ್ತದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು.

ಸೀತೂರಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ತತ್ವಜ್ಞಾನ ಮಹೋತ್ಸವ, ಶ್ರೀ ರಾಮ ಮಹೋತ್ಸವ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರತಿಯೊಬ್ಬರಿಗೂ ಶ್ರೀ ರಾಮನ ಬದುಕು ಆದರ್ಶವಾಗಬೇಕು. ರಾಮನ ಬದುಕಿನ ಹೆಜ್ಜೆ ಗುರುತನ್ನು ಗಮನಿಸಿದರೆ ನಾವು ಹೇಗೆ ಬದುಕಬೇಕು ಎಂಬುದನ್ನು ತಿಳಿಯುತ್ತದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು.

ಭಾನುವಾರ ತಾಲೂಕಿನ ಸೀತೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ತತ್ವ ಜ್ಞಾನ ಮಹೋತ್ಸವ ಮತ್ತು ಶ್ರೀ ರಾಮ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. ರಾಮನ ಬದುಕಿನ ಹೆಜ್ಜೆ ಗುರುತನ್ನು ಗಮನಿಸಿದರೆ ನಾವು ಹೇಗೆ ಬದುಕಬೇಕು ಎಂಬುದನ್ನು ತಿಳಿಯುತ್ತದೆ. ಹೇಗೆ ಬದುಕಬಾರದು ಎಂದು ರಾವಣ ತೋರಿಸಿ ಕೊಟ್ಟಿದ್ದಾನೆ. ನ್ಯಾಯವಾಗಿ ಬದುಕಿದರೆ ಕಷ್ಟಗಳು ಬಂದಾಗ ಎಲ್ಲರೂ ಸಹಾಯ ಮಾಡುತ್ತಾರೆ. ರಾವಣನು ಸೀತೆಯನ್ನು ಅಪಹರಣ ಮಾಡಿದಾಗ ಜಿಂಕೆಗಳು ನೆರವಿಗೆ ಬಂದಿತ್ತು. ಜಟಾಯು ಎಂಬ ಪಕ್ಷಿ ರಾವಣನ ವಿಮಾನ ಅಡ್ಡಗಟ್ಟಿತ್ತು. ಕಪಿಗಳು ಸಮದ್ರಕ್ಕೆ ಸೇತುವೆ ನಿರ್ಮಿಸಲು ನೆರವು ನೀಡಿದವು. ಕಡೆಗೆ ರಾವಣನ ತಮ್ಮ ವಿಭೀಷಣನು ಸಹ ಯುದ್ಧ ವಿರೋಧಿಸಿ ರಾಮನ ಪರವಾಗಿ ನಿಂತಿದ್ದನು ಎಂದರು.

ವಾಲ್ಮೀಕಿ ರಾಮಾಯಣದಲ್ಲಿ ರಾಮ ಹಾಗೂ ರಾವಣನ ಪಾತ್ರವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ರಾಮನಂತೆ ಯಾಕೆ ಬದುಕಬೇಕು ಎಂಬುದನ್ನು ಸಮಗ್ರವಾಗಿ ತಿಳಿಸಲಾಗಿದೆ. ರಾವಣನಂತೆ ಯಾಕೆ ಬದುಕಬಾರದು ಎಂಬುದನ್ನು ಸಹ ಅದ್ಭುತವಾಗಿ ಮನವರಿಕೆ ಮಾಡಲಾಗಿದೆ ಎಂದರು.

ರಾಮನ ಅವತಾರ ನಮ್ಮ ಹೃದಯದ ಒಳಗೇ ಆಗಬೇಕು. ನಮ್ಮ ಗುರು ಮದ್ವಾಚಾರ್ಯರು ಹೇಳಿದಂತೆ ಸಜ್ಜನರಿಗೆ ಭಗವಂತ ಅವತಾರ ಎತ್ತುತ್ತಾನೆ. ಸಕಲ ಜೀವಿ ಗಳಲ್ಲೂ ರಾಮ, ಕೃಷ್ಣನು ನೆಲಸುತ್ತಾನೆ. ಆದರೆ, ಕಲಿಯುಗದಲ್ಲಿ ರಾಕ್ಷಸರು ನಮ್ಮ ಮನಸ್ಸಿನಲ್ಲಿ, ಹೃದಯದಲ್ಲಿ ನೆಲಸುವ ಸಂಭವವಿದೆ. ಆ ಶತ್ರು ನಾಶಕ್ಕಾಗಿ ಧರ್ಮ, ಶಾಸ್ತ್ರ, ಮಾನವೀ ಯತೆ ಬೇಕಾಗಿದೆ. ಕುಟುಂಬ, ಲೋಕ ವ್ಯವಹಾರದ ಮಧ್ಯೆ ಜನರು ಸ್ವಲ್ಫ ಸಮಯವಾದರೂ ಭಗವಂತನ ಚಿಂತನೆ ಮಾಡಬೇಕು. ಪ್ರತಿ ಊರಿನಲ್ಲೂ ಶ್ರೀ ರಾಮನ ಆರಾಧನೆ, ಉತ್ಸವ ನಡೆಯಬೇಕು. ಶ್ರೀ ರಾಮನು ಹೃದಯದಲ್ಲಿ ನಿಂತು ಷಡ್ವರ್ಗದಲ್ಲಿ ಅಡಗಿರುವ ರಾಕ್ಷಸರ ಸಂಹಾರ ಆಗಬೇಕಾಗಿದೆ. ಸೀತೂರಿನ ಭಕ್ತರು ಶ್ರೀ ರಾಮನ ಉತ್ಸವವನ್ನು ವೈಭವದಿಂದ, ಭಕ್ತಿ ಪೂರ್ವಕವಾಗಿ ಮಾಡುತ್ತಿ ದ್ದಾರೆ. ನಮ್ಮ ಪೇಜಾವರ ಮಠದ ಹಿಂದಿನ ಶ್ರೀಗಳು ಸಹ ಸೀತೂರಿಗೆ ಬಂದು ಆಶೀರ್ವಚನ ಮಾಡಿದ್ದರು ಎಂದರು.

ವಿಶೇಷ ಪೂಜೆ: ಉಡುಪಿ ಪೇಜಾವರ ಮಠದ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರು ಪರಿವಾರ ಸಮೇತ ಶನಿವಾರ ರಾತ್ರಿಯೇ ಸೀತೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳಿಗ್ಗೆ ಶ್ರೀಗಳು ಮೂಲ ವಿಠ್ಠಲ ದೇವರಿಗೆ 108 ಎಳನೀರು ಅಭಿಷೇಕ ಮಾಡಿದರು. ನಂತರ ಶ್ರೀಗಳು ಪಟ್ಟದೇವರಾದ ರಾಮ, ಪಾಂಡುರಂಗ, ಹಯಗ್ರೀವ ದೇವರ ವಿಗ್ರಹಗಳನ್ನು ಉದ್ವರ್ಚನೆ ಮಾಡಿ ಪೂಜೆ ಸಲ್ಲಿಸಿದರು. ನಂತರ ಗೋಪಾಲಕೃಷ್ಣ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು. ದೇವಸ್ಥಾನದ ಸಮಿತಿ ಹಾಗೂ ಗ್ರಾಮಸ್ಥರು ಯತಿಪೂಜೆ ನೆರವೇರಿಸಿದರು. ನಂತರ ಶ್ರೀಗಳು ಆಗಮಿಸಿದ್ದ ಭಕ್ತರಿಗೆ ತೀರ್ಥ, ಮಂತ್ರಾಕ್ಷತೆ ವಿತರಿಸಿದರು. ಇದಕ್ಕೂ ಮೊದಲು ಕುದುರೆಗುಂಡಿ ಗಾಯಿತ್ರಿ ವಿಪ್ರ ಮಹಿಳಾ ಬಳಗದವರಿಂದ ಭಜನೆ ನಡೆಯಿತು.

-- ಬಾಕ್ಸ್ ---

ಪರಣಿಂಕಲ ಗ್ರಾಮದ ಮಹಾಲಿಂಗೇಶ್ವೇರ ದೇವಸ್ಥಾನದಲ್ಲಿ ಉತ್ಸವ

ಲೋಕ ಕಲ್ಯಾಣಕ್ಕಾಗಿ ಕಳೆದ 108 ದಿನಗಳಿಂದ ತತ್ವಜ್ಞಾನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಏ. 9 ರಿಂದ 13 ರ ವರೆಗೆ ಉಡುಪಿ ಜಿಲ್ಲೆಯ ಪರಣಿಂಕಲ ಗ್ರಾಮದ ಮಹಾಲಿಂಗೇಶ್ವೇರ ದೇವಸ್ಥಾನದಲ್ಲಿ ಉತ್ಸವ ನಡೆಸು ವುದರೊಂದಿಗೆ ಈ ಕಾರ್ಯಕ್ರಮ ಮುಕ್ತಾಯಗೊಳಿಸುತ್ತೇವೆ ಎಂದು ಪೇಜಾವರ ಮಠಾದೀಶ ಶ್ರೀ ಪ್ರಸನ್ನ ತೀರ್ಥ ಶ್ರೀಪಾದಂಗಳವರು ತಿಳಿಸಿದರು.

ಸೀತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ವೈದ್ಯ, ರೈತ ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಿದರೆ ಅದೇ ದೇವರ ಪೂಜೆಯಾಗಲಿದೆ. ನಾವು ಮಾಡುವ ವೃತ್ತಿಯೆ ಭಗವಂತನ ಆರಾಧನೆಯಾಗುತ್ತದೆ. ಪರಮಾತ್ಮನು ಕೇವಲ ಗುಡಿಯಲ್ಲಿ ಮಾತ್ರ ಇರುವುದಿಲ್ಲ. ಪ್ರತಿಯೊಬ್ಬ ತ್ಯಾಗಿ ಹೃದಯದಲ್ಲೂ ನೆಲಸಿರುತ್ತಾನೆ. ಇಂತಹ ಸಮಾಜ ಸೃಷ್ಟಿ ಮಾಡಿದರೆ ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದರು.

2018 ರಲ್ಲಿ ಉಡುಪಿ ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶ್ವರ ತೀರ್ಥರು ಸೀತೂರು ಗ್ರಾಮಕ್ಕೆ ಆಗಮಿಸಿ ಗೋಪಾಲ ಕೃಷ್ಣ ದೇವಸ್ಥಾನದ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ನೆಸನಪಿಸಿಕೊಂಡರು.

ಪೇಜಾವರ ಮಠದಿಂದ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಶಿಕ್ಷಣ ಸಂಸ್ಥೆ ಪೂರ್ಣ ಪ್ರಜ್ಞದ ನೂತನ ಕಟ್ಟಡದ ಸಹಾಯಾರ್ಥ ಸೀತೂರು, ಯಡಗೆರೆಗೆ ಆಗಮಿಸಿ ಭಕ್ತರಿಂದ ಕಾಣಿಕೆ ಸ್ವೀಕಾರ ಮಾಡಿದ್ದ ಶ್ರೀ ವಿಶ್ವೇಶ್ವರ ತೀರ್ಥರು ಆ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಬಗ್ಗೆ ಪ್ರಸ್ತಾಪಿಸಿ ಯಾವುದೇ ಕಾನೂನು, ಕಟ್ಟಳೆ ಬಂದರೂ ಅದನ್ನು ಮೆಟ್ಟಿ ನಿಂತು ರಾಮ ಮಂದಿರ ಕಟ್ಟುತ್ತೇವೆ ಎಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ