- ಕಾಲುವೆಯಂತಾದ ನದಿಯ ಹರಿವು । ಕುಡಿವ ನೀರಿಗೂ ಕಂಟಕ । ಬೇಸಿಗೆಯಲ್ಲಿ ಇನ್ನೂ ಕಷ್ಟ.
ಕನ್ನಡಪ್ರಭ ವಾರ್ತೆ, ಶೃಂಗೇರಿ
ಪಶ್ಚಿಮಘಟ್ಟಗಳ ತಪ್ಪಲಿನ ಸಹ್ಯಾದ್ರಿ ಪರ್ವತ ಶ್ರೇಣಿಗಳ ಅಂಚಿನ ದಟ್ಟ ಕಾನನಗಳ ನಡುವೆ ಮಲೆನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹಂಪಿಯ ವರೆಗೂ ಹರಿಯುವ ತುಂಗೆ ಕುಡಿವ ನೀರಿನ ಆಸರೆಯಾಗಿಯೂ ದಾಹ ತಣಿಸಿರುವ ಜೀವಜಲಕ್ಕೆ ಕುತ್ತುಎದುರಾಗಿದೆ.ಸದಾ ಮೈದುಂಬಿ ಹರಿಯುತ್ತಾ ಮಲೆನಾಡ ಜೀವಕಳೆಯಾಗಿದ್ದ ತುಂಗೆ ಬಿಸಿಲ ಬೇಗೆ, ಅಂತರ್ಜಲ ಕೊರತೆಯಿಂದ ಕಾಲುವೆಯಂತಾಗಿ ಹರಿಯುತ್ತಾ ಒಡಲು ಬರಿದಾಗಿರುವ ಆತಂಕ ತಂದೊಡ್ಡಿದೆ.
ಪ್ರತೀ ವರ್ಷ ತುಂಬಿರುತ್ತಿದ್ದ ನದಿ ಸಾಧಾರಣವಾಗಿ ಏಪ್ರಿಲ್ , ಮೇ ವರೆಗೂ ನೀರಿನ ಕೊರತೆ ಕಾನುತ್ತಿರಲಿಲ್ಲ. ಆದರೆ ಈ ಬಾರಿ ಡಿಸೆಂಬರ್, ಜನವರಿಯಲ್ಲೇ ನೀರಿನ ಮಟ್ಟ ಕ್ಷೀಣಿಸಿ ಕಾಲುವೆ ಯಂತೆ ಹರಿಯುತ್ತಿದೆ. ತುಂಗೆ ಕೇವಲ ಮಲೆನಾಡಿಗಲ್ಲದೇ ಕರ್ನಾಟಕದ ಅರ್ಧ ಭಾಗಕ್ಕೆ ನೀರುಣಿಸುವ ತುಂಗೆ ಈ ವರ್ಷ ಅತ್ಯಧಿಕ ಮಳೆಯಾಗಿದ್ದರೂ ಅಂತರ್ಜಲ ಕೊರತೆಯಿಂದ ಬಳಲುತ್ತಿದೆ. ಆಗಸ್ಟ್, ಸೆಪ್ಟೆಂಬರ್ ವರೆಗೂ ಸಾಮಾನ್ಯವಾಗಿ ತುಂಬಿರುತ್ತಿದ್ಜ ನದಿ ನೀರಿನ ಪ್ರಮಾಣ ಅಕ್ಟೋಬರ್ ನಿಂದಲೇ ತೀರಾ ಕುಸಿಯತೊಡಗಿತು. ಈಗ ಬಿಸಿಲ ತಾಪಕ್ಕೆ ಹಳ್ಳ, ಕೆರೆ, ಕಿರುನದಿಗಳಲ್ಲಿಯೂ ನೀರಿನ ಸಂಗ್ರಹವಿಲ್ಲದಂತಾಗಿದೆ.
ತುಂಗೆ ಕುಡಿಯುವ ನೀರು, ಕೃಷಿ ಚಟುವಟಿಕೆಗಳ ಜೀವನಾಡಿ. ಫೆಬ್ರವರಿಯಲ್ಲೇ ತುಂಗಾ ಒಡಲು ಬರಿದಾಗುತ್ತಿರುವಾಗ ಇನ್ನು ಮಾರ್ಚ್ , ಏಪ್ರಿಲ್, ಮೇ ತಿಂಗಳ ಸುಡುಬಿಸಿಲಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಇನ್ನೂ ಕ್ಷೀಣಿಸಿದರೆ ನೀರಿನ ಅಭಾವ ಕಾಡದೇ ಇರದು. ಡಿಸೆಂಬರ್, ಜನವರಿಯಲ್ಲಿ ಆಗಾಗ ಬಂದ ಅಕಾಲಿಕ ಮಳೆ ಕ್ಷಣ ತಂಪೆರೆದು ಹೋಗಿದ್ದು ಬಿಟ್ಟರೆ ಹೆಚ್ಚಿನ ಮಳೆಯೇ ಇಲ್ಲದೆ ಕೆರೆ, ಬಾವಿ,ಹಳ್ಳಗಳೂ ಬತ್ತಿ ಹೋಗುವ ಹಂತದಲ್ಲಿದೆ.ತುಂಗಾ ನದಿ ಸೇರುವ ನಂದಿನಿ, ನಳಿನಿ ನದಿಗಳಲ್ಲೂ ನೀರಿನ ಮಟ್ಟ ಕುಸಿದಿದೆ. ನದಿನೀರಿನ ಕಲ್ಲುಗಳೇ ಕಾಣಿಸುತ್ತಿವೆ. ಮಳೆ ಅಭಾವ, ಅಂತರ್ಜಲ ಕೊರತೆಯಿಂದ ನೀರಿನ ಸಂಗ್ರಹ ಕ್ಷೀಣಿಸಿ ಈ ಭಾಗದ ಅಡಕೆ,ಕಾಫಿ,ಕಾಳು ಮೆಣಸು ಇತ್ಯಾದಿ ಪ್ರಮುಖ ಬೆಳೆಗಳ ಮೇಲೂಯೂ ಅಗಅದ ಪರಿಣಾಮ ಬೀರುತ್ತಿದೆ. ಸುಡು ಬಿಸಿಲಿನಲ್ಲಿ ನೀರಿಲ್ಲದೇ ಫಸಲುಗಳು ಒಣಗುತ್ತವೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಕುಡಿವ ನೀರಿಗೂ ತತ್ವಾರ ಎದುರಾಗುವುದರಲ್ಲಿ ಸಂಶಯವಿಲ್ಲ.
ಕೋಟ್---ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಲ್ಲಿ ಅವ್ಯಾಹತವಾಗಿ ಅರಣ್ಯ ನಾಶ, ಮರಗಳನ್ನು ಕಡಿದು, ಮಣ್ಣು ತೆಗೆಯುತ್ತಿ ರುವುದರಿಂದ ಭೂಕುಸಿತ ಉಂಟಾಗಿ ಜಲಮೂಲ ಬತ್ತಲು ಮೂಲ ಕಾರಣವಾಗಿದೆ. ಪ್ರಕೃತಿ ಮೇಲೆ ನಿರಂತರ ದಾಳಿ ನಡೆಯು ತ್ತಿದೆ. ಜಲ ಕಂಟಕ ಎದುರಿಸಬೇಕಾಗಿದೆ. ಪ್ರಕೃತಿ ಉಳಿವಿಗೆ, ಪರಿಸರ ಸಂರಕ್ಷಣೆಗೆ ಜನರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಹೆಚ್ಚು ನಡೆಯಬೇಕಿದೆ.
- ನಾಗೇಶ್ಕಾರ್ಯಕರ್ತ, ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ.
--ಬಹಳ ವರ್ಷಗಳ ಹಿಂದೆ ಸಾಮಾನ್ಯವಾಗಿ ಏಪ್ರಿಲ್ ವರೆಗೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು ಮೇ ನಲ್ಲಿ ಕ್ಷೀಣವಾಗುತ್ತಿತ್ತು. ಹಳ್ಳ,ಕೆರೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರಿನ ಸಂಗ್ರಹವಿರುತ್ತಿತ್ತು. ಡಿಸೆಂಬರ್ ಕೊನೆ, ಜನವರಿಯಲ್ಲಿ ಆಗಾಗ ಮಳೆಯಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ತುಂಗಾ ನದಿ ನವೆಂಬರ್, ಡಿಸೆಂಬರ್ ನಲ್ಲೆ ಕಾಲುವೆಯಂತೆ ಹರಿಯುತ್ತಿದೆ. ಏಪ್ರಿಲ್ ಮೇ ತಿಂಗಳ ಸುಡು ಬಿಸಿಲ ವಾತಾವರಣ ಈಗಲೇ ಕಾಣುವಂತಾಗಿದೆ. ಈಗಲೇ ಅಂತರ್ಜಲ ಬತ್ತಿದ್ದು ಕುಡಿವ ನೀರಿನ ಬರ ಜೊತೆ ಕೃಷಿಗೂ ಹಿನ್ನೆಡೆಯಾಗಲಿದೆ.
---ಶಂಕ್ರಪ್ಪಕುರಾದಮನೆ, ಗ್ರಾಮಸ್ಥ
25 ಶ್ರೀ ಚಿತ್ರ 1-ಶೃಂಗೇರಿ ತಾಲೂಕಿನಲ್ಲಿ ಸುಡುಬಿಸಿಲ ತಾಪದಿಂದ ಕಾಲುವೆಯಂತೆ ಹರಿಯುತ್ತಿರುವ ಮಲೆನಾಡ ಜೀವನದಿ ತುಂಗೆ.
25 ಶ್ರೀ ಚಿತ್ರಮಳೆಗಾಲದಲ್ಲಿ ತುಂಬಿ ಉಕ್ಕಿಹರಿಯುತ್ತಿದ್ದ ತುಂಗಾ ನದಿ.