ಶಿರಹಟ್ಟಿಯಲ್ಲಿ ಪೇಟೆ ವೀರಭದ್ರೇಶ್ವರ ದೇವಸ್ಥಾನದ ಕಾರ್ತಿಕೋತ್ಸವ
ಶಿರಹಟ್ಟಿ: ಕತ್ತಲೆ ಎನ್ನುವುದು ಅಸ್ತಿತ್ವದಲ್ಲಿಲ್ಲ. ಮನುಷ್ಯರು ದೀಪ ಹಚ್ಚುವ ಕೆಲಸ ಮಾಡಬೇಕು. ದೀಪದ ಬೆಳಕಿಗೆ ಬಹಳ ಬೆಲೆ ಇದೆ. ದೀಪವು ತಾನು ಉರಿದು ಎಲ್ಲರಿಗೂ ಬೆಳಕು ನೀಡುತ್ತದೆ. ಇಂತಹ ಬೆಳಗುವ ಜ್ಯೋತಿಗೆ ಯಾವುದೇ ಜಾತಿಯಿಲ್ಲ. ಹಾಗೆ ಮನುಷ್ಯನು ತನ್ನ ಜೀವನದಲ್ಲಿ ದೀಪದಂತೆ ಎಲ್ಲರಿಗೂ ಒಳಿತು ಬಯಸಿ ಬೆಳಕು ನೀಡಬೇಕು ಎಂದು ಶ್ರೀ ಕ್ಷೇತ್ರ ವರವಿ ಮೌನೇಶ್ವರ ಮಠದ ಶ್ರೀ ಮೌನೇಶ್ವರ ಮಹಾಸ್ವಾಮಿಗಳು ಹೇಳಿದರು.ಶಿರಹಟ್ಟಿ ಪಟ್ಟಣದ ಶ್ರೀ ಪೇಟೆ ವೀರಭದ್ರೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು. ಭಾರತೀಯರು ಬೆಳಕನ್ನು ಪ್ರೀತಿಸುವವರೇ ಹೊರತು ಬೆಂಕಿ ಹಚ್ಚುವವರಲ್ಲ. ಕಾರ್ತಿಕ ಮಾಸ ಎಂದರೆ ಬರೀ ದೀಪ ಹಚ್ಚಿ ಮುಗಿಸುವುದಲ್ಲ. ನಮ್ಮ ಬದುಕು ಬೆಳಕಾಗುವ ರೀತಿ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಬದಲಾವಣೆಯು ಜಗದ ನಿಯಮವಾಗಿದ್ದು, ಜೀವನದಲ್ಲಿ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ತನ್ನ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಸಮಾಜದಲ್ಲಿ ಜಾತಿ, ಮತ, ಪಂಥವೆನ್ನದೆ ಎಲ್ಲರೂ ಸಮಾನವಾಗಿ ಬಾಳಬೇಕು. ಸೂರ್ಯ ಜಗತ್ತಿನ ಕತ್ತಲೆಯನ್ನು ಕಳೆದರೆ ಪಣತೆ ಮನೆಯ ದೀಪ ಬೆಳಗುತ್ತದೆ. ಬೆಳಕಿಗೆ ಬಡತನ, ಶ್ರೀಮಂತಿಕೆ ಎನ್ನುವುದಿಲ್ಲ. ಅದು ಸದಾ ತೃಪ್ತವಾಗಿರುತ್ತದೆ ಎಂದರು.ಮನುಷ್ಯರು ಸದಾ ಕಾಯಕ ಶೀಲ, ಕ್ರಿಯಾ ಶೀಲ ಹಾಗೂ ಸಂತೃಪ್ತ ಭಾವದಿಂದ ಬದುಕಿದಲ್ಲಿ ಬದುಕು ಬೆಳಕಾಗಲು ಸಾಧ್ಯ. ಈ ಎಲ್ಲ ಗುಣಗಳು ಮನುಷ್ಯನಲ್ಲಿದ್ದರೆ ಬದುಕು ಒಳ್ಳೆಯದಾಗುತ್ತದೆ. ನಿತ್ಯ ಕಾರ್ತಿಕೋತ್ಸವದತ್ತ ಸಾಗಬೇಕು. ಕಾರ್ತಿಕೋತ್ಸವ ಎನ್ನುವುದು ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಚೆಲ್ಲುವ ಹಬ್ಬವಾಗಿದೆ.
ಕತ್ತಲೆ ಅಜ್ಞಾನದ ಸಂಕೇತವಾದರೆ ಬೆಳಕು ಜ್ಞಾನದ ಸಂಕೇತ. ಬಾಹ್ಯ ಕತ್ತಲೆ ಕಳೆಯಲು ದೀಪ ಬೇಕು. ದೀಪವು ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ ಅಷ್ಟೇ ಬೆಳಕನ್ನು ಬಡವನ ಮನೆಯಲ್ಲು ನೀಡುತ್ತದೆ. ಈ ಕಾರ್ತಿಕೋತ್ಸವ ಕಾರ್ಯಕ್ರಮ ತಮ್ಮೆಲ್ಲರ ಬದುಕಿನಲ್ಲಿ ಬದಲಾವಣೆಗೆ ಪ್ರೇರಣೆ ನೀಡಲಿ ಎಂದು ಹಾರೈಸಿದರು.ಬೆಳಕು ಇದು ಬರೀ ಬೆಳಕಲ್ಲ. ಜ್ಞಾನವನ್ನು ಬೆಳಗಿಸುವ ದಿವ್ಯ ಬೆಳಕು. ಧರ್ಮ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಇದನ್ನು ಅರಿತು ಸಮಾಜದ ಒಳಿತಿಗೆ ಮುಂದಾಗಿರುವುದು ಸಂತಸದ ವಿಷಯ ಎಂದರು.
ಶಿಕ್ಷಕ ಸಿದ್ದು ಹೊಸೂರ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಜನತೆಗೆ ಸನ್ಮಾರ್ಗದತ್ತ ನಡೆಯಲು ಸಾಧ್ಯವಾಗುತ್ತದೆ. ಕಾರ್ತಿಕ ಮಾಸದಲ್ಲಿ ದೀಪ ಬೆಳಗಿಸುವುದರ ಉದ್ದೇಶ ನಮಗೆಲ್ಲರಿಗೂ ಜ್ಞಾನವೆಂಬ ಬೆಳಕು ದೊರೆತು ನಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರಕುತ್ತದೆ. ಲೋಕ ಕಲ್ಯಾಣಕ್ಕಾಗಿ ಆಚರಿಸುವ ಈ ಕಾರ್ತಿಕೋತ್ಸವದಿಂದ ಶಾಂತಿ, ನೆಮ್ಮದಿ, ಸಮೃದ್ದಿ ನೆಲೆಸಲಿ. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ದೀಪ ಪ್ರಜ್ವಲಿಸಿದ ನಿಮಗೆಲ್ಲರಿಗೂ ಆಯೂರಾರೋಗ್ಯ ಪ್ರಾಪ್ತಿಯಾಗಲಿ ಎಂದರು.ಕಾರ್ತಿಕ ಮಾಸದಲ್ಲಿ ದೀಪದಾನ ಮಾಡುವುದರಿಂದ ಶ್ರೇಷ್ಠವಾದ ಪುಣ್ಯ ಪ್ರಾಪ್ತಿಯಾಗುತ್ತದೆ. ದೀಪ ಜ್ಞಾನದ ಸಂಕೇತ. ಅದು ನಮ್ಮಲ್ಲಿನ ಅಂದಕಾರವನ್ನು ಹೋಗಲಾಡಿಸುತ್ತದೆ ಎಂದರು.
ಮುಖಂಡರಾದ ಸಿ.ಸಿ. ನೂರಶೆಟ್ಟರ, ಸಿದ್ದಲಿಂಗಯ್ಯ ಕಳ್ಳಿಮಠ, ಮುತ್ತಣ್ಣ ಮಜ್ಜಗಿ, ಮಹೇಶ ಪಟ್ಟಣಶೆಟ್ಟರ, ಶಿವಯೋಗಿ ಪಟ್ಟಣಶೆಟ್ಟರ, ಪ್ರಕಾಶ ಬೋರಶೆಟ್ಟರ, ಸಂಪತ್ತ ಗುತ್ತಿ, ಸಂತೋಷ ಆಲೂರ, ಸಉರೇಶ ಹವಳದ ಸೇರ ಅನೇಕರು ಇದ್ದರು.