ನೀರು ಸಮಸ್ಯೆಯ 126 ಗ್ರಾಮಗಳ ಪಟ್ಟಿ ಸಿದ್ಧ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ

KannadaprabhaNewsNetwork |  
Published : Feb 23, 2024, 01:49 AM IST
22ಕೆಡಿವಿಜಿ2-ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಜಿಪಂ ಸಿಇಓ ಡಾ.ಸುರೇಶ ಬಿ.ಇಟ್ನಾಳ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೂರೈಕೆಯಾಗುತ್ತಿರುವ ಗ್ರಾಮಗಳಿಗೆ ನೀರಿನ ಸಮಸ್ಯೆ ಇಲ್ಲ. ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಹಾಗೂ ಭದ್ರಾ ಕಾಲುವೆಗಳಿಗೆ ನೀರು ಬಿಡಲಾಗಿದೆ. ಸೂಳೆಕೆರೆಯಿಂದ ಹಲವು ಗ್ರಾಮಗಳಿಗೆ ನೀರು ಪೂರೈಸುತ್ತಿದ್ದು, ಕಾಲುವೆ ಮೂಲಕ ಸೂಳೆಕೆರೆ ನೀರು ಬಿಡಿಸಲಾಗಿದೆ. ಭದ್ರಾ ನಾಲೆಯ ಕೊನೆಯ ಭಾಗದ ರೈತರಿಗೂ ಸಮರ್ಪಕವಾಗಿ ನೀರು ತಲುಪಿಸುವ ಉದ್ದೇಶದಿಂದ ನಾಲೆಗೆ ಅಕ್ರಮವಾಗಿ ಅಳವಡಿಸಲಾಗಿದ್ದ ಪಂಪ್‌ ಸೆಟ್‌ಗಳ ತೆರವಿಗೆ ತಂಡಗಳ ರಚಿಸಿ, ಕ್ರಮ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ತೀವ್ರ ಮಳೆಯ ಕೊರತೆಯಿಂದಾಗಿ ಜಿಲ್ಲೆಯ 19 ಗ್ರಾಮಗಳಲ್ಲಿ ಅಂತರ್ಜಲ ಕುಸಿತದಿಂದಾಗಿ ಖಾಸಗಿ ಕೊಳವೆ ಬಾವಿಗಳ ಬಾಡಿಗೆ ಪಡೆದು, ಅಷ್ಟೂ ಗ್ರಾಮಗಳಿಗೆ ನೀರೊದಗಿಸುತ್ತಿದ್ದು, ಬರಲಿರುವ ದಿನಗಳಲ್ಲಿ ನೀರಿನ ಸಮಸ್ಯೆಯಾಗುವ 126 ಗ್ರಾಮಗಳ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದರು.

ನಗರದ ಆಫೀಸರ್ಸ್‌ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಆಗಸ್ಟ್ ನಲ್ಲಿ ಶೇ.90 ಮಳೆ ಕೊರತೆಯಾಗಿದೆ. ಇದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಇಳಿಕೆಯಾಗಿದ್ದು, ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.

ಖಾಸಗಿ ಕೊಳ‍ವೆ ಬಾವಿಗಳು ಲಭ್ಯವಾಗದಿದ್ದರೆ, ಸಮಸ್ಯೆಯಾದ 24 ಗಂಟೆಯಲ್ಲೇ ಟ್ಯಾಂಕರ್ ಮೂಲಕ ಆ ಗ್ರಾಮಗಳಿಗೆ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೂರೈಕೆಯಾಗುತ್ತಿರುವ ಗ್ರಾಮಗಳಿಗೆ ನೀರಿನ ಸಮಸ್ಯೆ ಇಲ್ಲ. ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಹಾಗೂ ಭದ್ರಾ ಕಾಲುವೆಗಳಿಗೆ ನೀರು ಬಿಡಲಾಗಿದೆ. ಸೂಳೆಕೆರೆಯಿಂದ ಹಲವು ಗ್ರಾಮಗಳಿಗೆ ನೀರು ಪೂರೈಸುತ್ತಿದ್ದು, ಕಾಲುವೆ ಮೂಲಕ ಸೂಳೆಕೆರೆ ನೀರು ಬಿಡಿಸಲಾಗಿದೆ. ಭದ್ರಾ ನಾಲೆಯ ಕೊನೆಯ ಭಾಗದ ರೈತರಿಗೂ ಸಮರ್ಪಕವಾಗಿ ನೀರು ತಲುಪಿಸುವ ಉದ್ದೇಶದಿಂದ ನಾಲೆಗೆ ಅಕ್ರಮವಾಗಿ ಅಳವಡಿಸಲಾಗಿದ್ದ ಪಂಪ್‌ ಸೆಟ್‌ಗಳ ತೆರವಿಗೆ ತಂಡಗಳ ರಚಿಸಿ, ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಡಾ.ಸುರೇಶ ಬಿ.ಇಟ್ನಾಳ್ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬೇಸಿಗೆ ಎದುರಾಗಿದ್ದು, ಈಗಾಗಲೇ 19 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದಾದ 18 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಕೊಳವೆ ಬಾವಿ ಕೊರೆಸಲು ಅನುಮತಿ ಕಡ್ಡಾಯ

ನಾಲೆಯುದ್ದಕ್ಕೂ ಎಲ್ಲೆಲ್ಲಿ ಕಾನೂನಾತ್ಮಕ ಸಮಸ್ಯೆ ಎದುರಾಗುತ್ತದೆಯೋ ಅಂತಹ ಭಾಗಗಳಲ್ಲಿ 144ನೇ ಸೆಕ್ಷನ್‌ನಡಿ ನಿಷೇಧಾಜ್ಞೆ ಜಾರಿಗೊಳಿಸಲು ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ಸದ್ಯ ಅಂತರ್ಜಲ ಮಟ್ಟ ಕಡಿಮೆಯಾಗಿದ್ದರಿಂದ ಕೊಳವೆ ಬಾವಿ ಕೊರೆಯಲು ನಿರ್ಬಂಧಿಸಿದೆ. ಕೊಳವೆ ಬಾವಿ ಕೊರೆಸಲು ರಿಗ್ ಮಾಲೀಕರು ನಮೂನೆ-7ರಲ್ಲಿ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ ಸೂಚಿಸಿದರು.

ಸಂವಿಧಾನ ಜಾಗೃತಿ ಜಾಥಾಗೆ ಉತ್ತಮ ಸ್ಪಂದನೆ

ಜಿಲ್ಲೆಯ 193 ಗ್ರಾಪಂ, 7 ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಸಂಚಾರ: ಡಾ.ವೆಂಕಟೇಶ

ದಾವಣಗೆರೆ: ಗಣ ರಾಜ್ಯೋತ್ಸವದ 75ನೇ ವರ್ಷ ಅಂಗವಾಗಿ ಸಂವಿಧಾನದ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲಾ ಗ್ರಾಪಂ ಕೇಂದ್ರ ಸ್ಥಾನ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸಂಚರಿಸಿ ಜಾಥಾ ಯಶಸ್ವಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದರು.

ಸಂವಿಧಾನ ಜಾಗೃತಿ ಜಾಥಾಗೆ ಜ.26ರಂದು ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಚಾಲನೆ ನೀಡಿದ್ದು, ಅಂದಿನಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜಾಥಾ ಸಂಚರಿಸಿ ಜನ ಸಾಮಾನ್ಯರಿಗೂ ಸಂವಿಧಾನದ ಆಶಯಗಳ ತಲುಪಿಸುವ ಕೆಲಸ ಮಾಡಿದೆ ಎಂದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲರೂ ಜಾಥಾದಲ್ಲಿ ಪಾಲ್ಗೊಂಡು ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಜಾಥಾ ವೇಳೆ ವಿವಿಧ ಕಲಾ ತಂಡಗಳು, ಕಲಾವಿದರು ಭಾಗವಹಿಸಿದ್ದು ವಿಶೇಷ. ಜಿಲ್ಲೆಯ 194 ಗ್ರಾಪಂಗಳು, 7 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಜನರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ. ಮಾ.7ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಜಾಥಾವು ಸಂಪನ್ನಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಮಾಹಿತಿ ನೀಡಿದರು.

ಜಿಪಂ ಸಿಇಒ ಡಾ.ಸುರೇಶ ಬಿ.ಇಟ್ನಾಳ್‌ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಸಂವಿಧಾನ ಜಾಗೃತಿ ಜಾಥಾ ವ್ಯವಸ್ಥಿತ ಹಾಗೂ ಪರಿಣಾಮಕಾರಿಯಾಗಿ ನಡೆಸಲಾಗಿದೆ. ಜ.26ರಿಂದ ಪ್ರತಿದಿನ 7 ಗ್ರಾಪಂಗಳ ಕೇಂದ್ರ ಸ್ಥಾನಗಳಲ್ಲಿ ಜಾಥಾ ಸಂಚರಿಸಿದ್ದು, ಜನರು ಸಹ ಉತ್ಸುಕತೆಯಿಂದ ಜಾಥಾದಲ್ಲಿ ಪಾಲ್ಗೊಂಡಿದ್ದರು ಎಂದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞೆ ಸ್ವೀಕರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!