ಕನ್ನಡಪ್ರಭ ವಾರ್ತೆ ಸಂಕೇಶ್ವರ
ರೈತ ಬೆಳೆದ ಬೆಳೆಗೆ ಯೋಗ್ಯ ಪ್ರತಿಫಲ ಸಿಗಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಸಹಕಾರ ತತ್ವದಡಿ ಮಾದರಿ ಸಕ್ಕರೆ ಕಾರ್ಖಾನೆಯೊಂದನ್ನು ಸ್ಥಾಪಿಸಿ ಈ ಭಾಗದ ರೈತಾಪಿ ಜನರ ಬಾಳು ಬೆಳಗಿದ ಸಹಕಾರಿ ಭೀಷ್ಮ ದಿ.ಅಪ್ಪಣಗೌಡ ಪಾಟೀಲರ ಕಾರ್ಯ ಸರ್ವ ಕಾಲಕ್ಕೂ ಸ್ಮರಣೀಯ ಎಂದು ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.ಪಟ್ಟಣದ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಸಭಾಗೃಹದಲ್ಲಿ ಆಯೋಜಿಸಿದ್ದ ದಿ.ಅಪ್ಪಣಗೌಡ ಪಾಟೀಲರ ೫೧ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಹಕಾರಿ ಪದಕ್ಕೆ ಅನ್ವರ್ಥನಾಮ ಎಂಬಂತೆ ಎಲ್ಲರಿಗೂ ಬೇಕಾದವರಾಗಿ ಬಾಳಿ ಬದುಕಿದ ಅಪ್ಪಣಗೌಡರು ಅಪರೂಪದ ನಾಯಕರಾಗಿದ್ದರು, ಅಜಾತ ಶತ್ರುವಾಗಿದ್ದರು. ಈ ಭಾಗದ ರೈತರ, ಜನ ಸಾಮಾನ್ಯರ ಮನೆಗಳಲ್ಲಿ ಅವರ ಫೋಟೋಗಳು ಪೂಜಿಸಲ್ಪಡುತ್ತಿರುವುದರ ಹಿಂದೆ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಯೇ ಅಡಗಿದೆ ಎಂದರು. ಕ್ಯಾರಗುಡ್ಡ ಅವಜೀಕರ ಆಶ್ರಮದ ಶ್ರೀ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ಹಿರಾಶುಗರ್ ಕಾರ್ಖಾನೆ ಸ್ಥಾಪನೆ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ದಿ.ಅಪ್ಪಣಗೌಡ ಪಾಟೀಲರು ಶ್ರೇಷ್ಟ ಸಹಕಾರಿಯಷ್ಟೇ ಅಲ್ಲದೇ ಸ್ವಾತಂತ್ರ್ಯಕ್ಕೆ ಸೇನಾನಿಯಾಗಿ, ಶಿಕ್ಷಣಕ್ಕೆ ಕಣ್ಮಣಿಯಾಗಿ, ಕರ್ನಾಟಕ ಏಕೀಕರಣ ಚಳುವಳಿಯ ಮೂಲಕ ಕನ್ನಡ ಸೇವಕರಾಗಿ ನಾಡಿಗೆ ನೀಡಿದ ಕೊಡುಗೆ ಅನನ್ಯ ಎಂದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಈ ಮಹಾನ್ ಚೇತನ ಪ್ರತಿರೋಧ ತಂತ್ರಗಳ ಮೂಲಕ ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿದ್ದಲ್ಲದೇ ಸ್ವಾತಂತ್ರ್ಯಾನಂತರವೂ ಬ್ರಿಟಿಷರ ಗೂಡಾಗಿದ್ದ ಗೋವಾದಲ್ಲಿ ೧೯೪೮ರಲ್ಲಿ ತ್ರಿವರ್ಣ ಧ್ವಜ ಹಾರಾಟಕ್ಕೆ ತಾಲೂಕಿನಿಂದ ಇವರ ಹೆಜ್ಜೆಯೂ ಕಾರಣವಾಯಿತು. ತಮ್ಮ ಸೇವೆಯನ್ನು ಸೀಮಿತಗೊಳಿಸಿಕೊಳ್ಳದ ಈ ನಾಯಕ ಪ್ರತಿ ಕ್ಷೇತ್ರದಲ್ಲಿ ಅಚ್ಚಳಿಯದ ಗುರುತು ಮೂಡಿಸಿ ಸರ್ವವಿಧದಲ್ಲಿಯೂ ನಮ್ಮನೆಲ್ಲ ಆವರಿಸಿಕೊಂಡಿದ್ದಾರೆ. ಅಚ್ಚುಕಟ್ಟಾದ ಬದುಕಿನೊಂದಿಗೆ ಸ್ವಚ್ಛ ಸಂದೇಶ ನೀಡಿದ ಈ ಮಹಾನ ಚೇತನದ ಪುಣ್ಯಸ್ಮರಣೆಯೇ ನಮಗೆ ಉಸಿರು, ಬದುಕು ಎಂದು ವಿವರಿಸಿದರು.
ಕಾರ್ಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಮೂಲಕ ಸೆರೆಮನೆ ವಾಸವನ್ನೂ ಅನುಭವಿಸಿದ್ದ ದಿ. ಅಪ್ಪಣಗೌಡ ಪಾಟೀಲರು ಈ ಭಾಗದ ಜನರ ಏಳಿಗೆಗಾಗಿ ಸ್ಥಾಪಿಸಿದ್ದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ, ಎಸ್.ಡಿ.ವಿ.ಎಸ್ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ಪ್ರಗತಿಯತ್ತ ಮುನ್ನಡೆಯುತ್ತಿವೆ ಎಂದರು.ಕಾರ್ಖಾನೆ ಹಂತ, ಹಂತವಾಗಿ ಬೆಳೆದು ಇಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ದಂಪತಿ ಮಾರ್ಗದರ್ಶನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿದಿನ ೧೦,೦೦೦ ಮೆ.ಟನ್ ಕಬ್ಬು ನುರಿಸುವ ಸಾಮರ್ಥ್ಯ ಸಾಧಿಸಿದ್ದು, ೫೨ ಮೆ.ವ್ಯಾಟ್ ಸಹ ವಿದ್ಯುತ್ ಘಟಕ ಕಾರ್ಯಾಚರಣೆಯಲ್ಲಿದೆ. ೫೪ ಕೆ.ಎಲ್.ಪಿ.ಡಿ ಇದ್ದ ಡಿಸ್ಟಿಲರಿ ಘಟಕದ ಸಾಮರ್ಥ್ಯವನ್ನು ೧೫೦ ಕೆ.ಎಲ್.ಪಿ.ಡಿಗೆ ವಿಸ್ತರಿಸಿ ಹೊಸ ಇಥೆನಾಲ್ ಘಟನೆ ಸ್ಥಾಪಿಸಲಾಗಿದೆ. ರೈತರಿಗೆ ಸಕ್ಕರೆ ವಿತರಿಸಿದ್ದು ಪ್ರತಿ ಟನ್‌ಗೆ ₹೧೦೦೦ ದರದಂತೆ ಕಾಂಪೋಸ್ಟ್ ಗೊಬ್ಬರ ವಿತರಿಸಲಾಗುತ್ತಿದೆ. ಅಪಘಾತ ವಿಮೆ, ಸಮವಸ್ತ್ರ, ೭ನೇ ವೇತನ, ಬೋನಸ್ ನೀಡುವುದರೊಂದಿಗೆ ಕಾರ್ಮಿಕ ಸ್ನೇಹಿಯಾಗಿಯೂ ನಡೆದುಕೊಳ್ಳಲಾಗಿದೆ. ಈ ಎಲ್ಲ ಕ್ರಾಂತಿಕಾರಿ ನಿರ್ಧಾರ, ಸೇವೆಗಳಿಗೆ ಕಾರ್ಖಾನೆಯ ನಿರ್ಮಾತೃ ದಿ.ಅಪ್ಪಣಗೌಡ ಪಾಟೀಲ ಅವರ ಪ್ರೇರಕ ಶಕ್ತಿಯೇ ಕಾರಣ ಎಂದರು.
ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಕಾರಖಾನೆಯ ಕಾರ್ಮಿಕರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಮಾಜಿ ಸಚಿವ ಶಶಿಕಾಂತ ನಾಯಿಕ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ಶಿವನಾಯಿಕ ನಾಯಿಕ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಸುರೇಂದ್ರ ದೊಡ್ಡಲಿಂಗನವರ, ಬಸ್ಸಪ್ಪಾ ಮರಡಿ, ಮಲ್ಲಿಕಾರ್ಜುನ ಪಾಟೀಲ, ಸುರೇಶ ರಾಯಮಾನೆ, ಶಾರದಾ ಪಾಟೀಲ, ಮುಖಂಡರಾದ ಪವನ ಪಾಟೀಲ, ಮುಕಬುಲ ಮುಲ್ಲಾ, ಬಸಗೌಡ ಮಗೆನ್ನವರ, ಎನ್.ಬಿ. ಪಾಟೀಲ, ಬಾಬಾಸಾಹೇಬ ಪಾಟೀಲ, ಈರಗೌಡ ಪಾಟೀಲ, ಕಾರಖಾನೆ ಜನರಲ್ ಮ್ಯಾನೇಜರ್ ವೀರನಗೌಡ ದೇಸಾಯಿ, ಆಡಳಿತ ಅಧಿಕಾರಿ ರವೀಂದ್ರ ಚೌಗಲಾ, ಕಾರ್ಯಾಲಯ ಅಧೀಕ್ಷಕ ಪ್ರಭು ಡಬ್ಬನ್ನವರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಸ್ವಾಗತಿಸಿದರು. ಮಹಾನಿಂಗ ಹಂಜಿ ವಂದಿಸಿದರು. ಮನೋಜ ಹಲಗೆ ನಿರೂಪಿಸಿದರು.ಭವಿಷ್ಯದ ಪೀಳಿಗೆಗೆ ಸಹಕಾರ ಮಹರ್ಷಿ ದಿ.ಅಪ್ಪಣಗೌಡ ಪಾಟೀಲರ ಬಗ್ಗೆ ತಿಳಿದುಕೊಳ್ಳಲು ಪ್ರಬಂಧ ಸ್ಪರ್ಧೆ ಸೂಕ್ತವಾಗಿದ್ದು, ಬರುವ ದಿನಗಳಲ್ಲಿ ಆಯೋಜಕರು ಇದನ್ನು ಅಳವಡಿಸಿಕೊಳ್ಳಬೇಕು.
-ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ,
ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ.