ದೊಡ್ಡಬಳ್ಳಾಪುರ: ಬಿಡದಿ ಬಳಿ ಅಮಾನುಷವಾಗಿ ಕೊಲೆಯಾದ ಬಾಲಕಿ ಮತ್ತು ಕೆ.ಆರ್.ಪೇಟೆ ಬಳಿ ಸಜೀವ ದಹನವಾದ ಜಯಕುಮಾರ್ ಸಾವಿಗೆ ಕಾರಣವಾದವರನ್ನು ಗಲ್ಲಿಗೆ ಏರಿಸಬೇಕು ಎಂದು ಪ್ರಜಾ ವಿಮೋಚನಾ ಸಮಿತಿಯ ರಾಜ್ಯಾಧ್ಯಕ್ಷ ಜೈ ಭೀಮ್ ಮದುರೆ ಒತ್ತಾಯಿಸಿದರು.
ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಭದ್ರಾಪುರ ಗ್ರಾಮದ ವಾಸಿ ಹಕ್ಕಿ ಪಿಕ್ಕಿ ಜನಾಂಗದ 14 ವರ್ಷದ ಬಾಲಕಿ ಖುಷಿಯ ಶವ ರೈಲ್ವೆ ಹಳಿಯ ಪಕ್ಕದ ಹಳ್ಳದಲ್ಲಿ ಪತ್ತೆಯಾಗಿತ್ತು. ದಿವ್ಯಾಂಗ ಬಾಲಕಿ ಖುಷಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಭೀಕರವಾಗಿ ಕೊಲೆ ಮಾಡಲಾಗಿದೆ ಎಂಬ ಸಂಶಯವಿದೆ. ಆದರೆ, ಈ ವೇಳೆ ಸ್ಥಳಕ್ಕೆ ಬಂದ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಗೂಂಡಾಗಳಂತೆ ವರ್ತಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಜೊತೆಗೆ ಬಾಲಕಿ ಮೇಲೆ ಅತ್ಯಾಚಾರವಾಗಿಲ್ಲ, ರೈಲು ಅಪಘಾತದಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಬಲವಂತವಾಗಿ ಬಾಲಕಿ ಶವವನ್ನು ಸುಟ್ಟ ಕಾರಣವಾದರೂ ಏನು ? ಇದು ಸಾಕ್ಷ್ಯ ನಾಶ ಮಾಡುವ ಮೂಲಕ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂಬ ಆರೋಪಗಳಿಗೆ ಪುಷ್ಠಿ ನೀಡುವುದಿಲ್ಲವೆ ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆ ಸವರ್ಣೀಯರ ಕಿರುಕುಳಕ್ಕೆ ದಲಿತ ಯುವಕ ಜಯಕುಮಾರ್ ಜೀವಂತ ದಹನವಾಗಿದ್ದಾನೆ. ಆದರೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಹಬ್ಬಿಸಲಾಗಿದೆ. ಈ ಎರಡೂ ಅಮಾನವೀಯ ಘಟನೆಗಳಲ್ಲಿ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಸೂಕ್ತ ತನಿಖೆ ನಡೆಸುವಂತೆ ಆದೇಶ ಮಾಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಸಂಘಟನೆಯ ಮಹಿಳಾ ಘಟಕ ಅಧ್ಯಕ್ಷೆ ಸೋನಿಯಾ, ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ, ಜಿಲ್ಲಾಧ್ಯಕ್ಷ ಅಶೋಕ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಯಲಹಂಕ ಅಧ್ಯಕ್ಷ ರಾಜು, ಸಿಪಿಐ(ಎಂ) ಮುಖಂಡ ಆರ್.ಚಂದ್ರತೇಜಸ್ವಿ, ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವನಾಯಕ್, ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ತಾಲೂಕು ಅಧ್ಯಕ್ಷ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.24ಕೆಡಿಬಿಪಿ1-
ದೊಡ್ಡಬಳ್ಳಾಪುರ ತಾಲೂಕು ಕಚೇರಿ ವೃತ್ತದಲ್ಲಿ ಪ್ರಜಾ ವಿಮೋಚನಾ ಚಳವಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.