ಮಲೆನಾಡಿಗರ ಉಳಿಸಿ ಜನಜಾಗೃತಿ ಯಾತ್ರೆಯಲ್ಲಿ ರಂಜಿತ್ ಕಲ್ಕಟ್ಟೆ
ಒಂದೆಡೆ ಅಡಕೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಕೊಳೆ ರೋಗ,ಅತಿವೃಷ್ಠಿ, ಬೆಳೆಹಾನಿಯಿಂದ ರೈತರು ಕಂಗೆಟ್ಟಿದ್ದರೆ ಇನ್ನೊಂದೆಡೆ ಸರ್ಕಾರಗಳ ಜನವಿರೋಧಿ ಕಾಯ್ದೆ ಮರಣಶಾಸನವಾಗಿದ್ದು, ಕಾಡು ಪ್ರಾಣಿಗಳು ದಾಳಿಮಾಡಿ ಬೆಳೆ ನಾಶ, ಜನಸಾಮಾನ್ಯರ ಜೀವಬಲಿ ಪಡೆಯುತ್ತಿದೆ. ಮಲೆನಾಡಿಗರ ಬದುಕು ಶೋಚನೀಯವಾಗಿದೆ ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ರಂಜಿತ್ ಕಲ್ಕಟ್ಟೆ ಹೇಳಿದರು.
ಮರ್ಕಲ್ ಪಂಚಾಯಿತಿ ಕಿಗ್ಗಾದಲ್ಲಿ ನಡೆದ ಮಲೆನಾಡಿಗರ ಉಳಿಸಿ ಜನಜಾಗೃತಿ ಯಾತ್ರೆ ಉದ್ದೇಶಿಸಿ ಮಾತನಾಡಿ, ಬದುಕಿಗಾಗಿ ಕೃಷಿ ಮಾಡುತ್ತಿರುವ ರೈತರ ಜಮೀನನ್ನು ಅರಣ್ಯ ಕಾಯ್ದೆ, ಒತ್ತುವರಿ ಹೆಸರಲ್ಲಿ ಕಿತ್ತುಕೊಂಡು ಬೀದಿಪಾಲು ಮಾಡಲಾಗುತ್ತಿದೆ. ಸೆಕ್ಷನ್ 4(1) ಇಡೀ ಮಲೆನಾಡನ್ನು ನುಂಗುತ್ತಿದೆ. ಜನಸಾಮಾನ್ಯರು ಬದುಕಿಗೆ ಕಟ್ಟಿಕೊಂಡ ಮನೆಗಳನ್ನು ಕಿತ್ತುಹಾಕಲಾಗುತ್ತಿದೆ. ನಮ್ಮ ನೆಲ, ನಮ್ಮ ಬದುಕು,ನಮ್ಮ ಹಕ್ಕು.ಜನಸಾಮಾನ್ಯರು ಎಲ್ಲಿಗೆ ಹೋಗಬೇಕು.ಕುದುರೆಮುಖ ರಾಷ್ಟ್ರೀಯ ಉದ್ನಾನವನ, ಹುಲಿಯೋಜನೆ, ಕಸ್ತೂರಿ ರಂಗನ್ ವರದಿ, ಸೆಕ್ಷನ್ 4(1) ಹೀಗೆ ಹತ್ತಾರು ಕಾಯ್ದೆ ಗಳನ್ನು ಜಾರಿಗೊಳಿಸಲಾಗಿದೆ. ಮೊದಲೇ ಸಂಕಷ್ಟದಲ್ಲಿರುವ ರೈತರು, ಜನಸಾಮಾನ್ಯರಿಗೆ ಈ ಯೋಜನೆಗಳು ಮರಣ ಶಾಸನ ಗಳಾಗಿವೆ. ಕೆರೆಕಟ್ಟೆ, ಕಿಗ್ಗಾ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದು ಅಡಕೆ, ಕಾಫಿ ತೋಟಗಳು ನಾಶ ವಾಗುತ್ತಿವೆ. ಇತ್ತೀಚೆಗೆ ಆನೆ ದಾಳಿಗೆ ಎರಡು ಜೀವಬಲಿಗಳು ಕೂಡ ಆಗಿದೆ. ಸರ್ಕಾರದ ಮರಣಶಾಸನಗಳು, ಕಾಡು ಪ್ರಾಣಿಗಳ ಹಾವಳಿಯಿಂದ ಜನಸಾಮಾನ್ಯರು ದಿನೇ ದಿನೇ ಸಂಕಷ್ಟಕ್ಕೆಒಳಗಾಗುತ್ತಿದ್ದಾರೆ.
ನಾವು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಇನ್ನು ಉಳಿಗಾಲವಿಲ್ಲ. ಯಾವುದೇ ರಾಜಕೀಯ ಉದ್ದೇಶವಿಲ್ಲದೇ ಮಲೆನಾಡಿಗರ ಬದುಕನ್ನು ಉಳಿಸುವ ನಿಟ್ಟಿನಲ್ಲಿ ಈ ಜನಜಾಗೃತಿ ಯಾತ್ರೆ ಆರಂಬಿಸಲಾಗಿದೆ. ಮಲೆನಾಡಿಗರು ಒಗ್ಗಟ್ಟಾಡಿ ತಮ್ಮ ಹಕ್ಕಿಗಾಗಿ ಹೋರಾಡಬೇಕಿದೆ ಎಂದರುಸಮಿತಿಯ ಆದರ್ಶ, ಅಶ್ವಿನ್, ಸುಭಾಷ್, ಕಿರಣ್, ಸಚಿನ್, ಸಂತೋಷ್, ಅನಿರುದ್ದ್, ನೂತನ್, ರಾಜ ಕುಮಾರ್ ಮತ್ತಿತರರು ಇದ್ದರು,
16 ಶ್ರೀ ಚಿತ್ರ 1-ಶಂಗೇರಿ ಕಿಗ್ಗಾದಲ್ಲಿ ಮಲೆನಾಡಿಗರ ಉಳಿಸಿ-ಜನಜಾಗೃತಿ ಯಾತ್ರೆ ನಡೆಯಿತು.