ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಶ್ರೀರಂಗಪಟ್ಟಣದಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ಮಾಡಿದ್ದೇನೆ. ನಾನು ಸಾವಿರ ಸಿನಿಮಾಗಳಲ್ಲಿ ನಟಿಸಿದ್ದರೆ, ಅವುಗಳಲ್ಲಿ ಸುಮಾರು 700 ಸಿನಿಮಾಗಳ ಚಿತ್ರೀಕರಣವನ್ನು ಶ್ರೀರಂಗಪಟ್ಟಣದಲ್ಲಿಯೇ ಮಾಡಿಸುತ್ತಾರೆ ಎಂಬಷ್ಟು ಈ ಊರಿನೊಂದಿಗೆ ನಂಟು ಬೆಸೆದುಕೊಂಡಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ದಸರಾ ಜಂಬೂ ಸವಾರಿ ಉದ್ಘಾಟನೆಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಮ್ಮ ಮನೆಗೆ ಆಹ್ವಾನ ನೀಡಲು ಬಂದಿದ್ದಾಗ ನನ್ನ ಪತ್ನಿ ಅವರಿಗೆ ತಿಂಡಿ ನೀಡಿದ್ದರು. ಬಳಿಕ ಶಾಸಕ ರಮೇಶ್ ಬಂಡಿಸಿದ್ದೇಗೌಡರು ತಮ್ಮ ಪತ್ನಿಗೆ ಸೀರೆ ನೀಡಿದರು. ಅದು ಆಕೆಗೆ ಮರೆಯಲಾಗದ ನೆನಪಾಗಿದೆ ಎಂದು ಸಂತಸ ಹಂಚಿಕೊಂಡರು.ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಿಗೆ ಬಾರದ ನನ್ನ ಪತ್ನಿ ಶ್ರೀರಂಗಪಟ್ಟಣದ ಕಾರ್ಯಕ್ರಮವನ್ನು ನೋಡಿ ನಾನೂ ಬರಬೇಕಿತ್ತು ಎಂದು ಬಯಸಿದ್ದಳು. ಇಲ್ಲಿನ ಜನರ ಪ್ರೀತಿ ಮತ್ತು ಆತ್ಮೀಯತೆ ಅಷ್ಟೊಂದು ವಿಶೇಷವಾಗಿದೆ ಎಂದು ಸ್ಮರಿಸಿದರು.
ನಾನು ನನ್ನ ತಂದೆ-ತಾಯಿಯನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಸತ್ತವರು ನಿಜವಾಗಿ ಸಾಯುವುದಿಲ್ಲ. ನಾವು ಅವರನ್ನು ಮರೆತಾಗ ಮಾತ್ರ ಅವರು ಸತ್ತಂತಾಗುತ್ತಾರೆ ಎಂಬ ಮಾತು ಜೀವನದ ಮಹತ್ವವನ್ನು ಸಾರುತ್ತದೆ ಎಂದು ಭಾವುಕರಾದರು.
ಮನೆಯಲ್ಲಿ ಹೆಣ್ಣು ಮಗಳು ಸಂತೋಷವಾಗಿದ್ದರೆ ಇಡೀ ಮನೆಯೇ ಸಂತೋಷವಾಗಿರುತ್ತದೆ. ಇಂದು ದಸರಾ ಆಚರಣೆಯಿಂದ ಚಾಮುಂಡಿ ದೇವಿಯೂ ಸಂತೋಷಗೊಂಡಿದ್ದಾಳೆ. ಅದಕ್ಕಾಗಿಯೇ ಇಲ್ಲಿ ಮಳೆ ಬರುತ್ತಿದೆ ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತಿದ್ದಂತೆ ಮಳೆ ಆರಂಭವಾಯಿತು. ಒಂದೆಡೆ ಸಂಗೀತ ಸುಧೆಯ ರಸದೌತಣ, ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿದ್ದ ಮಳೆ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.