ಬಯಲು ಬಹಿರ್ದೆಸೆ ತಾಣವಾದ ಕುಷ್ಟಗಿಯ ಪ್ರಮುಖ ರಸ್ತೆ

KannadaprabhaNewsNetwork |  
Published : Apr 28, 2025, 12:51 AM IST
ಪೋಟೊ27ಕೆಎಸಟಿ1: ಕುಷ್ಟಗಿ ಪುರಸಭೆ ಪಕ್ಕದಲ್ಲಿರುವ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಬರುತ್ತಿರುವ ಗರ್ಭೀಣಿ ಮಹಿಳೆಯರು. ಲೋಕೊಪಯೋಗಿ ವಸತಿ ಗೃಹಗಳ ಪಕ್ಕದಲ್ಲಿ ಬಿದ್ದಿರುವ ಕಸದ ರಾಶಿ. ಚರಂಡಿಯಲ್ಲಿ ತುಂಬಿ ತುಳಕಾಡುತ್ತಿರುವ ತ್ಯಾಜ್ಯ. | Kannada Prabha

ಸಾರಾಂಶ

ಈ ಮೂರು ಇಲಾಖೆಗಳ ಮಧ್ಯದಲ್ಲಿ ಇರುವ ಈ ರಸ್ತೆಯು ಬಯಲು ಬಹಿರ್ದೆಸೆಯ ತಾಣವಾಗಿ ಮಾರ್ಪಟ್ಟಿದೆ. ಅಬಾಲವೃದ್ಧರಾಗಿ ಎಲ್ಲರೂ ಮಲ-ಮೂತ್ರ ವಿಸರ್ಜನೆಯ ತಾಣ ಮಾಡಿಕೊಂಡಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ನಗರದ ಪುರಸಭೆ ಪಕ್ಕದಲ್ಲಿರುವ ಪ್ರಮುಖ ರಸ್ತೆಯು ಬಯಲು ಬಹಿರ್ದೆಸೆಯ ತಾಣವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಪ್ರಮುಖ ರಸ್ತೆಯಾಗಿದ್ದರೂ ಅಭಿವೃದ್ಧಿಗೆ ಪುರಸಭೆ ಅಧಿಕಾರಿಗಳು ಮುಂದಾಗಿಲ್ಲ. ಈ ರಸ್ತೆ ಅಕ್ಕ-ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆಯ ವಸತಿಗೃಹ, ಸಾರ್ವಜನಿಕ ಆಸ್ಪತ್ರೆಯ ವಸತಿಗೃಹ, ಪುರಸಭೆಯ ಕಾರ್ಯಾಲಯ ಇದ್ದರೂ ರಸ್ತೆಯ ಅಭಿವೃದ್ಧಿ ಕುರಿತು ಚಿಂತನೆ ನಡೆಸದೆ ಇರುವುದು ವಿಪರ್ಯಾಸದ ಸಂಗತಿ.

ಬಹಿರ್ದೆಸೆಯ ತಾಣ:

ಈ ಮೂರು ಇಲಾಖೆಗಳ ಮಧ್ಯದಲ್ಲಿ ಇರುವ ಈ ರಸ್ತೆಯು ಬಯಲು ಬಹಿರ್ದೆಸೆಯ ತಾಣವಾಗಿ ಮಾರ್ಪಟ್ಟಿದೆ. ಅಬಾಲವೃದ್ಧರಾಗಿ ಎಲ್ಲರೂ ಮಲ-ಮೂತ್ರ ವಿಸರ್ಜನೆಯ ತಾಣ ಮಾಡಿಕೊಂಡಿದ್ದಾರೆ. ಈ ರಸ್ತೆ ಮೂಲಕ ಬರುವ ಆಸ್ಪತ್ರೆಗೆ ಬರುವ ಗರ್ಭಿಣಿಯರು, ಮಕ್ಕಳು, ಸಾರ್ವಜನಿಕರು ದುರ್ನಾತ ಸಹಿಸಿಕೊಳ್ಳಲು ಆಗದೆ ಮೂಗುಮುಚ್ಚಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ.

ಚರಂಡಿ ಭರ್ತಿ:

ಈ ರಸ್ತೆ ಬದಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲಾಗಿದೆ. ಅದರಲ್ಲಿ ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ಮೇಲೆ ಹರಿಯುತ್ತಿದೆ. ಪ್ಲಾಸ್ಟಿಕ್‌, ಆಸ್ಪತ್ರೆಯಲ್ಲಿ ಉಪಯೋಗಿಸಿದ ಕೆಲವು ವೈದ್ಯಕೀಯ ತ್ಯಾಜ್ಯ, ಲೋಕೋಪಯೋಗಿ ವಸತಿಗೃಹದಲ್ಲಿ ಬಳಸಿರುವ ಅನವಶ್ಯಕ ವಸ್ತು, ಸಾರ್ವಜನಿಕರು ತ್ಯಾಜ್ಯ ತಂದು ಚರಂಡಿಯಲ್ಲಿ ಹಾಕುತ್ತಿದ್ದಾರೆ. ಇದರ ಪರಿಣಾಮ ಚರಂಡಿ ಬ್ಲಾಕ್‌ ಆಗಿ ನೀರು ಹರಿದು ಹೋಗುತ್ತಿಲ್ಲ.

ಈ ರಸ್ತೆಯತ್ತ ಚಿತ್ತ ಹರಿಸಿ:

ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ ಹಾಗೂ ಮುಖ್ಯಾಧಿಕಾರಿ ಸುರೇಶ ಶೆಟ್ಟರ್‌ ಈ ರಸ್ತೆಯತ್ತ ಚಿತ್ತ ಹರಿಸಬೇಕು. ಇಲ್ಲಿಯ ಜನರು ಅನುಭವಿಸುತ್ತಿರುವ ಯಾತನೆ ನಿವಾರಿಸಬೇಕು. ಸಾರ್ವಜನಿಕ ಶೌಚಾಲಯ ನಿರ್ಮಿಸುವ ಮೂಲಕ ಬಯಲು ಬಹಿರ್ದೆಸೆ ತಡೆಗಟ್ಟಬೇಕು. ಈ ರಸ್ತೆಯಲ್ಲಿರುವ ತ್ಯಾಜ್ಯ ತೆಗೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದೇ ರಸ್ತೆಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಆದರೆ, ಇಲ್ಲಿನ ದುರ್ನಾತ ಸಹಿಸಿಕೊಳ್ಳಲು ಆಗುತ್ತಿಲ್ಲ. ಸ್ವಚ್ಛ ಭಾರತದ ಮಾತು ಪಟ್ಟಣದಲ್ಲಿ ಹೆಸರಿಗೆ ಮಾತ್ರ ಎನ್ನುವಂತೆ ಆಗಿದೆ ಎಂದು ಶಿವರಾಜ ತಟ್ಟಿ ಹೇಳಿದ್ದಾರೆ.ಪುರಸಭೆ ಪಕ್ಕದಲ್ಲಿರುವ ರಸ್ತೆ ಅಭಿವೃದ್ಧಿ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು.

ಸುರೇಶ ಶೆಟ್ಟಿ. ಪ್ರಭಾರಿ ಮುಖ್ಯಾಧಿಕಾರಿ ಪುರಸಭೆ ಬಯಲು ಬಹಿರ್ದೆಸೆ ಮಾಡದಂತೆ ಜನರಿಗೆ ಜಾಗೃತಿ ಮೂಡಿಸಬೇಕಾಗದ ಪುರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡದೆ ಇರುವುದರಿಂದ ದುರ್ನಾತ ಬೀರುತ್ತಿದೆ. ಇನ್ನಾದರೂ ಪುರಸಭೆ ಇತ್ತ ಗಮನ ಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.

ಪರಶುರಾಮ ಬೋದೂರ ಸಂಘಟನೆಗಾರ

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ